ಸಾಗರ: ಆರೋಗ್ಯ ಇಲಾಖೆ ಮೂಲಕ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದರೂ, ಅದು ಪರಿಣಾಮಕಾರಿಯಾಗಿ ಜನರಿಗೆ ತಲುಪುತ್ತಿಲ್ಲ. ಆರೋಗ್ಯ ಇಲಾಖೆ ನೌಕರರ ಒಕ್ಕೂಟ ಯೋಜನೆ ಕುರಿತು ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕೆಲಸ ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.
ನಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಭಾನುವಾರ ಆರೋಗ್ಯ ಇಲಾಖೆ ನೌಕರರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಪ ವಿಭಾಗೀಯ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಇಲಾಖೆಯ ಸೌಲಭ್ಯಗಳ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳಾಗಿರುವ ನಮಗೇ ಆರೋಗ್ಯ ಇಲಾಖೆ ಸೌಕರ್ಯ ಮಾಹಿತಿ ಗೊತ್ತಿರುವುದಿಲ್ಲ. ಸರ್ಕಾರದ ಉದ್ದೇಶಿತ ಯೋಜನೆ ಜನರಿಗೆ ತಲುಪಿ ಸದ್ಬಳಕೆಯಾಗಬೇಕು. ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ತಮಗೆ ಗೌರವಧನ ಕಡಿಮೆ ಬರುತ್ತಿದ್ದರೂ ಪ್ರಾಮಾಣಿಕವಾಗಿ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ. ಅವರಿಂದಲೇ ಶೇ. 100ರ ಅರಿವು ಕಷ್ಟ. ಜನಸಾಮಾನ್ಯರು ಮಾಹಿತಿ ಕೊರತೆಯಿಂದ ಜನಪ್ರತಿನಿಧಿಗಳ ಬಳಿ ಅರ್ಜಿ ಹಿಡಿದುಕೊಂಡು ಬರುತ್ತಾರೆ. ಅವರಿಗೆ ಇಂತಹ ಸೌಲಭ್ಯ ಇದೆ ಎಂದು ಗೊತ್ತಾದರೆ ಜನಪ್ರತಿನಿಧಿಗಳ ಮೇಲಿನ ಒತ್ತಡ ಸಹ ಸ್ವಲ್ಪ ಕಡಿಮೆ ಆಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಆರೋಗ್ಯವಂತ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ನಗರಸಭೆ, ತಾಪಂ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಸಹ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಸ್ವಸ್ಥ ಸಮಾಜ ನಿರ್ಮಾಣ ಸರ್ಕಾರದ ಉದ್ದೇಶವಾಗಿದ್ದು, ಸಂಘವು ಇದಕ್ಕೆ ಕೈ ಜೋಡಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕೆ.ಜಿ.ಪ್ರಕಾಶ್ ‘ರಾಷ್ಟ್ರೀಯ ಬಾಲಸ್ವಾಸ್ಥ್ಯ’ ಕುರಿತು, ಸಾ. ಶರ್ಮದಾ ‘ಆಯುಷ್ಮಾನ್ ಭಾರತ್’ ಯೋಜನೆ ಕುರಿತು, ಗುರುಶಾಂತ ಕೆ. ‘ಜನನಿ ಸುರಕ್ಷಾ ಯೋಜನೆ’ ಜುಬೇದಾ ಎಂ. ಅಲಿ ‘ಎಚ್.ಐ.ವಿ.’, ವಿನೋದಕುಮಾರ್ ಡಿ. ‘ಕ್ಷಯರೋಗ ನಿವಾರಣೆ’, ಅವಿನಾಶ್ ‘ಪೌಷ್ಟಿಕ ಪುನಶ್ಚೇತನ’ ಅಹಲ್ಯ ‘ಅಂಧತ್ವ ನಿವಾರಣೆ’ ವಿಷಯ ಕುರಿತು ಮಾಹಿತಿ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ವೈ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಸರ್ಜನ್ ಡಾ| ಪ್ರಕಾಶ್ ಬೋಸ್ಲೆ, ಸುರೇಶ್ ಎ., ಡಾ| ವಾಸುದೇವ್, ನಗರಸಭೆ ಸದಸ್ಯರಾದ ಟಿ.ಡಿ. ಮೇಘರಾಜ್, ಭಾವನಾ ಸಂತೋಷ್, ಎನ್. ಲಲಿತಮ್ಮ ಇನ್ನಿತರರು ಇದ್ದರು. ರಮ್ಯ ಹೆಗಡೆ ಪ್ರಾರ್ಥಿಸಿದರು. ಪ್ರಮೋದ್ ಎಂ.ಇ. ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ದೀಪಿಕಾ ಕೆ.ಬಿ. ನಿರೂಪಿಸಿದರು.