Advertisement
ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿಷಯ ಪ್ರಸ್ತಾಪಿಸಿ, ಸರ್ಕಾರಿ ಆದೇಶವಿದೆ ಎಂದು ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪ್ರಕಾಶ್ ಬೋಸ್ಲೆ 13 ಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿದ್ದಾರೆ. ನೌಕರರ ಕುಟುಂಬ ಬೀದಿಗೆ ಬಂದಿದೆ. ಈ ಸಂಬಂಧ ಬೋಸ್ಲೆ ಅವರ ಬಳಿ ವಿಚಾರಿಸಲು ಹೋದಾಗ ಅವರು ಜನಪ್ರತಿನಿಧಿ ಎನ್ನುವುದನ್ನು ಪರಿಗಣಿಸದೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ದೂರಿದರು.
Related Articles
Advertisement
ಇದಕ್ಕೆ ಸ್ಪಷ್ಟನೆ ನೀಡಿದ ಡಾ| ಪ್ರಕಾಶ್ ಬೋಸ್ಲೆ ಕೆ.ಆರ್., ತಾಪಂ ಅಧ್ಯಕ್ಷರಿಗೆ ನಾನು ಅಗೌರವ ತೋರಿಸಿಲ್ಲ. ಸರ್ಕಾರಿ ಸುತ್ತೋಲೆಯಂತೆ ಹೆಚ್ಚುವರಿಯಾಗಿರುವ 13 ಗುತ್ತಿಗೆ ನೌಕರರನ್ನು ತೆಗೆದು ಹಾಕಲಾಗಿದೆ. ಇದರಲ್ಲಿ ನನ್ನ ಯಾವುದೇ ತಪ್ಪು ಇರಲಿಲ್ಲ. ಆದರೆ ಅಧ್ಯಕ್ಷರು ನನ್ನ ಕಚೇರಿಗೆ ಬಂದು ನನಗೆ ಅವಹೇಳನಕಾರಿಯಾಗಿ ಮಾತನಾಡುವ ಜೊತೆಗೆ ನನ್ನ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಿದ್ದಾರೆ. ಇಂತಹ ವಾತಾವರಣದಲ್ಲಿ ನಾವು ನಿರ್ಭೀತಿಯಿಂದ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಎಸಿ ದರ್ಶನ್ ಎಚ್.ವಿ., ವೈದ್ಯರು ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣವಿರಬೇಕು. ವೈದ್ಯರು ಕರ್ತವ್ಯ ಪಾಲನೆಯಲ್ಲಿ ಲೋಪ ಎಸಗಿದ್ದರೆ ನನ್ನ ಗಮನಕ್ಕೆ ತನ್ನಿ. ದೂರನ್ನು ಸಮಗ್ರವಾಗಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಸಕ್ಷಮ ಪ್ರಾಧಿಕಾರದ ಎದುರು ನೀವು ದೂರು ನೀಡದೆ ಏಕಾಏಕಿ ವೈದ್ಯರನ್ನು ಬೈಯುವುದು, ಹಲ್ಲೆಗೆ ಮುಂದಾಗುವ ಪ್ರಯತ್ನ ಮಾಡಬೇಡಿ. ಗುತ್ತಿಗೆ ನೌಕರರನ್ನು ತೆಗೆದು ಹಾಕಿರುವುದಕ್ಕೆ ಸಂಬಂಧಪಟ್ಟಂತೆ ಆರೋಗ್ಯ ರಕ್ಷಾ ಸಮಿತಿಯಲ್ಲಿ ವಿಷಯ ಚರ್ಚೆ ಮಾಡಲಾಗುತ್ತದೆ. ಗುತ್ತಿಗೆ ನೌಕರರನ್ನು ತೆಗೆದು ಹಾಕುವ ಮೊದಲು ಅವರಿಗೆ ನೊಟೀಸ್ ಕಡ್ಡಾಯವಾಗಿ ನೀಡಬೇಕು. ಆರೋಗ್ಯ ರಕ್ಷಾ ಸಮಿತಿ ಸಭೆ ಸೇರಿ ತೀರ್ಮಾನ ಕೈಗೊಳ್ಳುವವರೆಗೂ ಸಂಬಂಧಪಟ್ಟ ಗುತ್ತಿಗೆದಾರ ನೌಕರರಿಗೆ ಸಂಬಳ ಪಾವತಿ ಮಾಡಬೇಕು. ವೈದ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವವರ ಬೆಂಬಲಕ್ಕೂ ಸಹ ಜನಪ್ರತಿನಿಧಿಗಳು ನಿಲ್ಲಬಾರದು ಎಂದು ಹೇಳಿದರು.
ಪ್ರಸ್ತುತ ವೈದ್ಯರ ಕೊರತೆ ಇದೆ. ಇರುವ ವೈದ್ಯರನ್ನು ಕಳೆದುಕೊಂಡರೆ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಪಾವತಿ ಮಾಡಿ ಚಿಕಿತ್ಸೆ ಪಡೆಯುವ ಸ್ಥಿತಿ ಉಂಟಾಗುತ್ತದೆ. ಇದಕ್ಕೆ ನಾವೆಲ್ಲ ಹೊಣೆಗಾರರು ಆಗಬೇಕಾಗುತ್ತದೆ. ಇಂತಹ ಘಟನೆಗಳಿಂದ ವೈದ್ಯರು ಕೆಲಸ ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲರೂ ಸಣ್ಣಪುಟ್ಟ ಲೋಪಗಳಾದಾಗ ಕುಳಿತು ಚರ್ಚೆ ನಡೆಸಿ, ಸೌಹಾರ್ದಯುತವಾಗಿ ಹೋಗೋಣ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ, ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ| ಗುಡದಪ್ಪ ಕಸವಿ, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥಸ್ವಾಮಿ ಮತ್ತಿತರರು ಇದ್ದರು.