ಸಾಗರ: ತಾಲೂಕಿನ ಬೇಸೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಕಾನುಗೋಡು ಈಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಇದೇ ಮೇ 7ರಿಂದ 9 ರವರೆಗೆ ನಡೆಯಲಿದೆ. ಈ ನಿಮಿತ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೂಲತಃ ಶರಾವತಿ ಯೋಜನೆಯ ಮುಳುಗಡೆ ಪ್ರದೇಶದಲ್ಲಿದ್ದ ಈ ದೇವಾಲಯ ಅಲ್ಲಿನ ಕುಟುಂಬಗಳು ಸ್ಥಳಾಂತರಗೊಂಡಾಗ ಸುಮಾರು 50 ವರ್ಷಗಳ ಹಿಂದೆ ದೇವರ ಮೂರ್ತಿಯನ್ನು ಸಹ ತಂದು ಬೇಸೂರು ಗ್ರಾಮದಲ್ಲಿ ಚಿಕ್ಕ ಗುಡಿ ನಿರ್ಮಿಸಿ ಪ್ರತಿಷ್ಠಾಪಿಸಲಾಗಿತ್ತು. ಮನೆ ದೇವರೆಂದು ಆರಾಧಿಸುವ ಹಲವು ಕುಟುಂಬಗಳು ಈ ದೇವರ ಪೂಜೆ ನಡೆಸುತ್ತಿದ್ದು. ಕ್ರಮೇಣ ದೇಗುಲ ಜೀರ್ಣಗೊಂಡಿತ್ತು. ಈಗ ಗ್ರಾಮಸ್ಥರು ಮತ್ತು ದೇವರ ಒಕ್ಕಲಿನವರೆಲ್ಲ ಸೇರಿ ಆಲಯ ನಿರ್ಮಿಸಿದ್ದಾರೆ.
ಸೊರಬದ ಕ್ಯಾಸನೂರು ಸಂಸ್ಥಾನ ಮಠದ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವೇದಮೂರ್ತಿ ಪುಟ್ಟಯ್ಯ ಆಲಳ್ಳಿಮಠ ಶಾಸ್ತ್ರಿಗಳ ಪೌರೋಹಿತ್ಯದ ನೇತೃತ್ವದಲ್ಲಿ ವಿವಿಧ ವಾಸ್ತು ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. 7ರಂದು ಸಂಜೆ ಆಲಯ ಪ್ರವೇಶ, ಆಲಯ ಪ್ರತಿಷ್ಠೆ, ಆಲಯ ಶುದ್ಧಿ, ವಾಸ್ತುರಕ್ಷೋಘ್ನ ಹೋಮ, ವಾಸ್ತು ಬಲಿ, ಭೂತ ಬಲಿ ಇತ್ಯಾದಿ ನಡೆಯಲಿದೆ. 8ರಂದು ಬೆಳಗ್ಗೆ ಯಾಗಶಾಲಾ ಪ್ರವೇಶ, ಋತ್ವಿಗ್ವರಣ, ಶೈವಪುಣ್ಯಾಹ, ಪಂಚಗವ್ಯ ಮಂಟಪ ಪ್ರತಿಷ್ಠಾಪನೆ, ಕಲಶ ಸ್ಥಾಪನೆ, ಅಗ್ನಿ ಜನನ, ಶಯವಾಗ್ನಿ ಪ್ರತಿಷ್ಠೆ, ವಿಗ್ರಹ ಸಂಸ್ಕಾರ ನಡೆಯಲಿದೆ. ಅದೇ ದಿನ ಸಂಜೆ ಪ್ರತಿಷ್ಠಾಂಗ ಹೋಮ, ತತ್ವ ಹೋಮ, ನಿಕುಂಭ ಸ್ಥಾಪನೆ, ವಿಗ್ರಹ ಸ್ಥಾಪನೆ ನಡೆಯಲಿದೆ. 9ರಂದು ಮಂತ್ರೋಪದೇಶ, ದೇವತಾ ಆಹ್ವಾಹನೆ, ಪ್ರಾಣಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಪೂರ್ಣಾಹುತಿ, ಕುಂಭಾಭಿಷೇಕ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9-30ಕ್ಕೆ ನಿಲಿಯೂರಿನ ಶನೇಶ್ವರ ಸಂಗೀತ ಯಕ್ಷಗಾನ ಮೇಳದಿಂದ ರಾಜಾವಿಕ್ರಮ ಎಂಬ ಪೌರಾಣಿಕ ಕಥಾನಕ ಪ್ರದರ್ಶನ ನಡೆಯಲಿದೆ.
9ರಂದು ಅಪರಾಹ್ನ ಧಾರ್ಮಿಕ ಸಭೆ ನಡೆಯಲಿದೆ. ಕ್ಯಾಸನೂರು ಸಂಸ್ಥಾನ ಮಠದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ರಾಮಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದೇವಾಲಯ ಸೇವಾ ಟ್ರಸ್ಟಿನ ಅಧ್ಯಕ್ಷ ಕೆ.ಎಸ್. ದಿನೇಶ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ಶೇಖರ ಗೌಡ, ಪ್ರಧಾನ ಅರ್ಚಕ ವೀರಪ್ಪ ಗೌಡ ತಿರಗಳಲೆ ಇನ್ನಿತರ ಪ್ರಮುಖರು ಉಪಸ್ಥಿತರಿರುವರು.