Advertisement

ಕಾಲುವೆ ಒತ್ತುವರಿ ಸಕ್ರಮದ ಆತಂಕ

12:11 PM May 23, 2019 | Naveen |

ಸಾಗರ: ನಗರದ ಐತಿಹಾಸಿಕ ಗಣಪತಿ ಕೆರೆಯ ದಂಡೆಯ ಮೇಲೆ ಕಾಲುವೆ ನಿರ್ಮಾಣ ಕಾಮಗಾರಿ ಪರೋಕ್ಷವಾಗಿ ಕೆರೆಯ ಖಾಸಗಿ ಒತ್ತುವರಿಗಳನ್ನು ಸಕ್ರಮಗೊಳಿಸಿಕೊಡುವ ಹುನ್ನಾರ ನಡೆದಿದೆ. ಒತ್ತುವರಿಗಳನ್ನು ಗುರುತಿಸಿ ತೆರವು ಮಾಡಿದ ನಂತರವಷ್ಟೇ ಕಾಲುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂಬ ಕೂಗು ನಿಧಾನವಾಗಿ ದಟ್ಟವಾಗುತ್ತಿದೆ. ಪ್ರಸ್ತುತ ಪ್ರಜ್ವಲ್ ಮೋಟಾರ್ ಪಕ್ಕದಿಂದ ಗಣಪತಿ ದೇವಸ್ಥಾನದವರೆಗೆ ಬಾಕ್ಸ್‌ ಕಾಲುವೆ ನಿರ್ಮಾಣಕ್ಕೆ ಮುಂದಾಗಲಾಗಿದ್ದು, ಅದರ ಪಕ್ಕದಲ್ಲಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣವಾಗುತ್ತದೆ ಎನ್ನಲಾಗುತ್ತಿದೆ.

Advertisement

ಗಣಪತಿ ಕೆರೆಯ ದಂಡೆಯ ಮೇಲೆ ಮಂಗಳವಾರ ಬೆಳಗ್ಗೆ ಕೆರೆ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ಸೇರಿ ಕಾಲುವೆ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಮಿತಿಯ ಅಧ್ಯಕ್ಷ ಐ.ವಿ. ಹೆಗಡೆ ಈ ಕಾಮಗಾರಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಆಕ್ಷೇಪಗಳ ಹೊರತಾಗಿಯೂ ಬುಧವಾರ ಕೂಡ ಪ್ರಜ್ವ್ವಲ್ ಮೋಟಾರ್ ಭಾಗದಲ್ಲಿ ಬಾಕ್ಸ್‌ ಚರಂಡಿ ನಿರ್ಮಾಣ ಕಾರ್ಯವನ್ನು ಗುತ್ತಿಗೆದಾರರು ಮುಂದುವರಿಸಿರುವುದು ಕಂಡು ಬಂದಿದೆ.

