ಬೀದರ್: ಮುಸ್ಲಿಮರ ಮತಗಳಿಂದಲೇ ಬೀದರ್‌ನಲ್ಲಿ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಸಂಸದರಾಗಿ ಗೆದ್ದಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಕೆಲಸಗಳನ್ನು ತಲೆಬಾಗಿ ಮಾಡಬೇಕು ಎಂಬ ಅಲ್ಪಸಂಖ್ಯಾಕರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ವಿವಾದ ಸೃಷ್ಟಿಸಿದೆ.
ನಗರದಲ್ಲಿ ಸೋಮವಾರ ನಡೆದಿದ್ದ ವಕ್ಫ್ ಅದಾಲತ್‌ನಲ್ಲಿ ವ್ಯಕ್ತಿಯೊಬ್ಬರು ಅಂತ್ಯಸಂಸ್ಕಾರ ನಡೆಸಲು ಖಬರಸ್ಥಾನಕ್ಕೆ ಅರಣ್ಯ ಜಾಗ ಬಿಡಿಸಿಕೊಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸುವ ವೇಳೆ ಸಚಿವ ಜಮೀರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ ನನಗೆ ಪರಿಚಿತರು. ಅವರ ಮಗ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದ ಗೆದ್ದಿದ್ದು, ನಮ್ಮ ಮುಸ್ಲಿಮರ ಕೆಲಸಗಳನ್ನು “ಸಿರ್ ಝುಕಾಕೇ’ (ತಲೆ ಬಾಗಿಸಿ) ಮಾಡಬೇಕು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಇದು ಸಚಿವ ಜಮೀರ್ ಖಾನ್ ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಕಾಂಗ್ರೆಸ್ ಅಥವಾ ನಮ್ಮ ಅಭಿಪ್ರಾಯವಲ್ಲ. ಸಾಗರ್ ಎಲ್ಲ ಜಾತಿ, ಭಾಷೆ ಮತ್ತು ವರ್ಗದವರ ಮತಗಳಿಂದ ಗೆದ್ದಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಸಾಗರ್ ಬೀದರ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಕ್ಷೇತ್ರದ ಶ್ರೀಸಾಮಾನ್ಯರು ಹೇಳಿದ ಕೆಲಸಗಳನ್ನು ಖಂಡ್ರೆ ತಲೆಬಾಗಿ ಮಾಡಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ಸಿಗರು ಗುಲಾಮರು
ಬಿಜೆಪಿ ಪರಾಜಿತ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಜಮೀರ್ ಹೇಳಿಕೆಯನ್ನು ಖಂಡಿಸಿದ್ದು, ಸಾಗರ್‌ಗೆ ಮತ ಹಾಕಿರುವ ಬಹುಸಂಖ್ಯಾಕರು ಇದನ್ನು ವಿರೋಧಿಸಬೇಕು ಎಂದಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭ “ವೋಟ್ ಜೆಹಾದ್ ಮಾಡಿ’ ಎಂದು ಕಾಂಗ್ರೆಸ್‌ನವರು ಕರೆ ಕೊಟ್ಟಿದ್ದರು. ಇದೇ ಕಾರಣಕ್ಕೆ ಸಚಿವ ಜಮೀರ್ ಅಹ್ಮದ್ ಅವರು ಇಂತಹ ಹೇಳಿಕೆ ನೀಡಿದ್ದಾರೆ.
-ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