Advertisement

ವರ್ಷದೊಳಗೆ ಕಿತ್ತು ಹೋದ ರಸ್ತೆ ; ಸಂಚಾರಕ್ಕೆಸಮಸ್ಯೆ!

01:15 PM Nov 30, 2019 | Naveen |

ಸಾಗರ: ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವ ಜನಪ್ರತಿನಿಧಿಗಳು ಪ್ರತಿ ವರ್ಷ ಕೋಟಿಗಟ್ಟಲೆ ಹಣ ತಂದು ತಾಲೂಕಿನ ವಿವಿಧ ಭಾಗದ ರಸ್ತೆಗಳ ಡಾಂಬರೀಕರಣ ಮಾಡುತ್ತಿದ್ದರೂ ಮಳೆಗಾಲ ಕಳೆಯುತ್ತಿದ್ದಂತೆ ರಸ್ತೆಗಳು ಅಧ್ವಾನದ ಸ್ಥಿತಿ ನಿರ್ಮಾಣವಾಗಿ ಅಭಿವೃದ್ಧಿ ದಶಕಗಳ ಹಿಂದೆ ಹೋಗಿದೆಯೇನೋ ಎನ್ನಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ.

Advertisement

ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ತಾರತಮ್ಯ ಇಲ್ಲದಂತೆ ತಾಲೂಕಿನಾದ್ಯಂತ ಸಂಚಾರದ ಸಂಕಟ ಹೆಚ್ಚಿಸುತ್ತಿರುವ ರಸ್ತೆಗಳ ಸಂಖ್ಯೆ ಏರುತ್ತಲೇ ಇದೆ. ಈ ಬಾರಿಯ ಮಳೆಗಾಲದ ರಭಸಕ್ಕೆ ಹಾಳಾದ ರಸ್ತೆ, ಮುರಿದುಬಿದ್ದ ಸೇತುವೆ, ಮೋರಿಗಳ ಸಂಖ್ಯೆ ಗಣನೀಯವಾಗಿದೆ. ಗ್ರಾಮಸ್ಥರೇ ರಸ್ತೆಯನ್ನು ಶ್ರಮದಾನದ ಮೂಲಕ ಮಟ್ಟಸ ಮಾಡಿದ, ಕಾಲುಸೇತುವೆ ನಿರ್ಮಿಸಿದ ಘಟನೆ ಸಹ ತಾಲೂಕಿನಲ್ಲಿ ಕಳೆದೆರಡು ತಿಂಗಳಿನಲ್ಲಿ ನಡೆದಿದೆ.

ಹಿಂದೆಲ್ಲ ಒಮ್ಮೆ ಡಾಂಬರೀಕರಣ ಆದ ರಸ್ತೆ ಹಲವು ವರ್ಷಗಳ ಕಾಲ ಬಾಳುತ್ತಿತ್ತು. ಈಗಿನಷ್ಟು ಮಟ್ಟಸವಾಗಿರದಿದ್ದರೂ ಎರಡು ವರ್ಷಕ್ಕೊಮ್ಮೆ ಗುಂಡಿಗಳನ್ನು ಮುಚ್ಚಿದರೆ ಸಾಕಾಗುತ್ತಿತ್ತು. ಆದರೆ ಯಾಂತ್ರೀಕರಣದ ಪ್ರಗತಿಯ ನಂತರವೂ ನಾವು ವರ್ಷ ಬಾಳದ ರಸ್ತೆಗಳನ್ನು ಮಾಡುತ್ತಿದ್ದೇವೆ ಎಂಬುದು ಅವಮಾನಕರ ಎಂದು ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸುವ ಸ್ಥಿತಿ ನಿರ್ಮಾಣವಾಗಿದೆ.

