Advertisement

ಅಂಟಿಗೆ- ಪಂಟಿಗೆ ಉಳಿವಿಗೆ ನಾರಿ ಯತ್ನ!

03:58 PM Nov 30, 2019 | Naveen |

ಸಾಗರ: ಮಲೆನಾಡಿನ ಭಾಗದ ಗೋ ಪೂಜೆ ಸಂದರ್ಭದ ಮೂರು ದಿನಗಳ ಕಾಲ ರಾತ್ರಿ ವೇಳೆ ಮನೆ ಮನೆಗೆ ತೆರಳಿ ಹಬ್ಟಾಡುವ ಪರಂಪರೆಯ ಅಂಟಿಗೆ-
ಪಂಟಿಗೆಯನ್ನು ಸಾಗರ ನಗರದ ಮಹಿಳಾ ಸಂಘಟನೆಯೊಂದು ವಿಶಿಷ್ಟ ರೀತಿಯಲ್ಲಿ ಸತತ ಎರಡನೇ ವರ್ಷ ಮುಂದುವರಿಸಿದ್ದು, ಸಿಕ್ಕಿರುವ ಸಫಲತೆ ಅವರಿಗೆ ಈ ಪ್ರಯತ್ನ ಮುಂದುವರಿಸುವ ನಿರ್ಧಾರಕ್ಕೆ ಬರುವಂತೆ ಮಾಡಿದೆ.

Advertisement

ದೀಪಾವಳಿಯ ಮೂರು ರಾತ್ರಿಗಳಲ್ಲಿ ಹಬ್ಟಾಡುವ ತಂಡ ಆರಂಭದ ದಿನ ಹಚ್ಚಿದ ದೀಪ ಆರದಂತೆ ನೋಡಿಕೊಂಡು ಮನೆಮನೆಗೆ ತೆರಳಿ ಸಾಂಪ್ರದಾಯಿಕವಾದ ನಿರ್ದಿಷ್ಟ ಜನಪದ ಗೀತೆಗಳನ್ನು ಹಬ್ಟಾಡುತ್ತದೆ. ಆದರೆ ಸಾಗರದ ಶ್ರದ್ಧಾ ಹವ್ಯಕ ಭಜನಾ ಮಂಡಳಿ ಕಾರ್ತಿಕ ಮಾಸದ ಉದ್ದಕ್ಕೂ ನಗರದ ವಿವಿಧ ಬೀದಿಗಳ ಮನೆಮನೆಗೆ ತೆರಳಿ ಹಬ್ಟಾಡುತ್ತದೆ. ಇಲ್ಲಿ ತಾವು ತಂದ ದೀಪದಿಂದ ಮನೆಗೆ ದೀಪ ಕೊಡುವ ಬದಲು ಮನೆಯವರಿಂದ ದೀಪ ಹಚ್ಚುವ ಪದ್ಧತಿಯನ್ನು ಅನುಸರಿಸುತ್ತದೆ. ಕಳೆದ ವರ್ಷದ ಯಶಸ್ಸಿನಿಂದ ಪ್ರೇರಿತವಾಗಿರುವ ಈ ತಂಡ ಪ್ರಸಕ್ತ ಸಾಲಿನಲ್ಲಿ ನಗರದ ಆರ್‌ಎಂಸಿ ರೋಡ್‌, ಎಸ್‌ಎನ್‌ ನಗರ, ರಾಣಿ ಚೆನ್ನಮ್ಮ ವೃತ್ತ, ಚಾಮರಾಜಪೇಟೆ, ಗಾಂಧಿ ನಗರ, ಅಗ್ರಹಾರ, ಅಗಡಿ ಮಠ, ವಿನೋಬಾ ನಗರ ಮೊದಲಾದೆಡೆ ಹಬ್ಟಾಡಿದೆ. ಆಹ್ವಾನ ನೀಡಿದವರ ಮನೆಗೆ ತೆರಳುವ ಈ ತಂಡದ ಸದಸ್ಯರು ಸಂಜೆ 6ರಿಂದ ರಾತ್ರಿ 9-30ರವರೆಗೆ ಹಾಡುತ್ತಾರೆ. ಈ ವರ್ಷ ಈಗಾಗಲೇ 45ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಹಬ್ಟಾಡುವ ಪರಂಪರೆ ಮುಂದುವರಿಸಿರುವ ಈ ತಂಡ ಸಂಪೆಷಷ್ಠಿಯವರೆಗೆ ತಮ್ಮ ಸೇವೆ ಮುಂದುವರಿಸಲಿದೆ.

