Advertisement

Sagara: ಉರುಳಿದ ಬೃಹತ್ ಮಾವಿನ ಮರ; ತಪ್ಪಿದ ಅಪಾಯ

03:52 PM Jul 18, 2024 | Kavyashree |

ಸಾಗರ: ಇಲ್ಲಿನ ರಾಘವೇಂದ್ರ ಮಠದ ಪಕ್ಕದಲ್ಲಿದ್ದ ಬೃಹತ್ ಮಾವಿನ ಮರವೊಂದು ಜು.18ರ ಗುರುವಾರ ಬುಡ ಸಹಿತ ಮುರಿದು ಬಿದ್ದಿದೆ.

Advertisement

ಮಠದ ಕಡೆಗಲ್ಲದೆ ಇನ್ನಾವುದೇ ದಿಕ್ಕಿನಲ್ಲಿ ಮರ ಉರುಳಿದ್ದರೂ ದೊಡ್ಡ ಪ್ರಮಾಣದ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

ವಿಪರೀತ ಮಳೆಯಿಂದಾಗಿ ಮಾವಿನ ಮರ ಏಕಾಏಕಿ ಮುರಿದು ಬಿದ್ದಿದ್ದು ರಾಘವೇಂದ್ರ ಸ್ವಾಮಿ ಮಠದ ಪಕ್ಕದ ರಸ್ತೆಸಂಚಾರ ಕೆಲಕಾಲ ಬಂದ್ ಆಗಿತ್ತು. ಮರ ಬಿದ್ದಿದ್ದರಿಂದ ಮಠದ ಗೋಡೆಗೆ ಸ್ವಲ್ಪ ಹಾನಿಯಾಗಿದೆ. ಮರದ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್ ಮರದಡಿ ಸಿಲುಕಿ ಪುಡಿಪುಡಿಯಾಗಿದೆ.

ಈ ರಸ್ತೆಯಲ್ಲಿ ಸದಾ ಹೆಚ್ಚಿನ ಜನ ಸಂಚಾರ ಇರುತ್ತಿತ್ತು. ಜೊತೆಗೆ ಗುರುವಾರ ಆಗಿದ್ದರಿಂದ ಮಠಕ್ಕೆ ಬರುವ ಭಕ್ತರ ಸಂಖ್ಯೆ ಸಹ ಜಾಸ್ತಿ ಇತ್ತು. ಆದರೆ ಮರ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಿದ್ದಿದೆ. ಇದರಿಂದ ಕೆಳಗಿನ ರಸ್ತೆಯ ಸಂಚಾರ ಮಾತ್ರ ಅಸ್ತವ್ಯಸ್ತಗೊಂಡಿತು.

Advertisement

ನಗರಸಭೆಯಿಂದ ತಕ್ಷಣ ಕಾರ್ಯಾಚರಣೆ: ಮರ ಬಿದ್ದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಬೃಹತ್ ಮರವನ್ನು ನಗರಸಭೆ ಮತ್ತು ಅರಣ್ಯ ಇಲಾಖೆಯ ಸಹಾಯದಿಂದ ಕಟಾವು ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ, ಗಾಂಧಿನಗರ ರಾಘವೇಂದ್ರಸ್ವಾಮಿ ಮಠದ ಪಕ್ಕದಲ್ಲಿ ಮಾವಿನ ಮರ ಬಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ರಸ್ತೆ ಸಂಚಾರಕ್ಕೆ ಸ್ವಲ್ಪಕಾಲ ಅಡ್ಡಿಯಾಗಿತ್ತು. ತಕ್ಷಣ ಮರವನ್ನು ತೆರವುಗೊಳಿಸಲಾಗಿದೆ ಎಂದರು.

ಮುಂದುವರೆದು ಮಾತನಾಡಿ, ವಿಪರೀತ ಮಳೆಯಿಂದ ನಗರ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಮಳೆಹಾನಿಯಾಗಿದೆ. ಶಾಸಕರು ಮತ್ತು ಆಡಳಿತಾಧಿಕಾರಿಗಳ ಸೂಚನೆ ಮೇರೆಗೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ನಗರಸಭೆಯಿಂದ ಅಗತ್ಯ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ. ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು, ವಾಹನ ಸವಾರರು ಹೆಚ್ಚು ಜಾಗೃತೆಯಿಂದ ಇರಬೇಕು. ಪೋಷಕರು ತಮ್ಮ ಮಕ್ಕಳನ್ನು ಜೋಪಾನ ಮಾಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next