ಮೊದಲ ಸಲ ಡಾಂಬರೀಕರಣ ಆದ ನಂತರ ಇದುವರೆಗೂ ಡಾಂಬರ್‌ ಕಾಣದ ರಸ್ತೆಗಳು ಸಹ ತಾಲೂಕಿನಲ್ಲಿ ಇರುವ ಬಗ್ಗೆ ಸಾರ್ವಜನಿಕರು ಮರುಕಪಡುತ್ತಾರೆ. ಡಾಂಬರ್‌ ಹಾಕಿದ ಐದೇ ವರ್ಷಗಳಲ್ಲಿ ಮತ್ತೆ ರಸ್ತೆ ಹಾಳಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಗುತ್ತಿಗೆದಾರ ಹಾಗೂ ಇಲಾಖೆ ರಸ್ತೆ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಹುಳೇಗಾರಿನಲ್ಲಿ ಗ್ರಾಮಸ್ಥರೇ ಶ್ರಮದಾನದ ಮೂಲಕ ರಸ್ತೆ ದುರಸ್ತಿಗೆ ಮುಂದಾದ ಘಟನೆ ನಡೆದಿತ್ತು.

ತ್ಯಾಗರ್ತಿ ಸಮೀಪದ ಬರೂರು ಗ್ರಾಪಂ ವ್ಯಾಪ್ತಿಯ ತೆಪ್ಪಗೋಡು ಗ್ರಾಮದ ಮುಖ್ಯ ರಸ್ತೆ ಕಳೆದ 25 ವರ್ಷಗಳಿಂದ ದುರಸ್ತಿ ಕಾಣದೆ ಇದ್ದುದು ಈ ಬಾರಿ ಪತ್ರಿಕೆಗಳಿಂದಾಗಿ ಗಮನ ಸೆಳೆಯಿತು. ನಗರದ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ರಸ್ತೆಗಳನ್ನು ಸಂಪೂರ್ಣ ಹಾಳುಗೆಡವಿದೆ. ಹತ್ತಾರು ರಸ್ತೆಯಲ್ಲಿ ಏಕಾಏಕಿ ಹೊಂಡ ಬಿದ್ದು ಅವಘಢಗಳು ಸಂಭವಿಸಿವೆ.

Advertisement

ಸಾಗರ ಟಾಕೀಸ್‌ ರಸ್ತೆಯಲ್ಲಿ ಈಗಲೂ ಗುಂಡಿಗಳು ಬಲಿಪಶುಗಳಿಗಾಗಿ ಕಾಯುತ್ತಿವೆ. ಒಬ್ಬನೇ ವ್ಯಕ್ತಿ ನಾಲ್ಕೈದು ಸಲ ಹಾಗೂ ನೂರಕ್ಕೂ ಹೆಚ್ಚು ವ್ಯಕ್ತಿಗಳು ರಸ್ತೆಯಲ್ಲಿನ ಗುಂಡಿಗಳಲ್ಲಿ ಬಿದ್ದು ನೋವು ಅನುಭವಿಸಿದ್ದಾರೆ. ಯುಜಿಡಿಯ ಮ್ಯಾನ್‌ ಹೋಲ್‌ ರಸ್ತೆಗಿಂತ ಮೇಲೆ ನಿರ್ಮಾಣವಾಗಿರುವುದು ಕೂಡ ಅಪಾಯಕ್ಕೆ ಕಾರಣವಾಗಿದೆ. ಡಾಂಬರೀಕರಣಗೊಂಡ ರಸ್ತೆ ಹಾಗೂ ರಸ್ತೆಯ ಪಕ್ಕದ ಜಾಗಗಳ ನಡುವೆ ಒಂದಡಿಯಷ್ಟು ಅಂತರವಿರುವುದು ಕೂಡ ವಾಹನ ನಿಲ್ಲಿಸಲು ಕೂಡ ಸಮಸ್ಯೆ ಉಂಟುಮಾಡಿದೆ.

