Advertisement

Sagara; ಕಾರ್ಯಕರ್ತರಿಗೆ ಕೊಟ್ಟ ‘ಗ್ಯಾರಂಟಿ’ಗೇ ಬಿಜೆಪಿ ವಂಚನೆ; ಆಯನೂರು ವ್ಯಂಗ್ಯ

05:50 PM Feb 06, 2024 | Shreeram Nayak |

ಸಾಗರ: ಅಧಿಕಾರಕ್ಕೆ ಬಂದಾಗ ತುರ್ತು ಪರಿಸ್ಥಿತಿಯಲ್ಲಿ ಹೋರಾಡಿ ಜೈಲು ಪಾಲಾದವರಿಗೆ ಮಾಸಾಶನ ಕೊಡುವ ಭರವಸೆಯನ್ನು ಬಿಜೆಪಿ ಈ ಹಿಂದೆ ನೀಡಿತ್ತು. ಆದರೆ ಇಂತಹ ಪ್ರಾಮಾಣಿಕ ಕಾರ್ಯಕರ್ತರಿಗೇ ಕೊಟ್ಟ ಗ್ಯಾರಂಟಿಯಲ್ಲಿ ಮೋಸ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ ವ್ಯಂಗ್ಯವಾಡಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಸಂವಾದ ನಡೆಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಬೊಮ್ಮಾಯಿಯವರು ಅಧಿವೇಶನದ ಕೊನೆಯ ದಿನ ಒಂದು ಐಫೋನ್ ಕಂಪನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 12 ಗಂಟೆಗಳ ಕೆಲಸದ ಅವಧಿಯ ನೀತಿಯ ಕಾನೂನಿಗೆ ಒಪ್ಪಿಗೆ ನೀಡಿತ್ತು. ಅವತ್ತು ಕೂಡ ಅದನ್ನು ನಾನು ಏಕಾಂಗಿಯಾಗಿ ವಿರೋಧಿಸಿದ್ದೆ. ಸದ್ಯ ಅದು ಕೈಗಾರಿಕಾ ವಲಯಕ್ಕೆ ಮಾತ್ರ ಸೀಮಿತವಾಗಿದೆ. ಈಗ ನಮ್ಮ ಸರ್ಕಾರವಿರುವಾಗ ಅದರ ಮುಂದೆಯೂ ಈ ನೀತಿ ಮಾರ್ಪಡಿಸಲು ಒತ್ತಾಯಿಸುತ್ತೇನೆ ಎಂದರು.

ಬರಗಾಲದ ಸಮಯದಲ್ಲೂ ನಮ್ಮ ಹಕ್ಕನ್ನು ಕೊಡದ, ಒಕ್ಕೂಟ ವ್ಯವಸ್ಥೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರದ ಮಲತಾಯಿ ಧೋರಣೆ ಖಂಡಿಸಿ, ರಾಜ್ಯ ಸರಕಾರವು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದು ಕಾಂಗ್ರೆಸ್‌ನ ಹೋರಾಟವಲ್ಲ. ಬದಲಾಗಿ ಸರ್ಕಾರದ ಹೋರಾಟವಾಗಿದ್ದು, ಸಂವಿಧಾನದ ಆಶಯಕ್ಕೆ ತಕ್ಕಂತೆ ಒಕ್ಕೂಟ ವ್ಯವಸ್ಥೆ ಬಲ ಪಡಿಸುವ ಆಶಯ ಹೊಂದಿದ್ದೇವೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ 5,3೦೦ ಕೋಟಿ ರೂ. ಘೋಷಣೆಯಾಗಿದ್ದರೂ ಹಣ ಬಂದಿಲ್ಲ. ತೆರಿಗೆ ಸಂಗ್ರಹ ವೃದ್ಧಿಸಿದ್ದರೂ ರಾಜ್ಯದ ಪಾಲು ನಾಪತ್ತೆ. ಬರ ಪರಿಹಾರದ 18 ಸಾವಿರ ಕೋಟಿ ರೂ. ಬಿಡುಗಡೆಯಾಗಿಲ್ಲ. ನಾಡಿನಲ್ಲಿ ಬರದ ಛಾಯೆ ಹೆಚ್ಚುತ್ತಿದ್ದು, ರಾಜ್ಯ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಸಂಸದರು ಕೇವಲ ಒಣ ಭಾಷಣ ಮಾಡುತ್ತಿದ್ದಾರೆ. ಕೇಂದ್ರದ ಮಲತಾಯಿ ಧೋರಣೆಯಿಂದ ಜನರ ಮೇಲೆ ಆರ್ಥಿಕ ಹೊಡೆತ ಬೀಳುತ್ತಿದೆ. ಇದೆಲ್ಲವನ್ನೂ ವಿರೋಧಿಸಿ ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದು ಕೇಂದ್ರದ ನಡೆ ಟೀಕಿಸಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ರಾಜ್ಯದ ಹಿತ ಕಾಯಲು ವಿಫಲರಾಗಿದ್ದಾರೆ. 25 ಸಂಸದರು ಇಲ್ಲಿನ ಬರದ ಬಗ್ಗೆ ಸದನದಲ್ಲಿ ಮಾತನಾಡಿಲ್ಲ. ಪ್ರಧಾನಿ ಹೆಸರು ಬಳಸಿಕೊಂಡು ಮತ ಕೇಳಲು ಮಾತ್ರ ಬರುತ್ತಾರೆ. ಬಿಜೆಪಿಯವರು ರಾಜ್ಯದ ಪಾಲು ಕೇಳುವುದನ್ನು ವಿರೋಧಿಸಿ, ಅಪಹಾಸ್ಯ ರಾಜಕಾರಣ ಮಾಡುತ್ತಿದ್ದಾರೆ. ಜತೆಯಲ್ಲಿ ಬಿಜೆಪಿ ಜನಸಾಮಾನ್ಯರ ಬದುಕಿಗೆ ನೇರವಾಗಿ ಸಂಬಂಧವಿಲ್ಲದ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಿದ ವಿರುದ್ಧ ವಾತಾವರಣ ಶಿವಮೊಗ್ಗ ಜಿಲ್ಲೆಯಲ್ಲಿದೆ ಇಂಥವರ ವಿರುದ್ಧ ಜನರೇ ತೀರ್ಮಾನ ಕೊಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Advertisement

