ಸಾಗರ: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಹಾಗೂ ನಗರ ಆಡಳಿತ ಸೂಕ್ತ ಕ್ರಮ ಜರುಗಿಸುವಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮನವಿ ಮಾಡಿದ್ದಾರೆ.
ಶನಿವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದ ಅವರು, ನಗರವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆಯೊಳಗೆ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗುವಂತಾಗಿದೆ ಎಂದರು.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲು ಮೈಕ್ ಮೂಲಕ ಪ್ರಚಾರ ಮಾಡಿ. ನಗರವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಜನಜಾಗೃತಿ ಸಭೆ ನಡೆಸಿ ಜನರಿಗೆ ಮುಂಜಾಗೃತಾ ಕ್ರಮದ ಬಗ್ಗೆ ಅರಿವು ಮೂಡಿಸಿ. ನಗರದ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ, ನಗರಕ್ಕೆ ಪ್ರವೇಶ ಮಾಡುವವರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ, ವಾಹನಗಳಿಗೆ ಸ್ಯಾನಿಟೈಜ್ ಮಾಡಿ ಒಳಗೆ ಬಿಡುವಂತೆ ನಿಗಾವಹಿಸಿ. ಈ ಬಗ್ಗೆ ಜಿಲ್ಲಾ ಧಿಕಾರಿಗಳೊಂದಿಗೂ ಮಾತನಾಡುವೆ ಎಂದು ಹೇಳಿದರು.
ನಗರದ 31 ವಾರ್ಡ್‌ಗಳಲ್ಲೂ ಔಷಧ ಸಿಂಪಡಣೆ ಮಾಡಲು ನಗರಸಭೆಗೆ ಸೂಚನೆ ನೀಡಬೇಕು. ಸೀಲ್‌ಡೌನ್ ಮಾಡಿರುವ ಪ್ರದೇಶದಲ್ಲಿ ಜನರು ಎಚ್ಚರಿಕೆಯಿಂದ ಇರಲು ತಿಳಿಸಬೇಕು. ಕೋವಿಡ್ ಇನ್ನಷ್ಟು ಹೆಚ್ಚದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲೆ ಇದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಎಚ್.ಎಂ. ರವಿಕುಮಾರ್, ಕಾಂಗ್ರೇಸ್ ನಗರ ಘಟಕದ ಅಧ್ಯಕ್ಷ ಐ.ಎನ್. ಸುರೇಶಬಾಬು, ಪ್ರಧಾನ ಕಾರ್ಯದರ್ಶಿ ಮಹಾಬಲ ಕೌತಿ, ಪ್ರವೀಣ ಬಣಕಾರ್, ಬಾಬಣ್ಣ, ತಾರಾಮೂರ್ತಿ, ತಬರೀಜ್, ಕಬೀರ್ ಚಿಳ್ಳಿ, ಜಯರಾಮ್ ಇನ್ನಿತರರು ಹಾಜರಿದ್ದರು.