ರಸ್ತೆಗಳ ಸಂಪರ್ಕ ಸ್ಥಳದಲ್ಲಿ ಜಲ್ಲಿರಾಶಿ: ಅಣಲೇಕೊಪ್ಪದ ಗಣೇಶನಗರ ಹಾಗೂ ಶಿರವಾಳ ರಸ್ತೆಗೆ ಸಂಪರ್ಕ ಕಲ್ಪಿಸುವ ಬಹಳ ಪ್ರಯೋಜನಕಾರಿ ರಸ್ತೆ ಸಂಪೂರ್ಣ ಡಾಂಬರೀಕರಣವಾಗದೇ ಅರ್ಧ ಭಾಗ ಮಾತ್ರ ಡಾಂಬರೀಕರಣವಾಗಿದೆ. ಇಂತಹ ನೂರಾರು ರಸ್ತೆಗಳು ಸಂಚಾರಕ್ಕೆ ಸಂಚಕಾರ ತಂದಿವೆ. ಬಹುತೇಕ ಕಿರುರಸ್ತೆಗಳು ಮುಖ್ಯ ರಸ್ತೆಗೆ ಸೇರುವ ಸ್ಥಳದಲ್ಲಿ ಜಲ್ಲಿ ರಾಶಿ ಬಿದ್ದಿದ್ದು, ಕಾಮಗಾರಿ ಪೂರ್ಣ ಆಗಿಲ್ಲ.

ವಿಜಯನಗರದಿಂದ ಭೀಮನಕೋಣೆ ರಸ್ತೆಗೆ ಸಂಪರ್ಕ ಕಲ್ಪಿಸುವ ಮೂರು ನಾಲ್ಕು ಕಡೆಗಳಲ್ಲಿ ಹಾಗೂ ಬಿಎಚ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ನೆಹರೂ ನಗರದ ಹಲವು ಹಾಗೂ ಜೋಗ ರಸ್ತೆಯಲ್ಲಿ ಕೆಲವು ಕಡೆ ಈ ಸಮಸ್ಯೆ ಅಪಾಯಕ್ಕೆ ಕಾರಣವಾಗಿದೆ. ರಸ್ತೆ ಬದಿಗೆ ಅಪಾಯಕಾರಿ ಕೊರಕಲು: ಬಿಎಚ್‌ ರಸ್ತೆ ಸೇರಿದಂತೆ ಹತ್ತಾರು ಕಡೆ ರಸ್ತೆಯ ಬದಿಯಲ್ಲಿ ಅಪಾಯಕಾರಿ ಕೊರಕಲು ನಿರ್ಮಾಣವಾಗಿದೆ.

ಯುಜಿಡಿ ಕಾಮಗಾರಿ ಅಧ್ವಾನ, ಅತಿವೃಷ್ಟಿಯಿಂದಾಗಿ ರಸ್ತೆಯ ಬದಿಯ ಕೊರಕಲು ಅಪಾಯಕ್ಕೆ ಕಾರಣವಾಗಿದೆ. ಬಿಎಚ್‌ ರಸ್ತೆಯಲ್ಲಿನ ಡಿವೈಎಸ್‌ಪಿ ಕಚೇರಿಗೆ ಪ್ರವೇಶ ಮಾಡುವಲ್ಲಿ ಸೇರಿದಂತೆ ಅನೇಕ ಕಡೆ ಸುಗಮವಾಗಿ ಸಂಚಾರ ಸಾಧ್ಯವೇ ಇಲ್ಲವಾಗಿದೆ. ಹಲವು ಕಡೆ ಮಳೆ ನೀರು ಕೊಚ್ಚಿಕೊಂಡು ಬಂದ ಕಲ್ಲುಮಿಶ್ರಿತ ಮಣ್ಣು ರಸ್ತೆಯ ಅರ್ಧ ಭಾಗ ಆವರಿಸಿದ್ದು, ವಾಹನ ಸವಾರರು ಜಾರಿ ಬೀಳುವಂತಾಗಿದೆ.

