Advertisement

Sagara: ಕೆಎಫ್‌ಡಿ ಬಾಧಿತ 8 ಮಂದಿಗೆ ಚಿಕಿತ್ಸೆ

08:40 PM Feb 05, 2024 | Team Udayavani |

ಸಾಗರ: ಸಾಗರದ ಸರಕಾರಿ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹೊಸನಗರ ಭಾಗದ ಹೆಬ್ಬೈಲು, ಮಾರುತಿಪುರ ಹಾಗೂ ನಿಟ್ಟೂರು ಭಾಗದ ೮ ಜನ ಕೆಎಫ್‌ಡಿ ಪಾಸಿಟಿವ್ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು ಅಗತ್ಯವಿದ್ದಲ್ಲಿ ಮಣಿಪಾಲದ ಆಸ್ಪತ್ರೆಗೆ ತೆರಳಬಹುದು. ಇದಕ್ಕಾಗಿ ಅಲ್ಲಿನ ಆಸ್ಪತ್ರೆಗೂ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಗಾಬರಿ ಪಡುವ ಅಗತ್ಯವಿಲ್ಲ ಎಂದು ಅರಣ್ಯ ಕ್ಯೆಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಉಪವಿಭಾಗೀಯ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು, ಬಾಧಿತರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೂ ತಿಳಿಸಲಾಗಿದೆ. ಈ ವರ್ಷ ಮತ್ತೆ ಮಂಗನ ಕಾಯಿಲೆ ಹಲವೆಡೆ ಕಾಣಿಸಿಕೊಂಡಿದೆ. ಅಧಿಕಾರಿಗಳು, ವೈದ್ಯರ ಜತೆ ಸಮಾಲೋಚನೆ ನಡೆಸಿದ್ದು, ಮುಂಜಾಗ್ರತಾ ಕ್ರಮಗಳಿಗೆ ಒತ್ತುನೀಡಲಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೂ ಜನರಿಗೆ ಅರಿವು ಮೂಡಿಸುವ ಕಾರ್ಯ ಚುರುಕುಗೊಂಡಿದೆ. ಸಾರ್ವಜನಿಕರು ಮಂಗನ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದಿರುವುದರಿಂದ ಜ್ವರ ಪ್ರತಿಬಂಧಕಗಳನ್ನು ನೀಡಲಾಗಿದೆ. ಡಿಎಂಪಿ ಎಣ್ಣೆಗಳನ್ನು ಗ್ರಾಮ ಪಂಚಾಯ್ತಿ, ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಕಾಡಿನ ಸಂಪರ್ಕದಲ್ಲಿರುವವರು ಕಟ್ಟುನಿಟ್ಟಾಗಿ ಇದನ್ನು ಬಳಸಬೇಕು. ರೋಗಿಗಳ ಸುರಕ್ಷತೆಗಾಗಿ ಅರಳಗೋಡು, ಬಾರಂಗಿ ಮೊದಲಾದ ಕಡೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಣಿಪಾಲದಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುವವರಿಗೆ ಉಚಿತ ಚಿಕಿತ್ಸೆ ನೀಡುವಂತೆ ವೈದ್ಯರಿಗೂ ಸೂಚಿಸಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸಾಗರ ತಾಲೂಕು ಸೇರಿದಂತೆ ಸಿರಸಿ, ಸಿದ್ದಾಪುರ, ಹೊಸನಗರ ಮೊದಲಾದ ಕಡೆಗಳಿಂದ ಚಿಕಿತ್ಸೆಗೆ ಬರುತ್ತಾರೆ. ಇಲ್ಲಿ ಸಂಶೋದನಾ ಕೇಂದ್ರ ತೆರೆಯಬೇಕೆನ್ನುವ ಒತ್ತಾಯ ಮೊದಲಿನಿಂದಲೂ ಇದೆ. ಹಿಂದೆ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಅಧಿವೇಶನದಲ್ಲಿ ಸರಕಾರ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದು ಸಾಗರದಲ್ಲಿ ಸಂಶೋಧನಾ ಕೇಂದ್ರ ತೆರೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Advertisement

ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪರಪ್ಪ, ಆಸ್ಪತ್ರೆ ಸಮಿತಿ ಸದಸ್ಯ ಜಯಕುಮಾರ್, ಪಣೀಂದ್ರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next