Advertisement

ಮಕ್ಕಳ ಸಾಹಿತ್ಯಕ್ಕೆ ಅಜ್ಜಿ-ಅಮ್ಮ ಹೇಳುವ ಕತೆಗಳೇ ಪ್ರೇರಣೆ

04:30 PM Jul 27, 2019 | Naveen |

ಸಾಗರ: ಮಕ್ಕಳ ಸಾಹಿತ್ಯಕ್ಕೆ ಮನೆಯಲ್ಲಿ ಅಜ್ಜಿ, ಅಮ್ಮ ಹೇಳುವ ಕತೆಗಳೇ ಪ್ರೇರಣೆ ಎಂದು ಕೃಷಿಕ ಹಾಗೂ ಮಕ್ಕಳ ಶಿಕ್ಷಣ ತಜ್ಞ ಕೆ.ಎಸ್‌. ಗೋಪಾಲಕೃಷ್ಣ ಹೇಳಿದರು.

Advertisement

ನಗರದ ಬ್ರಾಸಂ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕು 5ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

ಹಿಂದೆಲ್ಲ ಮನೆಯಲ್ಲಿರುವ ಅಜ್ಜಿಯರು ಮೊಮ್ಮಕ್ಕಳಿಗೆ ಕತೆ ಹೇಳಿ ಮಲಗಿಸುತ್ತಿದ್ದರು. ಅಜ್ಜಿ ಕತೆ ಕೇಳುವುದೆಂದರೆ ಮಕ್ಕಳಿಗೂ ಇಷ್ಟವಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಬಹುತೇಕ ಮನೆಗಳಲ್ಲಿ ಅಜ್ಜಿಯೇ ಇಲ್ಲವಾಗಿದ್ದಾರೆ ಎಂದರು.

ಮಕ್ಕಳಿಗೆ ನೀತಿಕತೆಗಳು, ಪುರಾಣ ಪ್ರಸಿದ್ಧ ಮಹಾ ಪುರುಷರ ಕತೆ ಹೇಳಿದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಆದರ್ಶ ಪುರುಷರ ಕತೆಗಳಿಂದ ಮಕ್ಕಳು ಸ್ಫೂರ್ತಿ ತುಂಬಿಕೊಳ್ಳುತ್ತಾರೆ. ಮಕ್ಕಳಿಗೆ ತಾಯಿಯೇ ಮೊದಲ ಗುರು. ತಾಯಿಯಾದವಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಅವರು ಮುಂದೆ ಉತ್ತಮ ಪ್ರಜೆಗಳಾಗುತ್ತಾರೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅವರಲ್ಲಿ ಸಾಹಿತ್ಯ, ಸಂಗೀತ, ಕಲೆಗಳ ಅಭಿರುಚಿ ಬೆಳೆಸಬೇಕು. ಇಂಥ ಮಕ್ಕಳ ಸಾಹಿತ್ಯ ಸಮ್ಮೇಳನಗಳು ಅವರಿಗೆ ಪ್ರೇರಣೆಯಾಗಿವೆ ಎಂದರು.

ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಮಾತನಾಡಿ, ಮಕ್ಕಳಿಗೆ ಈಗ ಹಲವಾರು ಅವಕಾಶಗಳು ತೆರೆದುಕೊಂಡಿವೆ. ಹೊಸ ಆವಿಷ್ಕಾರಗಳು ಮನೆ ಬಾಗಿಲಿಗೆ ಬಂದಿವೆ. ಮಕ್ಕಳ ಆಸಕ್ತಿ, ಜವಾಬ್ದಾರಿ ಮನಗಂಡು ಪೋಷಕರು ಅವರಿಗೆ ಸಹಕಾರ ನೀಡಬೇಕು. ಆಸಕ್ತಿಪೂರ್ವಕ ಪ್ರಯತ್ನಶೀಲತೆಗೆ ಯಶಸ್ಸು ಸಾಧ್ಯ ಎಂದರು.

Advertisement

ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಗಾರ್ಗಿ ಸೃಷ್ಟೀಂದ್ರ ಮಾತನಾಡಿ, ಈ ಸಮ್ಮೇಳನ ನನಗೆ ಹೊಸ ಅನುಭವ ನೀಡಿದೆ. ನನ್ನ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ತಂದೆ, ತಾಯಿ ಹಾಗೂ ಸ್ನೇಹಿತೆಯರಿಗೆ ನಾನು ಕೃತಜ್ಞಳಾಗಿದ್ದೇನೆ. ಸಮ್ಮೇಳನದ ಅಧ್ಯಕ್ಷತೆ ನನ್ನಲ್ಲಿ ಇನ್ನಷ್ಟು ಸ್ಫೂರ್ತಿ ತುಂಬಿದೆ ಎಂದು ತಮ್ಮ ಸ್ವರಚಿತ ಕವನ ‘ವಿಸ್ಮಯ’ವನ್ನು ವಾಚಿಸಿದರು.

ಎಸ್‌ಎಸ್‌ಎಲ್ಸಿಯ ಕನ್ನಡ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪರಿಷತ್ತಿನ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಸ್ಪರ್ಧೆಗೆ ತೀರ್ಪುಗಾರರಾಗಿ ಬಂದಿದ್ದ 30 ಶಿಕ್ಷಕರಿಗೆ ನೆನಪಿನ ಕಾಣಿಕೆ ಹಾಗೂ ಸ್ಪರ್ಧಾ ವಿಜೇತರಾದವರಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಲಾಯಿತು. ನಗರಸಭೆ ಸದಸ್ಯ ಲಿಂಗರಾಜು, ಪರಿಷತ್ತಿನ ಕಾರ್ಯದರ್ಶಿ ಮೇಜರ್‌ ಎಂ. ನಾಗರಾಜ್‌, ನಿರ್ದೇಶಕರಾದ ಶಿವಾನಂದ ಮಾಸೂರು, ಆಯಿಷಾಬಾನು, ಗಂಗಮ್ಮ, ಸಮ್ಮೇಳನ ಸರ್ವಾಧ್ಯಕ್ಷೆ ಗಾರ್ಗಿ ಅವರ ಪೋಷಕರಾದ ಶೈಲೇಂದ್ರ ಬಂದಗದ್ದೆ, ಸರಸ್ವತಿ ಹೆಗಡೆ, ಶಿಕಾರಿಪುರ ತಾಲೂಕು ಪರಿಷತ್ತಿನ ಅಧ್ಯಕ್ಷ ಜಗದೀಶ ಅಂಗಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿಕಾರಿಪುರದ ಸುಭಾಶ್ಚಂದ್ರ ಸ್ಥಾನಿಕ ಇದ್ದರು. ಗಂಗಮ್ಮ ಸ್ವಾಗತಿಸಿದರು. ಎಸ್‌.ಎಂ. ಗಣಪತಿ ವಂದಿಸಿದರು. ಗಣಪತಿ ಶಿರಳಗಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next