ಸಾಗರ: ನಗರ ಕಾಂಗ್ರೆಸ್ ವತಿಯಿಂದ ಬುಧವಾರ ಉಪ ವಿಭಾಗೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಕಾಶ್ ಬೋಸ್ಲೆ ಕೆ.ಆರ್. ಜನಪ್ರತಿನಿಧಿಗಳಿಗೆ ಅಗೌರವ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಬೋಸ್ಲೆ ಹಠಾವೋ-ಆಸ್ಪತ್ರೆ ಬಚಾವೋ ಚಳುವಳಿ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ಈಚೆಗೆ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರು ಉಪವಿಭಾಗೀಯ ಆಸ್ಪತ್ರೆಗೆ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವ ಸಂಬಂಧ ಮಾತನಾಡಲು ಹೋಗಿದ್ದಾಗ ಬೋಸ್ಲೆ ತಮ್ಮ ಸ್ಥಾನದ ಘನತೆಯನ್ನು ಮರೆತು ಓರ್ವ ತಾಪಂ ಅಧ್ಯಕ್ಷರಿಗೆ ಕನಿಷ್ಟ ಗೌರವ ನೀಡಿಲ್ಲ. ಬದಲಾಗಿ ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನಗರ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ದೂರಿದರು.
ಘಟನೆಗೆ ಸಂಬಂಧಪಟ್ಟಂತೆ ಮಂಗಳವಾರ ಉಪವಿಭಾಗಾಧಿಕಾರಿಗಳು ಮಲ್ಲಿಕಾರ್ಜುನ ಹಕ್ರೆ ಮತ್ತು ಡಾ| ಪ್ರಕಾಶ್ ಬೋಸ್ಲೆ ಅವರನ್ನು ಕರೆದು ರಾಜಿ ಮಾಡಿಸಿ, ಸೌಹಾರ್ದದಿಂದ ನಡೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಆದರೆ ಪ್ರಕಾಶ್ ಬೋಸ್ಲೆಯವರು ದ್ವೇಷದ ಸ್ಥಿತಿ ನಿರ್ಮಾಣ ಮಾಡುವ ಉದ್ದೇಶದಿಂದ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಮಲ್ಲಿಕಾರ್ಜುನ ಹಕ್ರೆ ಅವರ ಮೇಲೆ ಜಾಮೀನುರಹಿತವಾಗಿ ಬಂಧಿಸುವ ಸೆಕ್ಷನ್ ಹಾಕಿದ್ದಾರೆ. ಪ್ರಾಂತ್ಯಾಧಿಕಾರಿಗಳ ನಿರ್ದೇಶನ ಮೀರಿ ಡಾ|ಪ್ರಕಾಶ್ ಬೋಸ್ಲೆ ನಡೆದುಕೊಂಡಿರುವುದು ಖಂಡನೀಯ ಎಂದರು.
ಡಾ| ಪ್ರಕಾಶ್ ಬೋಸ್ಲೆ ಅವರ ಸುಳ್ಳು ದೂರನ್ನು ಇರಿಸಿಕೊಂಡು ಪೊಲೀಸರು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರನ್ನು ಬಂಧಿಸಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತದೆ. ಇದರಿಂದ ಪ್ರಾಮಾಣಿಕವಾಗಿ ಜನರ ಪರ ಕೆಲಸ ಮಾಡುವ ಜನಪ್ರತಿನಿಧಿಗಳ ಗೌರವ ಉಳಿಯುವುದಿಲ್ಲ. ಸರ್ಕಾರಿ ನೌಕರರು ನಮ್ಮನ್ನು ಆಳುವವರು ಎನ್ನುವ ಮನಸ್ಥಿತಿಯಿಂದ ಹೊರಗೆ ಬರಬೇಕು. ಮಲ್ಲಿಕಾರ್ಜುನ ಹಕ್ರೆ ಅವರು ಒಂದೊಮ್ಮೆ ಆವೇಶದಲ್ಲಿ ಮಾತನಾಡಿದರೆ ಸರ್ಕಾರಿ ಅಧಿಕಾರಿಯಾಗಿ ಬೋಸ್ಲೆಯವರು ವಾಸ್ತವಾಂಶ ತಿಳಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸುಳ್ಳು ದೂರು ನೀಡಿರುವುದು ಸರಿಯಲ್ಲ ಎಂದರು.
ಡಾ| ಪ್ರಕಾಶ್ ಬೋಸ್ಲೆ ನೀಡಿದ ದೂರಿನ ಆಧಾರದ ಮೇಲೆ ಎಎಸ್‌ಪಿ ಯತೀಶ್ ಅವರು ಮಲ್ಲಿಕಾರ್ಜುನ ಹಕ್ರೆಯವರನ್ನು ಬಂಧಿಸಿದರೆ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಜನಪ್ರತಿನಿಧಿಗಳ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ. ಜನಪ್ರತಿನಿಧಿಗಳಿಗೆ, ರೋಗಿಗಳಿಗೆ ಗೌರವ ಕೊಡದ ಪ್ರಕಾಶ್ ಬೋಸ್ಲೆಯವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ಪ್ರಮುಖರಾದ ಮಹಾಬಲ ಕೌತಿ, ರವಿ ಜಂಬೂರುಮನೆ, ತುಕಾರಾಮ ಶಿರವಾಳ, ಭರ್ಮಪ್ಪ ಅಂದಾಸುರ, ಎಚ್.ಎಂ. ರವಿಕುಮಾರ್, ಅಣ್ಣಪ್ಪ ಭೀಮನೇರಿ, ಕನ್ನಪ್ಪ ಮುಳಕೇರಿ, ದೂಗೂರು ಪರಮೇಶ್ವರ್, ತಾರಾಮೂರ್ತಿ ಇನ್ನಿತರರು ಇದ್ದರು.