ಗ್ರಾಮಾಂತರದ ಹಲವು ಕಡೆ ರಸ್ತೆ ಬದಿಗಿನ ಗಿಡಗಳನ್ನು ಸಕಾಲದಲ್ಲಿ ಕಠಾವು ಮಾಡದೇ ಸಮಸ್ಯೆ ಸೃಷ್ಟಿಯಾಗಿದೆ. ಗ್ರಾಮೀಣ ಭಾಗ: ಲಿಂಗದಹಳ್ಳಿ ಬಿಳಿಸಿರಿ, ಹಿರೇಮನೆ ಮಂಜಿನ ಕಾನು, ಹಾನಂಬಿ ಹೊಳೆ ಸಮೀಪದ ಅರಳೀಕೊಪ್ಪ ರಸ್ತೆ, ಸಾಗರ ಆವಿನಹಳ್ಳಿ ರಸ್ತೆಯಿಂದ ಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಬೆಳೆಯೂರು ಮುಖ್ಯ ರಸ್ತೆಯಿಂದ ಮುಂಡಿಗೆಸರ, ಮಿಟ್ಲಿಕೊಪ್ಪ, ಸಿರಿವಂತೆ ಹುಳೆಗಾರು, ಸಿರಿವಂತೆ ಗೋಳಗೋಡು, ಮಡಸೂರು ಲಿಂಗದಹಳ್ಳಿ, ಬೇಳೂರು ಕಾನಗೋಡು, ಚಿಪ್ಪಳಿ ಶಾಲೆ ರಸ್ತೆ, ಶೆಟ್ಟಿಸರ ರಸ್ತೆ, ಹಾರೆಗೊಪ್ಪ ತೆರವಿನಕೊಪ್ಪ ರಸ್ತೆಯ ಕೊನೆಯ ಭಾಗ, ಸಾಗರ ತ್ಯಾಗರ್ತಿ ನೀಚಡಿ ರಸ್ತೆ, ಎನ್‌ಎಚ್‌ 206ರಿಂದ ಬ್ರಾಹ್ಮಣ ಕುಗ್ವೆ ದೊಂಬೆ ಖಂಡಿಕಾ ಸಂಪರ್ಕ ರಸ್ತೆ, ಮುಂಗರವಳ್ಳಿ ಗ್ರಾಮದ ರಸ್ತೆ, ಕೆಲುವೆ, ಬಲೆಗಾರು, ಹಿರೇಮನೆ ಗೋಣೂರು, ಇಕ್ಕೇರಿ ವರದಹಳ್ಳಿ ಸಂಪರ್ಕ ರಸ್ತೆ ಇನ್ನೂ ಮುಂತಾದ ಗ್ರಾಮಾಂತರದ ರಸ್ತೆ ಸಂಚಾರ ಯೋಗ್ಯವಾಗಿಲ್ಲ.

ಅರಳಗೋಡು ಗ್ರಾಪಂ ವ್ಯಾಪ್ತಿಯ ಕಾನೂರು ಕೋಟೆ ಸಮೀಪದ ಹೆಬೈನಕೆರೆ ಜೀಕನಹಳ್ಳಿ ರಸ್ತೆಯಲ್ಲಿ ಸಂಚರಿಸುವುದು ಟ್ರೆಕ್ಕಿಂಗ್‌ ಮಾಡಿದಂತೆ ಎಂಬ ಅಭಿಪ್ರಾಯವಿದೆ. ಈ ಭಾಗದಲ್ಲಿ ರಸ್ತೆ ಬದಿಗೆ ಚರಂಡಿ ನಿರ್ಮಾಣ, ಟಾರ್‌ ಹಾಕುವುದು ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ವನ್ಯಜೀವಿ ಕಾನೂನು ಅಡ್ಡಬರುತ್ತದೆ ಎಂಬುದು ಗ್ರಾಮೀಣರ ಆಕ್ಷೇಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next