ರಾಜ್ಯದಲ್ಲಿ ಲಕ್ಷಾಂತರ ಪದವೀಧರರು ತಮ್ಮ ಪದವಿ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಾಲಸೌಲಭ್ಯ ಪಡೆದಿದ್ದಾರೆ. ಇದೀಗ ಪದವಿ ಮುಗಿದು ಒಂದೆರಡು ವರ್ಷವಾಗಿರುವುದರಿಂದ ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಒತ್ತಡ ಹಾಕುತ್ತಿದೆ. ಪದವಿ ಮುಗಿದಿದ್ದರೂ ಈತನಕ ಉದ್ಯೋಗ ಸಿಗದೆ ಅವರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೇ ಬ್ಯಾಂಕ್ ಸಾಲ ಮರುಪಾವತಿಗೆ ಒತ್ತಾಯ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಈ ಹಿನ್ನೆಲೆಯಲ್ಲಿ ಒಂದೋ ಸಾಲಮನ್ನಾ ಮಾಡಿ, ಇಲ್ಲವೇ ಸಾಲದ ಮೇಲಿನ ಬಡ್ಡಿಮನ್ನಾ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಬಿ.ಆರ್. ಜಯಂತ್, ಮಲ್ಲಿಕಾರ್ಜುನ ಹಕ್ರೆ, ಚೇತನ್ ರಾಜ್ ಕಣ್ಣೂರು, ಸುರೇಶ್ ಬಾಬು, ವೈ.ಎಚ್.ನಾಗರಾಜ್, ಸುರೇಶ್‌ಬಾಬು, ಗಣಪತಿ ಮಂಡಗಳಲೆ, ಡಿ.ದಿನೇಶ್, ಮಹಾಬಲೇಶ್ವರ ಕೌತಿ, ತಾರಾಮೂರ್ತಿ, ಸೂರ್ಯನಾರಾಯಣ ಕೆ.ಎಂ. ಮೊದಲಾದವರು ಹಾಜರಿದ್ದರು.

ನೈರುತ್ಯ ಪದವೀಧರ ಕ್ಷೇತ್ರ; ನಾನೂ ಆಕಾಂಕ್ಷಿ
ನೈರುತ್ಯ ಪದವೀಧರರ ಕ್ಷೇತ್ರದಿಂದ ನಾನೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ರೇಸ್‌ನಲ್ಲಿದ್ದೇನೆ. ಸದ್ಯ ಪಕ್ಷದಿಂದ ಇಬ್ಬರು ಆಕಾಂಕ್ಷಿಗಳಿದ್ದು, ಪ್ರಚಾರ ಕಾರ್ಯ ನಡೆಸುವಂತೆ ಸೂಚನೆ ನೀಡಿದೆ. ಪಕ್ಷ ಒಪ್ಪಿದಲ್ಲಿ ಚುನಾವಣೆಗೆ ನಿಲ್ಲುತ್ತೇನೆ. ಮೊದಲಿನಿಂದಲೂ ಜನ ಪರ ನಿಲುವು ಹೊಂದಿದ್ದು, ಸಾಮಾನ್ಯರ ಕಷ್ಟಗಳಿಗೆ ಸದನದಲ್ಲಿ ಧ್ವನಿಯಾಗುವುದು ನನ್ನ ಧ್ಯೇಯ. ಇದರಲ್ಲಿ ಯಾವುದೇ ರಾಜಿಯಿಲ್ಲ. ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಪದವೀಧರ ಮತದಾರರು ನಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ಆಯನೂರು ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ನನಗೆ ಅವಕಾಶ ಕೊಡುತ್ತದೆ ಎನ್ನುವ ವಿಶ್ವಾಸ ಇದ್ದು ಎಲ್ಲ ಕಡೆಯೂ ಪ್ರವಾಸ ಮಾಡುವ ಮೂಲಕ ಮತಯಾಚನೆ ನಡೆಸುತ್ತಿದ್ದೇನೆ. ಅತೀ ಶೀಘ್ರವಾಗಿ ಟಿಕೇಟ್ ಘೋಷಣೆ ಮಾಡಲು ಒತ್ತಾಯ ಎಲ್ಲ ಕಡೆಯಿಂದ ಕೇಳಿ ಬರುತ್ತಿದೆ. ಪ್ರಸ್ತುತ ಕಾಂಗ್ರೆಸ್ ಪರವಾದ ವಾತಾವರಣ ಇದ್ದು, ನೈರುತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next