ಸಾಗರ: ಶಿಶು ಸಾಹಿತ್ಯ ಎಲ್ಲ ಸಾಹಿತ್ಯಕ್ಕಿಂತ ಭಿನ್ನ ಹಾಗೂ ಕಠಿಣ. ಎಚ್.ಎಸ್. ವೆಂಕಟೇಶ್‌ಮೂರ್ತಿ, ಡಾ| ನಾ. ಡಿಸೋಜಾ, ಹಾ.ಸಾ. ಬ್ಯಾಕೋಡು ಮೊದಲಾದವರ ಕೊಡುಗೆಗಳ ಹೊರತಾಗಿ ಈ ದಿನಗಳಲ್ಲಿ ಮಕ್ಕಳ ಸಾಹಿತ್ಯದ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ಭಾಷೆಯ ಉಳಿವಿನ ಪ್ರಶ್ನೆ ಬಂದಾಗ ಮಕ್ಕಳ ಸಾಹಿತ್ಯದೆಡೆಗೆ ಒಲವು ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ತಾಲೂಕು ಐದನೇ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಗಾರ್ಗಿ ಸೃಷ್ಟೀಂದ್ರ ಬಂದಗದ್ದೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬ್ರಾಸಂ ಸಭಾಭವನದಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಈ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಅಧ್ಯಕ್ಷೆ ಸ್ಥಾನ ಸಿಕ್ಕಿದೆ ಎಂದ ಮಾತ್ರಕ್ಕೆ ಇದೇ ತರಹ ಅವಕಾಶಗಳು ನಾಡಿನ ಎಲ್ಲ ಕಡೆ ಹೆಣ್ಣು ಮಕ್ಕಳಿಗೆ ಸಿಕ್ಕುತ್ತಿದೆ ಎಂದು ಅರ್ಥವಲ್ಲ. ಹೆಣ್ಣು ಹಲವಾರು ರೀತಿಯಲ್ಲಿ ಅವಕಾಶ ವಂಚಿತಳಾಗಲು ಇಂದಿನ ಸಮಾಜದಲ್ಲಿ ಕಂಡುಬರುತ್ತಿರುವ ಸಂಸ್ಕಾರದ ಕೊರತೆ ಕಾರಣವಾಗಿದೆ. ಶಿಕ್ಷಣ ಪದ್ಧತಿಯೂ ಇದಕ್ಕೆ ತನ್ನ ಕೊಡುಗೆ ಕೊಟ್ಟಿದೆ. ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದಲೇ ತಂದೆ- ತಾಯಿಯರನ್ನು ನಿರ್ಲಕ್ಷಿಸಿ ಹೊರ ದೇಶಕ್ಕೆ ಪಲಾಯನ ಮಾಡುವ ಘಟನೆ ನಡೆಯುತ್ತಿದೆ. ಇದು ಕೃಷಿ ಕ್ಷೇತ್ರವನ್ನೂ ಬರಡು ಮಾಡಿದೆ ಎಂದು ಗಾರ್ಗಿ ಆತಂಕ ವ್ಯಕ್ತಪಡಿಸಿದರು.
ಜ್ಞಾನಕ್ಕಾಗಿ ಶಿಕ್ಷಣ ಎಂಬುದು ಮರೆಯಾಗಿ ಅಂಕಕ್ಕಾಗಿ ಶಿಕ್ಷಣ ಆಗಿರುವುದೇ, ಅಂಕ ಹೋರಾಟದಲ್ಲಿ ಸೋತ ಮಕ್ಕಳು ಆತ್ಮಹತ್ಯೆಯಂತ ಕೃತ್ಯಕ್ಕೆ ಈಡಾಗುವಂತಾಗಿದೆ. ಸಂಸ್ಕಾರಭರಿತ ಸಾಹಿತ್ಯದ ಅರಿವು ಶಿಕ್ಷಣದ ಮೂಲಕ ಆಗುವಂತಾಗಬೇಕು. ಭಾಷೆ ನಶಿಸುತ್ತಿದೆ ಎಂಬ ಧೋರಣೆಯ ಹಿನ್ನೆಲೆಯಲ್ಲಿ ಭಾಷೆಯನ್ನು ಉಳಿಸಲು ಕೇವಲ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು ಎಂಬ ನಿಲುವು ಸಮ್ಮತವಲ್ಲ. ಹೊರ ಜಗತ್ತಿನ ಜೊತೆ ಪೈಪೋಟಿ ನಡೆಸಲು, ವೃತ್ತಿಗಾಗಿ, ಜ್ಞಾನಕ್ಕಾಗಿ, ವ್ಯವಹಾರಕ್ಕಾಗಿ ಇತರ ಭಾಷೆಗಳು ಬೇಕು ಎಂದು ಪ್ರತಿಪಾದಿಸಿದರು.
