Advertisement

ಕಳಸವಳ್ಳಿ ಲಾಂಚ್‌ನಲ್ಲಿ ಬಸ್‌ ಸಂಚಾರ ಸ್ಥಗಿತ

11:56 AM Jun 26, 2019 | Naveen |

ಸಾಗರ: ತಾಲೂಕಿನ ತುಮರಿಯಲ್ಲಿನ ಅಂಬಾರಗೋಡ್ಲು ಕಳಸವಳ್ಳಿ ಲಾಂಚ್‌ನಲ್ಲಿ ಬಸ್‌ ಸೇರಿದಂತೆ ಭಾರಿ ವಾಹನಗಳನ್ನು ಹಾಕುವುದನ್ನು ಸೋಮವಾರದಿಂದ ನಿಲ್ಲಿಸಲಾಗಿದೆ. ತುಮರಿ, ಸಿಗಂದೂರು ಮುಂತಾದ ಭಾಗಗಳ ಸಂಪರ್ಕಕ್ಕೆ ಒದಗುತ್ತಿದ್ದ ಲಾಂಚ್ ಸೇವೆಯಲ್ಲಿ ಬಸ್‌ ಹಾಕಲು ಸಾಧ್ಯವಾಗುತ್ತಿಲ್ಲ.

Advertisement

ನೀರಿನ ಕೊರತೆಯಿಂದ ಬಸ್‌ ಸೇರಿದಂತೆ ಭಾರಿ ವಾಹನಗಳನ್ನು ಲಾಂಚ್ಗೆ ಹತ್ತಿಸಲು ಸಾಧ್ಯವಾಗುತ್ತಿಲ್ಲ. ಫ್ಲ್ಯಾಟ್ಫಾರಂ ವಿಸ್ತರಣೆ ಕಾರ್ಯ ನಡೆದಿಲ್ಲ. ಆದ್ದರಿಂದ ಬಸ್‌ ಅಥವಾ ದೊಡ್ಡ ವಾಹನಗಳನ್ನು ಲಾಂಚ್ ಏರಿಸುವ ಸಂದರ್ಭ ಆಯ ತಪ್ಪಿ ನೀರಿಗೆ ಬೀಳುವ ಅಪಾಯ ದಿನೇ ದಿನೇ ಹೆಚ್ಚಾಗುತ್ತಿದೆ. ಭಾನುವಾರ ಖಾಸಗಿ ಬಸ್‌ ಅಂಥ ಅಪಾಯದಿಂದ ನೀರಿಗೆ ಇಳಿದಿತ್ತು.

ಮೊದಲೇ ಲಾಂಚ್ ಸಂಚಾರದ ಸಂಕಟದಲ್ಲಿರುವ ಸ್ಥಳೀಯರು ಈಗ ತಮ್ಮ ನಿತ್ಯ ಸಂಚಾರದಲ್ಲಿ ಪರದಾಡುವಂತಾಗಿದೆ. ಅಂಬಾರ ಗೋಡ್ಲು ದಡದವರೆಗೆ ಬಸ್‌ ಸೌಲಭ್ಯ ಇರುತ್ತದೆ. ನಂತರ ಸರಕುಗಳನ್ನು ಹೊತ್ತುಕೊಂಡು ಲಾಂಚ್‌ನಲ್ಲಿ ಹೊಳೆ ದಾಟಬೇಕು. ಈ ಕಡೆ ಕಳಸವಳ್ಳಿ ದಡ ತಲುಪಿದ ನಂತರ ಮತ್ತೆ ಬಸ್‌ ಹತ್ತಲು ಪರದಾಡಬೇಕು.