ಅನೇಕ ವರ್ಷಗಳಿಂದ ನಮ್ಮ ಸಮಿತಿ ಗಣಪತಿ ಕರೆ ಒತ್ತುವರಿ ತೆರವುಗೊಳಿಸಬೇಕು ಎಂದು ಹೋರಾಟ ನಡೆಸುತ್ತಿದೆ. ರಾಜ- ಮಹಾರಾಜರು ಕಟ್ಟಿದಂತಹ ಊರಿಗೆ ಜೀವಜಲವನ್ನು ನೀಡುವ ಕೆರೆ ಇತ್ತೀಚಿನ ವರ್ಷಗಳಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆಲವು ಭಾಗದಲ್ಲಿ ಗಣನೀಯ ಒತ್ತುವರಿಗಳು ನಡೆದು ನಿಜವಾದ ಕೆರೆಯ ವಿಸ್ತೀರ್ಣ ಇಲ್ಲದಂತಾಗಿದೆ. ಅದಕ್ಕಾಗಿಯೇ ನಾವು ಹೈಕೋರ್ಟ್‌ ಮೂಲಕ ಒತ್ತುವರಿ ತೆರವಿಗಾಗಿ ಆದೇಶವನ್ನು ಮಾಡಿಸಿದ್ದೇವೆ. ಆದರೂ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ಕೆಲವರು ತಂದಿದ್ದರಿಂದ ವಿಳಂಬವಾಗುತ್ತಿದೆ ಎಂದು ಮಾಹಿತಿ ನೀಡುವ ಅವರು, ಈ ಹಂತದಲ್ಲಿ ಸರ್ಕಾರದಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂಬ ಏಕೈಕ ಕಾರಣಕ್ಕೆ ಕಾಲುವೆ ನಿರ್ಮಾಣಕ್ಕೆ ಮುಂದಾಗುವುದರಿಂದ ಈ ಭಾಗದಲ್ಲಿ ಆದ ಒತ್ತುವರಿಗಳನ್ನು ಸಕ್ರಮ ಎಂದು ಮಾನ್ಯ ಮಾಡಿದಂತಾಗುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮಂಗಳವಾರ ಜೆಸಿಬಿ ಕೆಲಸ ಆರಂಭಿಸಿದ್ದು, ಕೆರೆಯ ದಂಡೆಯ ಮೇಲೆ ರಾಜ-ಮಹಾರಾಜರ ಕಾಲದಿಂದಲೂ ಇದ್ದಂತ ಬಾಂದು ಕಲ್ಲುಗಳು ಹಾಗೂ ಕೆರೆಯ ಅಳತೆಗೆ ಬೇಕಾಗಿದ್ದ ಹಿಂದಿನ ಕಾಲದ ಕೆಲವು ಸಾಕ್ಷಿ ಆಧಾರಗಳನ್ನು ಕೀಳಲಾಗುತ್ತಿದೆ. ಇವನ್ನು ಈಗ ಮಣ್ಣಿನ ಅಡಿಯಲ್ಲಿ ಹಾಕುವುದರಿಂದ ಕೆರೆಯ ಮೂಲ ಅಳತೆಗಳ ಗುರುತುಗಳ ಮಾಯವಾಗಿ ಒತ್ತುವರಿಯನ್ನು ಅಂದಾಜಿಸಲಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಭೂ ಕಬಳಿಕೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಗಟ್ಟಿಯಾಗದೆ ಒತ್ತುವರಿದಾರರು ನಿರಾಳರಾಗುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಕಾಲುವೆ ನಿರ್ಮಾಣಕ್ಕಿಂತಲೂ ಕರೆಯ ಅನಾದಿ ಕಾಲದ ಗುರುತುಗಳ ಸಂರಕ್ಷಣೆ ಹೆಚ್ಚು ಮುಖ್ಯ ಎಂದು ಕೆರೆ ಹೋರಾಟ ಸಮಿತಿ ಪ್ರತಿಪಾದಿಸಿದ್ದು, ಮಂಗಳವಾರ ಸ್ಥಳಕ್ಕೆ ಆಗಮಿಸಿದ್ದ ನೂರಾರು ಹಿಂದೂಪರ ಕಾರ್ಯಕರ್ತರು ಈ ವಾದವನ್ನು ಬೆಂಬಲಿಸಿದರು.

ಇಂತಹ ಸಂದರ್ಭದಲ್ಲಿ ಕೆರೆ ಅಭಿವೃದ್ಧಿ ನಡೆದರೆ ಒತ್ತುವರಿದಾರರಿಗೆ ಅನುಕೂಲವಾಗುತ್ತದೆ. ಅಭಿವೃದ್ಧಿ ಆಧಾರದಲ್ಲಿಯೇ ದಾಖಲೆ ಸೃಷ್ಟಿಸಿ ಕೆರೆಯ ನಿಜವಾದ ಅಳತೆಯನ್ನು ನುಂಗಲಾಗುತ್ತದೆ. ಇಲ್ಲಿಯವರೆಗೆ ಕಂದಾಯ ಇಲಾಖೆ ಕೆರೆ ವಿಸ್ತೀರ್ಣದ ಬಗ್ಗೆ ನಿಖರವಾದ ಸರ್ವೆ ರಿಪೋರ್ಟ್‌ ನೀಡಿಲ್ಲ. ಈ ಹಂತದಲ್ಲಿ ಈ ರೀತಿಯ ಚಟುವಟಿಕೆಗಳು ಕೆರೆ ಉಳಿಸುವ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತವೆ ಎಂದು ಐ.ವಿ. ಹೆಗಡೆ ಆಕ್ಷೇಪ ವ್ಯಕ್ತಪಡಿಸುತ್ತಾರೆ.

Advertisement

ಹಾಲಪ್ಪ ಸ್ಥಳ ಭೇಟಿ: ಮಂಗಳವಾರ ಪ್ರತಿಭಟನೆ ಸಂದರ್ಭದಲ್ಲಿ ಶಾಸಕ ಎಚ್. ಹಾಲಪ್ಪ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದ ಕೆರೆ ಹೋರಾಟ ಸಮಿತಿಯ ಜೊತೆ ಮಾತುಕತೆಯನ್ನು ನಡೆಸಿದರು. ಆ ನಂತರ ಗೊಂದಲಗಳ ನಿವಾರಣೆಗಾಗಿ ಶಿವಮೊಗ್ಗ ರಸ್ತೆಯ ಆರಗ ಚಂದ್ರಣ್ಣ ಅವರ ಮನೆಯಲ್ಲಿ ಹಾಲಪ್ಪ ಕೆರೆ ಹೋರಾಟ ಸಮಿತಿಯೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಗುತ್ತಿಗೆದಾರರು ಹಾಗೂ ಸಂಘ ಪರಿವಾರದ ಅ. ಪು. ನಾರಾಯಣಪ್ಪ, ಪ್ರಸನ್ನ ಕೆರೆಕೈ, ಟಿ.ಡಿ. ಮೇಘರಾಜ್‌, ಗಣೇಶ್‌ಪ್ರಸಾದ್‌ ಮೊದಲಾದ ಬಿಜೆಪಿ ಮುಖಂಡರು ಭಾಗಿಯಾಗಿದ್ದರು ಎಂಬ ಮಾಹಿತಿಯಿದೆ.