ಗಣಿಗಾರಿಕೆ, ಅರಣ್ಯನಾಶ, ರಾಸಾಯನಿಕ ಸಿಂಪಡಣೆ, ಪ್ಲಾಸ್ಟಿಕ್ ಬಳಕೆ ಮೊದಲಾದ ಮಾನವನ ಸ್ವಾರ್ಥದಿಂದ ಭೂತಾಯಿಯನ್ನು ಹಿಂಸಿಸುತ್ತಿದ್ದೇವೆ. ಪ್ರಕೃತಿ ಪೂರ್ವಜರಿಂದ ನಾವು ಪಡೆದ ಸಾಲ. ಅದನ್ನು ಮುಂದಿನ ಪೀಳಿಗೆಗೆ ಬಡ್ಡಿ ಸಮೇತ ಕೊಡಬೇಕಾಗುತ್ತದೆ. ಪ್ರಕೃತಿಯನ್ನು ಉಳಿಸುವ ತುಡಿತದ ಪ್ರಶ್ನೆ ಎದುರಾಗುವಾಗ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ನಿದ್ದೆಗೆಡಿಸುತ್ತದೆ. ಹರಿಯುವ ನದಿಯ ಮೂಲ ಸ್ವಭಾವಕ್ಕೆ ವ್ಯತಿರಿಕ್ತವಾಗಿ ಅದನ್ನು ಸ್ವೇಚ್ಛೆಯಿಂದ ಬಳಸುವ ಅಧಿಕಾರ ನಮಗಿಲ್ಲ. ಪ್ರಕೃತಿಗೆ ಹಾನಿಯುಂಟು ಮಾಡುವ ಇಂತಹ ಅವೈಜ್ಞಾನಿಕ ಯೋಜನೆ ತಪ್ಪು ಎಂದು ಗಾರ್ಗಿ ಖಂಡನೆ ವ್ಯಕ್ತಪಡಿಸಿದರು.
ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದ ಭಾಷಾ ಸಂಪತ್ತನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಆದಿಕವಿ ಪಂಪನಿಂದ ಹಿಡಿದು ಕುವೆಂಪು, ಮಾಸ್ತಿ, ಬೇಂದ್ರೆಯಂತವರು ಕನ್ನಡ ಭಾಷಾ ಪರಂಪರೆಯನ್ನು ಬೆಳಗಿಸುವ ಕೆಲಸ ಮಾಡಿದ್ದಾರೆ. ದಾಸ ಸಾಹಿತ್ಯ, ವಚನ ಸಾಹಿತ್ಯ, ಭಕ್ತಿಪಂಥ ಹೀಗೆ ಅನೇಕ ದಾರಿಗಳು ಕನ್ನಡ ಭಾಷೆಯ ಮೂಲಕ ತೆರೆದುಕೊಂಡಿದೆ. ಇದರ ಜೊತೆಗೆ ಯಕ್ಷಗಾನ, ತಾಳಮದ್ದಲೆ, ಒಗಟು, ಗಾದೆಮಾತು, ದೊಡ್ಡಾಟ, ಸಣ್ಣಾಟ, ಬಯಲಾಟ, ಅಂಟಿಕೆ- ಪಿಂಟಿಕೆಯಂತಹ ಸಾಹಿತ್ಯಗಳು ಕನ್ನಡದ ಬೇರನ್ನು ಇನ್ನಷ್ಟು ಗಟ್ಟಿಗೊಳಿಸಿವೆ ಎಂದು ತಿಳಿಸಿದರು.