ಸ್ಥಳೀಯರು ಅದರಲ್ಲಿಯೂ ತುಮರಿ ಭಾಗದ ಅಂಗಡಿ ಮಾಲೀಕರು ತಮ್ಮ ವ್ಯವಹಾರ ವಹಿವಾಟಿಗೆ ಅಗತ್ಯ ಸಾಮಗ್ರಿಗಳನ್ನು ಲಾಂಚ್ ಮೂಲಕ ಒಂದು ದಡದಿಂದ ಮತ್ತೂಂದು ದಡಕ್ಕೆ ಒಯ್ಯಲು ಪರದಾಡುವಂತಾಗುತ್ತದೆ. ಅಲ್ಲದೇ ಸಾಗರದ ಕಡೆಯಿಂದ ಹಾಲು, ಪತ್ರಿಕೆ ಸಾಗಣೆ ಸಹ ಸಮಸ್ಯೆಯಾಗಲಿದೆ. ನೀರಿನ ಕೊರತೆ ಸಂದರ್ಭ ಆಳಕ್ಕೆ ಇಳಿದ ಸ್ಥಳದವರೆಗೂ ಫ್ಲ್ಯಾಟ್ಫಾರಂ ವಿಸ್ತರಣೆ ಕಾರ್ಯ ನಡೆದಿದ್ದರೆ ಇಂಥ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಶಾಸಕರು ಫ್ಲ್ಯಾಟ್ಫಾರಂ ವಿಸ್ತರಣೆ ಕಾರ್ಯದ ಕಡೆಗೆ ಗಮನ ಹರಿಸಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ. ಇದೇ ರೀತಿ ಮಳೆಯ ಕೊರತೆಯಾಗಿ ಹಿನ್ನೀರು ಭಾಗದಲ್ಲಿ ನೀರಿನ ಕೊರತೆಯಾದರೆ ಲಾಂಚ್ ಸೇವೆ ಸಹ ನಿಲ್ಲುವ ಅಪಾಯವಿದೆ.

ಸೋಮವಾರದಿಂದ ಬಸ್‌ ಹಾಗೂ ದೊಡ್ಡ ವಾಹನಗಳನ್ನು ಲಾಂಚ್ ಮೇಲೆ ಹಾಕುತ್ತಿಲ್ಲ. ಜನಸಾಮಾನ್ಯರು, ಅಂಗಡಿ ಮಾಲೀಕರು ಪೇಟೆಯಿಂದ ಖರೀದಿಸಿದ ಸರಂಜಾಮುಗಳನ್ನು ತಲೆಹೊರೆಯ ಮೇಲೆ ಹೊತ್ತುಕೊಂಡು ಲಾಂಚ್ಗೆ ತಲುಪುವ ಸ್ಥಿತಿ ನಿರ್ಮಾಣವಾಗುತ್ತದೆ. ಒಟ್ಟಿನಲ್ಲಿ ದ್ವೀಪವಾಸಿಗಳು ಮತ್ತೂಂದು ಸಮಸ್ಯೆ ಅನುಭವಿಸುವಂತಾಗಿದೆ.
ಜಿ.ಟಿ. ಸತ್ಯನಾರಾಯಣ,
ತುಮರಿ ಗ್ರಾಪಂ ಅಧ್ಯಕ್ಷ 

Advertisement

ಹಿನ್ನೀರಿನಲ್ಲಿನ ನೀರಿನ ಮಟ್ಟದ ದಿನೇದಿನೆ ಕಡಿಮೆಯಾಗುತ್ತಿದೆ. ಅಗತ್ಯ ಪ್ರಮಾಣದಲ್ಲಿ ನೀರಿಲ್ಲವಾದುದರಿಂದ ಲಾಂಚ್‌ನಲ್ಲಿ ಬಸ್‌ ಮತ್ತು ದೊಡ್ಡ ವಾಹನಗಳನ್ನು ಸಾಗಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಪ್ರವಾಸಿಗರ ದೊಡ್ಡ ವಾಹನ ಸಹ ಸಾಗಣೆ ಸಾಧ್ಯವಾಗುವುದಿಲ್ಲ. ಈಗಾಗಲೇ ಹಸಿರುಮಕ್ಕಿಯಲ್ಲಿ ಲಾಂಚ್ ಸೇವೆ ನಿಲ್ಲಿಸಲಾಗಿದೆ. ಕಳಸವಳ್ಳಿ ಅಂಬಾರಗೋಡ್ಲು ಭಾಗದಲ್ಲಿ ಬಾರೀ ವಾಹನ ಸಾಗಣೆ ನಿಲ್ಲಿಸಲಾಗಿದೆ.
ಶಾಂತಾರಾಮ,
ಕಡವು ನಿರೀಕ್ಷಕರು, ಒಳನಾಡು ಜಲಸಾರಿಗೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next