Advertisement

59 ಡೆಂಘೀ, 14 ಚಿಕೂನ್‌ಗುನ್ಯಾ ಪ್ರಕರಣ

01:44 PM Jul 20, 2019 | Naveen |

ಸಾಗರ: ತಾಲೂಕಿನಲ್ಲಿ ಒಟ್ಟು 59 ಡೆಂಘೀ ಹಾಗೂ 14 ಚಿಕೂನ್‌ಗುನ್ಯಾ ಪ್ರಕರಣ ಪತ್ತೆಯಾಗಿದೆ. 59 ಡೆಂಘೀ ಪ್ರಕರಣದಲ್ಲಿ 48 ಗ್ರಾಮಾಂತರ ಹಾಗೂ 18 ನಗರವ್ಯಾಪ್ತಿಯಲ್ಲಿ ಪತ್ತೆಯಾಗಿದೆ. 14 ಚಿಕೂನ್‌ಗುನ್ಯಾ ಪ್ರಕರಣದಲ್ಲಿ 4 ನಗರವ್ಯಾಪ್ತಿ ಹಾಗೂ 10 ಗ್ರಾಮೀಣ ಪ್ರದೇಶದಲ್ಲಿ ಕಂಡು ಬಂದಿರುವುದರಿಂದ ಜನರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿ ವೆಂಕಟರಾಜು ಹೇಳಿದರು.

Advertisement

ನಗರದ ಎಸ್‌ಎನ್‌ ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಡೆಂಘೀ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಅದರಲ್ಲಿಯೂ ಈ ಭಾಗದಲ್ಲಿ ಡೆಂಘೀ ಮತ್ತು ಚಿಕೂನ್‌ಗುನ್ಯಾ ಕಾಣಿಸಿಕೊಂಡಿರುವುದರಿಂದ ಆರೋಗ್ಯ, ಆಶಾ ಕಾರ್ಯಕರ್ತೆಯರು ಈ ಭಾಗದಲ್ಲಿ ಮನೆಮನೆಗೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ತಾಲೂಕಿನ ಬೇರೆಬೇರೆ ಭಾಗದಲ್ಲಿ ಡೆಂಘೀ ಪ್ರಕರಣ ಪತ್ತೆಯಾಗಿರುವ ಕಡೆಗಳಲ್ಲಿ ಮತ್ತು ಇತರ ಗ್ರಾಮಗಳಲ್ಲಿ ಪ್ರತಿ ಶುಕ್ರವಾರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಜ್ವರ ಬಂದರೂ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸಿ ಇಡಬಾರದು. ಡೆಂಘೀ ಕುರಿತು ಆರೋಗ್ಯ ಇಲಾಖೆ ತಿಳಿಸುವ ಮುಂಜಾಗ್ರತೆ ವಹಿಸಬೇಕು ಎಂದು ಕರೆ ನೀಡಿದರು. ನಗರಸಭೆ ಪೌರಾಯುಕ್ತ ರಾಜು ಎಸ್‌. ಮಾತನಾಡಿ, ಈಗಾಗಲೇ ನಗರಸಭೆ ವತಿಯಿಂದ ನಗರವ್ಯಾಪ್ತಿಯಲ್ಲಿ ಡೆಂಘೀ ಕುರಿತು ಜಾಗೃತಿ ಮೂಡಿಸಲಾಗಿದೆ. ನಗರಸಭೆ ವತಿಯಿಂದ ಕರಪತ್ರ ಮುದ್ರಿಸಿ ಮನೆಮನೆಗೆ ವಿತರಿಸಲಾಗುತ್ತಿದೆ. ಜೊತೆಗೆ ಫಾಗಿಂಗ್‌, ಮೆಲಾಥಿನ್‌ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ ಎಂದರು.

ನಗರಸಭೆ ಪೌರ ಕಾರ್ಮಿಕರು ಸ್ವಚ್ಛತೆ ದೃಷ್ಟಿಯಿಂದ ಸಾಕಷ್ಟು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ಮನೆಯ ಅಕ್ಕಪಕ್ಕವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಜೊತೆಗೆ ಬೇಡದ ವಸ್ತುಗಳನ್ನು ವಿಲೇ ಮಾಡಬೇಕು. ಡೆಂಘೀಗೆ ಸಂಬಂಧಪಟ್ಟ ಲಾರ್ವ ಉತ್ಪತ್ತಿಯಾಗುವ ಸ್ಥಳಗಳ ಕುರಿತು ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ. ಇದನ್ನು ಜನರು ಅನುಸರಿಸಿ, ಅನುಪಯುಕ್ತ ವಸ್ತುಗಳನ್ನು ತೆರವು ಮಾಡುವ ಜೊತೆಗೆ ಶುದ್ಧ ನೀರು ಕುಡಿಯಬೇಕು ಎಂದು ತಿಳಿಸಿದರು.

Advertisement

ಪರಿಸರ ಅಭಿಯಂತರ ಪ್ರಭಾಕರ್‌, ಹಿರಿಯ ಆರೋಗ್ಯ ನಿರೀಕ್ಷಕರಾದ ಶೈಲೇಶ್‌, ರಚನಾ, ಆರೋಗ್ಯ ಇಲಾಖೆ ಪ್ರಭಾಕರ್‌, ಸುರೇಶ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next