ಸಾಗರ: ಇಂದು ರಾಜ್ಯದಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೂ ನಾವು ಪದೇ ಪದೇ ವಿದ್ಯುತ್ ಕಡಿತ ಅನುಭವಿಸುವಂತಾಗಲು ವ್ಯವಸ್ಥೆಯಲ್ಲಿನ ನಿರ್ವಹಣೆಯ ಕೊರತೆಯೇ ಕಾರಣ ಎಂದು ಶರಾವತಿ ವಿದ್ಯುತ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಗೋಪಾಲಕೃಷ್ಣ ಬಾರಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಿವಿಆರ್ ಕಚೇರಿಯ ವಿವೇಕ ಸಭಾಂಗಣದಲ್ಲಿ ನಡೆದ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಸಾಗರ, ಹೊಸನಗರ ತಾಲೂಕು ಹಾಗೂ ಭಾಗಶಃ ಸೊರಬ ತಾಲೂಕುಗಳಲ್ಲಿ ವಿದ್ಯುತ್ ಗ್ರಾಹಕರಿಗೆ ದಿನದ 24 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಗುರಿಯೊಂದಿಗೆ ಸ್ಥಾಪಿತವಾಗಿದೆ. 2018ರಲ್ಲಿ ಸೌಹಾರ್ದ ಸಹಕಾರಿ ನಿಯಮದಡಿ ನಾವು ನೋಂದಾಯಿತರಾಗಿದ್ದೇವೆ. ದೀಪದಿಂದ ದೀಪ ಹಚ್ಚುವಂತೆ ಮುಂದಿನ ವರ್ಷಗಳಲ್ಲಿ ಷೇರುದಾರರ ಸಂಖ್ಯೆ, ಠೇವಣಿಯನ್ನು ಹೆಚ್ಚಿಸಿ ನಮ್ಮ ಗುರಿ ಈಡೇರಿಕೆಗೆ ಮುಂದಾಗಲಿದ್ದೇವೆ ಎಂದು ಘೋಷಿಸಿದರು.
ಸಂಸ್ಥೆ ವಿದ್ಯುತ್ ವಿತರಣೆಗೆ ಅಗತ್ಯವಾದ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೆಇಆರ್‌ಸಿ ಎದುರು ನಿಲ್ಲುವಾಗ ಷೇರು ಬಂಡವಾಳ ಹೆಚ್ಚಬೇಕು. ಎರಡರಿಂದ ಮೂರು ಕೋಟಿ ರೂ. ಬಂಡವಾಳ ಸಂಗ್ರಹಿಸುವ ಗುರಿ ಹೊಂದಬೇಕಾಗಿದೆ. ಮೆಸ್ಕಾಂ ಸಾಗರ ವಿಭಾಗದಲ್ಲಿರುವ 1.5 ಲಕ್ಷ ಗ್ರಾಹಕರಲ್ಲಿ ಶೇ. 10ರಷ್ಟು ಜನರನ್ನು ಷೇರುದಾರರನ್ನಾಗಿಸಿಕೊಂಡರೂ ಗುರಿ ತಲುಪುತ್ತೇವೆ. ಈ ನಿಟ್ಟಿನಲ್ಲಿ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ಉಪಾಧ್ಯಕ್ಷ ಬಿ.ವಿ.ರವೀಂದ್ರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಕೀಯೇತರ ಸಂಸ್ಥೆಯಾಗಿಯೂ ನಾವು ರಾಜಕೀಯ ಪಕ್ಷಗಳಲ್ಲಿ ಈ ರೀತಿಯ ಯೋಜನೆಗೆ ಬೆಂಬಲಿಸುವವರನ್ನು ಸಂಪರ್ಕಿಸುತ್ತೇವೆ. ತಾಲೂಕಿನಲ್ಲಿ ಸಹಕಾರಿ ಧುರೀಣರ ಅಗಾಧ ಶಕ್ತಿ ವಿದ್ಯುತ್ ಕ್ಷೇತ್ರದ ಈ ಸುಧಾರಣಾ ಕ್ರಮಕ್ಕೆ ಬೆಂಬಲವಾಗಿ ನಿಂತರೆ ಯೋಜನೆಯ ಸಾಕಾರ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆ ಅಕ್ಟೋಬರ್‌ನಿಂದ ಹೆಚ್ಚು ವೇಗದಲ್ಲಿ ಕೆಲಸ ಮಾಡಲಿದೆ ಎಂದರು.
ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ಹೆಗಡೆ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ನಿರ್ದೇಶಕ ಹೊಸನಗರದ ಎಂ.ವಿ. ಜಯರಾಮ್, ಪ್ರಕಾಶ್ ಬೆಳೆಯೂರು ಇದ್ದರು. ಅರುಣಾಚಲ ಬೆಳೆಯೂರು ಸ್ವಾಗತಿಸಿದರು. ಕೆ. ವೆಂಕಟೇಶ್ ವಂದಿಸಿದರು. ಸುಮಾ ನಿರ್ವಹಿಸಿದರು.