ಸಾಗರ: ತಾಲೂಕಿನ ತ್ಯಾಗರ್ತಿಯ ಸಾಗರ ರಸ್ತೆಯಲ್ಲಿರುವ ಖುಷ್ಕಿ ಜಮೀನಿನ ವಿವಾದಕ್ಕೆ ಸಂಬಂಧಪಟ್ಟಂತೆ ಎರಡು ಗುಂಪುಗಳ ನಡುವೆ ಗಲಾಟೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಅವರು ವಾಸಿಸುತ್ತಿದ್ದ ಮನೆಯ ಮೇಲ್ಛಾವಣಿಯನ್ನು ಕಿತ್ತು, ಶೀಟ್‌ಗಳನ್ನು ಒಡೆದು ಹಾಕುವುದರಲ್ಲಿ ಪರ್ಯವಸಾನಗೊಂಡ ಘಟನೆ ಭಾನುವಾರ ನಡೆದಿದೆ.
ಘಟನೆಗೆ ಸಂಬಂಧಪಟ್ಟಂತೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಎರಡು ಬಣ ಪರಸ್ಪರ ದೂರು ನೀಡಿದ್ದು ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ವಿವಾದಿತ ಜಾಗವನ್ನು ಸಾಗರ ನಿವಾಸಿಯಾದ ಸಯ್ಯದ್ ಅನ್ವರ್ ಉಲ್ ಹಕ್ ಎಂಬುವವರು ಅಯ್ಯಪ್ಪ ಸ್ವಾಮಿ ಸೇವಾಸಮಿತಿಯ ದೇವಾಲಯ ನಿರ್ಮಾಣಕ್ಕೆ ಬರೆದುಕೊಟ್ಟಿದ್ದಾರೆ ಎಂಬ ಮಾತಿದೆ. ಆದರೆ ಈ ಜಾಗದಲ್ಲಿ ಮರಾಠಿ ಸುರೇಶ್ ಎಂಬುವವರು ಹಲವಾರು ವರ್ಷಗಳಿಂದ ಜೋಳ ಬೆಳೆಯುತ್ತಿದ್ದು ಇತ್ತೀಚಿಗೆ ಅಲ್ಲಿಯೇ ಶೆಡ್ ನಿರ್ಮಿಸಿಕೊಂಡು ಜಾನುವಾರುಗಳನ್ನು ಕಟ್ಟಿಕೊಂಡು ವಾಸವಿದ್ದರು ಎನ್ನಲಾಗಿದೆ.
ಈ ಶೆಡ್ ನಿರ್ಮಾಣಕ್ಕೆ ಮೊದಲು ಅಯ್ಯಪ್ಪ ಸ್ವಾಮಿ ಸಮಿತಿಯಿಂದ ತಾತ್ಕಾಲಿಕ ದೇವಾಲಯ ನಿರ್ಮಿಸಲು ಯೋಜನೆ ರೂಪಿಸಿದ್ದರು. ಈ ವಿವಾದ ಸ್ಥಳೀಯ ಗ್ರಾಪಂ ಹಾಗೂ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದು, ಪೋಲೀಸರು ನ್ಯಾಯಾಲಯದಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದರು.
ಭಾನುವಾರ ಬೆಳಗ್ಗೆ ಏಕಾಏಕಿ ದೇವಸ್ಥಾನ ಸಮಿತಿಯವರು ವಿವಾದಿತ ಜಾಗಕ್ಕೆ ಬಂದು ಮನೆಯೊಳಗಿದ್ದ ವಸ್ತುಗಳನ್ನು ಹೊರಗೆ ಎಸೆದಿದ್ದಾರೆ. ಮನೆಯ ಮೇಲ್ಛಾವಣಿಗಳನ್ನು ಕಿತ್ತು ಹಾಕಿ ಮಹಿಳೆ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆನಂದಪುರ ಪೋಲೀಸ್ ಠಾಣೆಯ ಎಎಸ್‌ಐ ಬಸವರಾಜ್ ಸಿಬಂದಿ ಶರಣ್ ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.