ಈಗಿನ ಕೆಲಸವನ್ನು ಮುಂದುವರಿಸಲು ಅವಕಾಶ ಕೊಡುವುದೇ ಒಳ್ಳೆಯದು ಎಂಬ ಇಂಗಿತವನ್ನು ಹಾಲಪ್ಪ ಪ್ರಕಟಿಸಿದರು ಎನ್ನಲಾಗಿದೆ. ಐ.ವಿ. ಹೆಗಡೆ ಅವರು ಅದನ್ನು ಖಂಡತುಂಡವಾಗಿ ವಿರೋಧಿಸಿದರು ಎಂಬ ಮಾಹಿತಿ ಲಭ್ಯವಾಗಿದೆ. ಮೂಲ ಬಿಜೆಪಿ ಕಾರ್ಯಕರ್ತರು ಐ.ವಿ. ಹೆಗಡೆಯವರನ್ನೇ ಬೆಂಬಲಿಸುತ್ತಿರುವ ವಿದ್ಯಮಾನ ನಡೆದಿದೆ. ಈ ವಿಷಯ ಬಿಜೆಪಿ ಪಕ್ಷ ಅತಿ ಹೆಚ್ಚಿನ ಭಿನ್ನಮತವನ್ನು ನಗರಸಬೆ ಚುನಾವಣೆಯ ಸಂದರ್ಭದಲ್ಲಿ ಎದುರಿಸುತ್ತಿರುವ ಕಾಲದಲ್ಲಿ ಬೇರೆ ಬೇರೆ ಆಯಾಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಕೆರೆ ಉಳಿಸಲು ಜನರ ಆಸಕ್ತಿ ಅಧಿಕಾರಿಗಳಿಗೆ ಅಪಥ್ಯ!
ರಾಜ್ಯದ ಎಲ್ಲಾ ಕೆರೆ ರಕ್ಷಣೆ ಮಾಡಬೇಕು ಎನ್ನುವ ಹೈಕೋರ್ಟ್‌ ಆದೇಶದ ಹೊರತಾಗಿ ಸಾಗರದ ಉಪ ವಿಭಾಗದ ಸಹಾಯಕ ಆಯುಕ್ತರ ವರ್ತನೆ ವಿಭಿನ್ನವಾಗಿರುವುದು ಐ.ವಿ.ಹೆಗಡೆಯವರಿಗೆ ಅಚ್ಚರಿ ತಂದಿದೆ. ನಾವು ಕೆರೆ ಬಾಂದು ಕಲ್ಲುಗಳು ನಾಶವಾಗುತ್ತಿವೆ ಸರ್‌, ಸ್ಥಳ ಪರಿಶೀಲನೆ ಮಾಡಿ ಎಂದು ದೂರು ಒಯ್ದರೆ, ನೀವು ಯಾಕೆ ಅಲ್ಲಿಗೆ ಹೋಗಿದ್ದೀರಿ, ಕಾಮಗಾರಿ ನಡೆಸುವ ಜಾಗಕ್ಕೆ ಯಾಕಾಗಿ ಪದೇ ಪದೇ ಹೋಗಿ ತೊಂದರೆ ಕೊಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ನಮ್ಮ ಸ್ವಂತ ಜಾಗವನ್ನು ರಕ್ಷಣೆ ಮಾಡಿ ಎಂದು ನಾವು ಎಸಿಯವರನ್ನು ಕೇಳುತ್ತಿಲ್ಲ. ಕೆರೆ ಸಮಾಜದ, ಸರ್ಕಾರದ ಆಸ್ತಿ. ಅದರ ರಕ್ಷಣೆಗೆ ಈಗಾಗಲೇ ಹೈಕೋರ್ಟ್‌ನಿಂದ ಆದೇಶ ಪಡೆಯಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕಾದವರು ಅದರ ವಿರುದ್ಧವಾಗಿ ನಿಂತರೆ ಆಶ್ಚರ್ಯ ಸಹಜ. ಈ ನಡುವೆ ಗಣಪತಿ ಕೆರೆಯ ವಾಕಿಂಗ್‌ ಟ್ರಾಕ್‌ ನಿರ್ಮಾಣ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಹೋರಾಟ ರೂಪಿಸಬೇಕು ಎಂಬ ಆಶಯ ಕೂಡ ಹೊರಹೊಮ್ಮುತ್ತಿದೆ. ಸಬಲ ನಾಯಕತ್ವ ಸಿಕ್ಕರೆ ಈ ವಿವಾದ ಇನ್ನಷ್ಟು ಕಾವು ಪಡೆಯುವ ಸಾಧ್ಯತೆಯಿದೆ.
Advertisement

Udayavani is now on Telegram. Click here to join our channel and stay updated with the latest news.

Next