ಸಾಗರ: ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಅಪರೂಪದ ರಾಜಕಾರಣಿ ಎಂದು ಶಾಸಕ ಎಚ್.ಹಾಲಪ್ಪ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಏರ್ಪಡಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಜಪೇಯಿ ಅವರು ಒಂದೇ ಭಾರತ, ಒಂದೇ ಸಂವಿಧಾನದ ಕನಸು ಕಂಡವರಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ ಬಿಜೆಪಿ ಅಷ್ಟೊಂದು ಶಕ್ತಿಶಾಲಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಶ್ಮೀರ ಸಮಸ್ಯೆ ಬಗೆಹರಿಸಲು ಅವರ ಪ್ರಯತ್ನ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಆದರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿ ಮತ್ತು 35-ಎ ವಿಧಿ ರದ್ದು ಮಾಡುವ ಮೂಲಕ ಅಟಲ್ಜೀ ಅವರ ಕನಸು ನನಸು ಮಾಡಿದ್ದಾರೆ ಎಂದು ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಸೌಹಾರ್ದವನ್ನು ಕಾಪಾಡುವಲ್ಲಿ ಅಟಲ್ ಅವರು ಸಾಕಷ್ಟು ಶ್ರಮಿಸಿದ್ದರು. ಆದರೆ ವಾಜಪೇಯಿ ಅವರ ಸೌಹಾರ್ದ ಮನೋಭಾವ ಪಾಕಿಸ್ತಾನದವರು ಅರ್ಥ ಮಾಡಿಕೊಂಡಿರಲಿಲ್ಲ. ಲಾಹೋರ್‌ಗೆ ಬಸ್ ಸಂಚಾರ ಏರ್ಪಡಿಸುವ ಮೂಲಕ ಸ್ನೇಹದ ಹಸ್ತ ಚಾಚಿದ್ದ ಅಟಲ್ಜೀ ಅವರು ಶಾಂತಿಯುತವಾಗಿ ಜಮ್ಮು- ಕಾಶ್ಮೀರ ಸಮಸ್ಯೆ ಬಗೆಹರಿಸುವ ಉದ್ದೇಶ ಹೊಂದಿದ್ದರು. ಆದರೆ ಪಾಕಿಸ್ತಾನ ಸದಾ ಒಂದಿಲ್ಲೊಂದು ತಗಾದೆ ತೆಗೆಯುತಿತ್ತು. ಇದೀಗ ಪ್ರಧಾನಿ ಮೋದಿ ಅವರು ಅಟಲ್ಜೀ ಅವರ ಬಹುಕಾಲದ ಕನಸಾಗಿದ್ದ ಜಮ್ಮು- ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದರು.
ಹಿಂದಿನಿಂದಲೂ ತತ್ವ-ಸಿದ್ಧಾಂತಗಳಿಗೆ ಬಿಜೆಪಿ ತನ್ನದೇ ಆದ ಸ್ಥಾನಮಾನ ನೀಡುತ್ತಾ ಬಂದಿದೆ. ಇದಕ್ಕೆ ಅಟಲ್ಜೀಯಂತಹ ನಾಯಕರೇ ಪ್ರೇರಣೆಯಾಗಿದ್ದಾರೆ. ದೇಶವಾಸಿಗಳ ಮನದಾಳವನ್ನು ದೃಷ್ಟಿಯಲ್ಲಿರಿಸಿಕೊಂಡು ತಾವು ಪ್ರಧಾನಿಯಾಗಿದ್ದಾಗ ಅದನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿದ್ದರು. ಅವರು ರಾಜಕೀಯ ಕ್ಷೇತ್ರದಲ್ಲಿ ಇರಿಸಿದ ಪ್ರತಿಯೊಂದು ಹೆಜ್ಜೆಯೂ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಆರ್. ಶ್ರೀನಿವಾಸ್ ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್, ಪ್ರಮುಖರಾದ ಕೆ.ಆರ್. ಗಣೇಶಪ್ರಸಾದ್, ದೇವೇಂದ್ರಪ್ಪ, ಚೇತನರಾಜ್ ಕಣ್ಣೂರು ಇದ್ದರು.