Advertisement

ಮಾಜಿ ಸಚಿವ ಕಾಗೋಡಿಗೆ ಶಾಸಕ ಹಾಲಪ್ಪ ಅಗೌರವ ತೋರಿಲ್ಲ; ಬಿಜೆಪಿ ಪ್ರತಿಪಾದನೆ

06:35 PM Jan 31, 2022 | Suhan S |

ಸಾಗರ: ಇರುವಕ್ಕಿ ಕೃಷಿ ವಿಶ್ವವಿದ್ಯಾಲಯ ಸುತ್ತಲೂ ಬೇಲಿ ಹಾಕುವ ಸಂದರ್ಭದಲ್ಲಿ ಸ್ಥಳೀಯ ರೈತರು ನಡೆಸುತ್ತಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದ ಶಾಸಕ ಹಾಲಪ್ಪ ಹರತಾಳು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಯಾವುದೇ ಅಗೌರವ ತರುವ ಮಾತನ್ನು ಆಡಲಿಲ್ಲ. ಜೊತೆಗೆ ಮಹಿಳೆಯರ ಬಗ್ಗೆ ಸಹ ಕೇವಲವಾಗಿ ಮಾತನಾಡಿಲ್ಲ ಎಂದು ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಸದಸ್ಯೆ ಶರಾವತಿ ಸಿ. ರಾವ್ ಸ್ಪಷ್ಟಪಡಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯದವರು ಗಡಿ ಗುರುತಿಸಿ ಬೇಲಿ ಹಾಕುವ ಸಂದರ್ಭದಲ್ಲಿ ತಲತಲಾಂತರದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ಮೂರು ಬಡ ಬ್ರಾಹ್ಮಣ ಕುಟುಂಬವನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೊಂದ ರೈತರ ಪರವಾಗಿ ಶಾಸಕರು ಮಾತನಾಡುವಾಗ ಆಕಸ್ಮಿಕವಾಗಿ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಹೇಳಿರಬಹುದು. ಆದರೆ ವೈಯಕ್ತಿಕವಾಗಿ ಶಾಸಕ ಹಾಲಪ್ಪ ಅವರಿಗೆ ಕಾಗೋಡು ಬಗ್ಗೆ ಅಪಾರ ಗೌರವ ಇದೆ ಎಂದು ಹೇಳಿದರು.

ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಬರುವುದಕ್ಕಿಂತ ಮೊದಲು ಸ್ಥಳೀಯರು ತಲತಲಾಂತರದಿಂದ ವಾಸ ಮಾಡುತ್ತಿದ್ದಾರೆ. ಏಕಾಏಕಿ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮ ಖಂಡನೀಯ. ಶಾಸಕರು ಇದನ್ನು ವಿರೋಧಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರ ವರ್ಚಸ್ಸನ್ನು ಸಹಿಸದೆ ಕಾಂಗ್ರೆಸ್‌ನ ಕೆಲವರು ಕಾಗೋಡು ತಿಮ್ಮಪ್ಪ ಅವರಿಗೆ ಅಗೌರವ ತೋರಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ನಡೆಸುತ್ತಿದ್ದು ಇದನ್ನು ಬಿಜೆಪಿ ಸಹಿಸುವುದಿಲ್ಲ. ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಹಾಲಪ್ಪ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಇದನ್ನು ಸಹಿಸಲು ಸಾಧ್ಯವಾಗದೆ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ. ಇಂದಿಗೂ ಹಾಲಪ್ಪ ಅವರು ಪ್ರತಿಯೊಂದು ಅಭಿವೃದ್ಧಿ ಕೆಲಸವನ್ನು ಆರಂಭಿಸುವ ಮುನ್ನ ಕಾಗೋಡು ಸಲಹೆಯನ್ನು ಕೇಳುತ್ತಿದ್ದಾರೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಅನುಕಂಪ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕ ಹಾಲಪ್ಪ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಲಪ್ಪನವರು ಯಾವತ್ತೂ ಕಾಗೋಡು ಅವರಿಗೆ ಅಗೌರವ ತೋರಿಸಿಲ್ಲ. ಅವರ ವಿರುದ್ಧ ಕೇವಲವಾಗಿ ಮಾತನಾಡಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ರಾಜನಂದಿನಿ ಮತ್ತು ಗೋಪಾಲಕೃಷ್ಣ ಬೇಳೂರು ನಡುವೆ ಪೈಪೋಟಿ ನಡೆಯುತ್ತಿದೆ. ತಮ್ಮ ಪಕ್ಷ ರಾಜಕಾರಣದ ಭಾಗವಾಗಿ ಕಾಗೋಡು ಅವರಿಗೆ ಅಗೌರವ ತೋರಿಸಿದ್ದಾರೆ ಎಂದು ಬಿಂಬಿಸಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ರಾಜನಂದಿನಿ ಮಾಡುತ್ತಿದ್ದಾರೆ. ಶಾಸಕರು ಮಹಿಳೆಯರಿಗೆ ಈ ಸಂದರ್ಭದಲ್ಲಿ ಅವಮಾನ ಮಾಡಿಲ್ಲ. ಕಾಂಗ್ರೆಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಮಧುಮಾಲತಿ ಅವರ ಪತಿ ಉಪತಹಶೀಲ್ದಾರ್ ಆಗಿ ಕಾಂಗ್ರೆಸ್ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆ ನಮ್ಮ ಬಳಿ ಇದ್ದು, ಅದನ್ನು ಶೀಘ್ರದಲ್ಲಿಯೇ ಬಹಿರಂಗ ಪಡಿಸಲಾಗುತ್ತದೆ ಎಂದರು.

ಗೋಷ್ಠಿಯಲ್ಲಿ ನಗರಸಭಾಧ್ಯಕ್ಷೆ ಮಧುರಾ ಶಿವಾನಂದ್, ಪ್ರಮುಖರಾದ ವೀಣಾ ಬೆಳೆಯೂರು, ರಾಜಶೇಖರ ಹಂದಿಗೋಡು, ಲೋಕನಾಥ್ ಬಿಳಿಸಿರಿ, ಗಣೇಶ್ ಪ್ರಸಾದ್, ಎಂ.ಕೆ.ತಿಮ್ಮಪ್ಪ ಲಕ್ಷ್ಮೀನಾರಾಯಣ, ಗೌತಮ್ ಕೆ.ಎಸ್. ಸಂತೋಷ್ ಶೇಟ್, ದೇವೇಂದ್ರಪ್ಪ ಯಲಕುಂದ್ಲಿ, ಅರುಣಕುಮಾರ್ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next