ಹಬ್ಟಾಡುವ ಸಂದರ್ಭದಲ್ಲಿ ಮಾತ್ರ ಬಳಸುವ ಹಾಡುಗಳನ್ನು ಈ ಮಹಿಳಾ ಗುಂಪು ಹಾಡಿ ಪದ್ಧತಿಯೊಂದನ್ನು ಜೀವಂತವಿಡುವ ಪ್ರಯತ್ನ ನಡೆಸುತ್ತಿದೆ. ಪ್ರಸ್ತುತ 20 ಹಾಡುಗಳ ತಂಡದ ಬತ್ತಳಿಕೆಯಲ್ಲಿವೆ. ಗೋವಿನ ಹಾಡುಗಳು, ಕೃಷ್ಣ ಪಾರಿಜಾತ, ಕೌರವ ಪಾಂಡವರು ಕತೆಗಳಿಗೆ ಸಂಬಂಧಿ ಸಿದ ಇನ್ನೂ 20
ಹಾಡುಗಳನ್ನು ತಂಡ ಸಂಗ್ರಹಿಸಿದ್ದು ಮುಂದಿನ ವರ್ಷ ಪ್ರಯೋಗಿಸಲಾಗುತ್ತದೆ ಎಂದು ತಂಡದ ಅಧ್ಯಕ್ಷತೆ ವಹಿಸಿರುವ ಗಿರಿಜಾ ರಾಮಚಂದ್ರ ತಿಳಿಸುತ್ತಾರೆ.

ತಂಡದ ಸದಸ್ಯ ಸಂಖ್ಯೆ ನಿಧಾನವಾಗಿ ವೃದ್ಧಿಸುತ್ತಿದೆ. ವೀಣಾ ಸತೀಶ್‌, ಗಿರಿಜಾ, ಶ್ಯಾಮಲಾ ಸುರೇಶ್‌, ವಿಜಯ, ಲಕ್ಷ್ಮೀ , ಪ್ರಶಾಂತಿ ಶ್ರೀಪಾದ ರಾವ್‌, ಸುಜಾತಾ,
ನಿರ್ಮಲಾ, ಶುಭಾ ನಾಗರಾಜ್‌ ನಗರದ ವಿವಿಧ ಹವ್ಯಕ ಮಹಿಳಾ ಪರಿಷತ್‌ನ ಸದಸ್ಯೆಯರು. ಭಜನೆಯ ಮೂಲ ಆಶಯದಿಂದ ಒಗ್ಗೂಡಿದ ತಂಡ ಈಗಿನ ದೀಪಾವಳಿ ಹಬ್ಟಾಡುವ ತಂಡವಾಗಿದೆ. 16 ತಂಡಗಳಿರುವ ಆತ್ಮಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದಲ್ಲಿ ಹೊಸ ಹೊಸ ತಂಡಗಳು ರಚನೆಯಾಗಿ ಹಬ್ಟಾಡುವ ತಂಡ ಒಂದೇ ಮನೆಗಳಿಗೆ ಮತ್ತೆ ಮತ್ತೆ ಹೋಗುವ ಬದಲು ಒಂದೇ ಸಂಘಟನೆಯಡಿ ಒಗ್ಗೂಡಿ ಮನೆ ಆಯ್ಕೆಯನ್ನು ನಿರ್ಧರಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಈ ಸಂಘಟನೆ ಹೊಂದಿದೆ.

