Advertisement
ಇಲ್ಲಿನ ನಗರಸಭೆಯಲ್ಲಿ ಶನಿವಾರ ಸಾಗರ ಯೋಜನಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಆಶ್ರಯ ನಿವೇಶನ ಕೋರಿ ನಾಲ್ಕು ಸಾವಿರ ಅರ್ಜಿಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ಬಂದಿತ್ತು. ಎಲ್ಲರಿಗೂ ನಿವೇಶನ ಕೊಡಲು ಸಾಧ್ಯವಿಲ್ಲ. ಕನಿಷ್ಠ 2ರಿಂದ 3 ಸಾವಿರ ಜನರಿಗಾದರೂ ನಿವೇಶನ ಕೊಡಬೇಕು ಎನ್ನುವುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಬಳಸಗೋಡು ಬಳಿ 20 ಎಕರೆ, ಯಲಗಳಲೆ ಬಳಿ 10 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದೆ ಎಂದರು.
ನಗರ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಖಾಸಗಿ ಲೇ ಔಟ್‌ಗಳ ಬೇಕಾಬಿಟ್ಟಿಯಾಗಿ ನಿರ್ಮಿಸಿದರೆ ಪ್ರಾಧಿಕಾರದಿಂದ ಅನುಮತಿ ನೀಡುವುದಿಲ್ಲ. ಲೇಔಟ್‌ಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇರುವುದು ಕಡ್ಡಾಯ. ನಮ್ಮ ಪ್ರಾಧಿಕಾರದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲವೂ ಕಾನೂನಾತ್ಮಕವಾಗಿ ಇದ್ದರೆ ಮಾತ್ರ ಪರವಾನಗಿ ನೀಡಲು ಶಿಫಾರಸ್ಸು ಮಾಡುತ್ತಾರೆ. ಹಿಂದೆ ವಿನೋಬಾ ನಗರದಲ್ಲಿ ಖಾಸಗಿ ಲೇ ಔಟ್ ಮಳೆಗಾಲದಲ್ಲಿ ಮುಳುಗಿ ಹೋಗಿತ್ತು. ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪರಿಸ್ಥಿತಿ ಬೇರೆಡೆ ಬರಬಾರದು ಎನ್ನುವ ಕಾರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಕೆಲವು ಕಡೆಗಳಲ್ಲಿ ಕೆರೆ ಜಾಗ, ಪಾರ್ಕ್‌ಗೆ ಬಿಟ್ಟಿರುವ ಜಾಗ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಅಂತಹ ಮನೆಗಳ ತೆರವಿಗೆ ಸೂಚನೆ ನೀಡಲಾಗಿದೆ. ಸದ್ಯದಲ್ಲಿಯೇ ಆಶ್ರಯ ಸಮಿತಿ ಸದಸ್ಯರು, ತಹಶೀಲ್ದಾರ್, ಸಾಗರ ಯೋಜನಾ ಪ್ರಾಧಿಕಾರದ ಸದಸ್ಯರ ಒಳಗೊಂಡ ಸಭೆ ಕರೆದು ಆಶ್ರಯ ನಿವೇಶನ ನೀಡಲು ಜಾಗ ಗುರುತಿಸುವ ಕೆಲಸ ಮಾಡಲಾಗುತ್ತದೆ. ಹಿಂದಿನ ಶಾಸಕರು 10-20 94ಸಿ ಹಕ್ಕುಪತ್ರ ಕೊಟ್ಟಿದ್ದು ಬಿಟ್ಟರೆ, ಬಡವರಿಗೆ ನಿವೇಶನ ನೀಡಲಿಲ್ಲ. ನಮ್ಮ ಅವಧಿಯಲ್ಲಿ ಬಡವರಿಗೆ ನಿವೇಶನ ನೀಡುವುದು ನಮ್ಮ ಆದ್ಯತಾ ವಿಷಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
Related Articles
Advertisement