ಸಾಗರ: ಇಲ್ಲಿನ ಶಿವಪ್ಪ ನಾಯಕ ನಗರದಲ್ಲಿ ಗಣಪತಿ ಪ್ರತಿಷ್ಠಾಪನೆ ಸಮಯದಲ್ಲಿ ಅನುಮತಿ ಇಲ್ಲದೆ ಬೈಕ್ ರ‍್ಯಾಲಿ ನಡೆಸಿದ್ದಾರೆ ಎಂಬ ಕಾರಣದಿಂದ ಸುಮಾರು 20ಕ್ಕೂ ಹಿಂದೂ ಕಾರ್ಯಕರ್ತರನ್ನು, ದ್ವಿಚಕ್ರ ವಾಹನಗಳ ಸಹಿತ ನಗರ ಠಾಣೆಯಲ್ಲಿ ಇರಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು ಮಧ್ಯಪ್ರವೇಶದ ಹಿನ್ನೆಲೆ ಪೊಲೀಸರು ಪ್ರಕರಣಕ್ಕೆ ಅಂತ್ಯ ಹಾಡಿದ ಘಟನೆ ನಡೆದಿದೆ.
ಬೈಕ್ ಸಮೇತ ಹಿಂದೂ ಕಾರ್ಯಕರ್ತರನ್ನು ಠಾಣೆಯಲ್ಲಿ ಕೂರಿಸಿದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ನಗರ ಘಟಕದ ಅಧ್ಯಕ್ಷ ಗಣೇಶ ಪ್ರಸಾದ್ ಮೊದಲಾದವರು ಸೋಮವಾರ ರಾತ್ರಿ 9.30ರ ಸುಮಾರಿಗೆ ಠಾಣೆಗೆ ಭೇಟಿ ನೀಡಿ, ವೃತ್ತ ನಿರೀಕ್ಷಕ ಸೀತಾರಾಮ್‌ರೊಂದಿಗೆ ಚರ್ಚಿಸಿ, ಪೊಲೀಸರು ಯುವಕರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಕರು ಏನೋ ಹಬ್ಬದ ಹುಮ್ಮಸ್ಸಿನಲ್ಲಿ ಇಂತಹ ರ‍್ಯಾಲಿ ನಡೆಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ ಎಂದು ಅವರು ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಳಿಕ ಯುವಕರಿಂದ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು ಎಲ್ಲರಿಗೂ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಮು, ತರಕಾರಿ ರಾಘು, ಹಿಂದೂ ಸಂಘಟನೆಯ ಸಂತೋಷ್ ಶಿವಾಜಿ, ಕೇಶವ್ ಮತ್ತಿತರರು ಹಾಜರಿದ್ದರು.
ಈ ಕುರಿತಾಗಿ ಹಾಲಪ್ಪ ಅನುಯಾಯಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ವಿವರಗಳನ್ನು ದಾಖಲಿಸಿದ್ದಾರೆ.