ಹಬ್ಬ ಹಾಡಿದ ತಂಡಕ್ಕೆ ಮನೆಯ ಯಜಮಾನರು ಬಾಗಿನ, ಸಂಭಾವನೆ ನೀಡುವುದು ವಾಡಿಕೆ. ವರ್ಷದಿಂದ ವರ್ಷಕ್ಕೆ ತಂಡದ ಆದಾಯ ಹೆಚ್ಚುತ್ತಿದೆ. ಈ ವರ್ಷ ಈಗಲೇ 20 ಸಾವಿರಕ್ಕೂ ಹೆಚ್ಚು ನಿಧಿ  ಸಂಗ್ರಹವಾಗಿದೆ. ಈ ಹಣ ತಂಡದ ಸದಸ್ಯರ ನಡುವೆ ಹಂಚಿಕೆಯೇನೂ ಆಗುವುದಿಲ್ಲ. ತಂಡ ಬಡಾವಣೆಯಿಂದ ಬಡಾವಣೆಗೆ ತೆರಳಲು ಬಳಸುವ ವಾಹನದ ವೆಚ್ಚವನ್ನು ಮಾತ್ರ ಈ ನಿಧಿಯಿಂದ ಭರಿಸಿಕೊಳ್ಳುತ್ತದೆ.

Advertisement

ಸಂಗ್ರಹವಾಗುವ ಸಂಪೂರ್ಣ ಹಣವನ್ನು ಗೋವಿನ ಸೇವೆಗೆ ವಿನಿಯೋಗಿಸುವ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಕಳೆದ ವರ್ಷ ಸಂಗ್ರಹವಾದ ಮೊತ್ತವನ್ನು ಕುಂಟಗೋಡಿನ ಪುಣ್ಯಕೋಟಿ ಗೋ ರಕ್ಷಣಾ ವೇದಿಕೆಯ ಗೋಶಾಲೆಯ ಜಾನುವಾರುಗಳಿಗೆ ಹುಲ್ಲು ಖರೀದಿಸಲು ಭಜನಾ ಮಂಡಳಿ ವಿನಿಯೋಗಿಸಿತ್ತು. ಈ ವರ್ಷವೂ ಡಿಸೆಂಬರ್‌ನಲ್ಲಿ ಗೋವುಗಳಿಗೆ ಹುಲ್ಲು, ಹತ್ತಿಕಾಳು, ಹಿಂಡಿ ಮೊದಲಾದವುಗಳನ್ನು ಖರೀದಿಸಿ ಕೊಡುವುದು ಎಂದು ತಂಡ ಈಗಾಗಲೇ ನಿರ್ಧರಿಸಿದೆ. ಮಲೆನಾಡಿನ ಸಾಂಸ್ಕೃತಿಕ ಕನ್ನಡಿಯಂತಿರುವ ಈ ಸಂಪ್ರದಾಯವು ಅಜ್ಞಾನವನ್ನು, ಕತ್ತಲನ್ನು ಆ ಮೂಲಕ ಸಂಕಷ್ಟಗಳನ್ನು ಕಳೆಯುವ ಮುಖ್ಯ ಆಶಯವನ್ನು ಹೊಂದಿದೆ. ಈ ಸಂಪ್ರದಾಯ ಮುಂದುವರಿಕೆಗೆ ನಮ್ಮದೂ ಅಳಿಲು ಸೇವೆ ಇದೆ ಎಂಬುದು ನಮ್ಮ ಹೆಮ್ಮೆ.

ನಮಗೆ ಮನೆಗಳಿಂದ ಸಿಗುತ್ತಿರುವ ಉತ್ತೇಜನ ತುಂಬಾ ಸಂತೋಷವನ್ನು ತಂದುಕೊಡುತ್ತಿದೆ. ಸಾಧ್ಯವಾದಷ್ಟು ವರ್ಷ ಈ ಪರಂಪರೆಯನ್ನು ಮುಂದುವರಿಸುವ ಪ್ರಯತ್ನ ಮಾಡುತ್ತೇವೆ ಎಂದು ತಂಡದ ಸದಸ್ಯರು ಒಕ್ಕೊರಲಿನಿಂದ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next