Advertisement
ಎರಡು ದಶಕಗಳಿಂದ ತುಳು ರಂಗಭೂಮಿಯಲ್ಲಿ ಸುಮಾರು 30ಕ್ಕೂ ಮಿಕ್ಕಿ ವಿಭಿನ್ನ ಪರಿಕಲ್ಪನೆಯ ತುಳು ನಾಟಕಗಳನ್ನು ನೀಡಿ ಜನಪ್ರಿಯತೆ ಗಳಿಸಿರುವ ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ಸಂಸ್ಥೆಯ ಈ ವರ್ಷದ “ಕೇರಿಗೊರಿ ಕೇಸರಿ’ ತುಳು ನಾಟಕ ಈಗಾಗಲೇ ಭಾರೀ ಜನಮನ್ನಣೆ ಗಳಿಸಿದೆ.
Related Articles
Advertisement
ರಾಷ್ಟ್ರಭಕ್ತಿ, ಧರ್ಮಗಳ ಸಂಘರ್ಷಗಳ ಸಂದೇಶದ ನಡುವೆಯೂ ನಾಟಕದ ಹಾಸ್ಯ ಸನ್ನಿವೇಶಗಳು ನಿರಂತರವಾಗಿ ನಗೆಗಡಲಲ್ಲಿ ತೇಲುವಂತೆ ಮಾಡಿವೆ.
ಸಂಘಟನೆಯ ಪ್ರಮುಖ ಗುಣಕರನ ಪಾತ್ರವನ್ನು ನಿರ್ವಹಿಸಿದ ನಿತೇಶ್ ಕಾಂತಾವರ ಪ್ರಧಾನ ಪಾತ್ರಧಾರಿಯಾಗಿ ಮನ ಮುಟ್ಟುವ ಅಭಿನಯ ನೀಡಿದ್ದಾರೆ. ಪುತ್ರನನ್ನು ವಿರೋಧಿಸುವ ತಂದೆಯಾಗಿ ನಿವೃತ್ತ ಶಿಕ್ಷಕ ರಾಮದಾಸ ಮಾಸ್ತರರ ಪಾತ್ರದಲ್ಲಿ ಉದಯ ಕುಮಾರ್ ಹಳೆಯಂಗಡಿ ನಾಟಕದ ಗೆಲುವಿಗೆ ಕಾರಣರಾಗಿದ್ದಾರೆ. ಮಾಸ್ತರರ ಹಿರಿಯ ಮಗ ಶುಭಕರನ ಪಾತ್ರವನ್ನು ನಿರ್ವಹಿಸಿದ ಭಾಸ್ಕರ ಪಕ್ಷಿಕೆರೆ, ಮಾಸ್ತರರ ಪತ್ನಿ ಭಾರತಿಯಾಗಿ ಆಭಿನಯಿಸಿದ ಚಿತ್ರಲೇಖಾ ಭಗವಾನ್,ಶುಭಕರನ ಪತ್ನಿ ಸೋನುವಿನ ಪಾತ್ರ ನಿರ್ವಹಿಸಿದ ಸುಶ್ಮಿತಾ ಏಳಿಂಜೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಗುಣಕರನ ಮಿತ್ರ ಶಿಲೀಂದ್ರನಾಗಿ ಹರೀಶ್ ಪಡುಬಿದ್ರೆ ಹಾಗೂ ಇನ್ನೋರ್ವ ಮಿತ್ರ ಯಾದವನಾಗಿ ಹಾಸ್ಯನಟ ಸೀತಾರಾಮ ಶೆಟ್ಟಿ ಎಳತ್ತೂರು ಹಾಸ್ಯದ ಹೊನಲು ಹರಿಸಿದ್ದಾರೆ. ಪ್ರಬುದ್ಧ ಹಾಸ್ಯನಟ ಭಗವಾನ್ ಸುರತ್ಕಲ್ ಸಂಗೀತ ಶಿಕ್ಷಕ ಸಾರಂಗಿಯಾಗಿ ವಿಭಿನ್ನ ಸಂಭಾಷಣೆ ಹಾಗೂ ಹಾಡುಗಳಿಂದ ಗಮನ ಸೆಳೆದಿದ್ದಾರೆ. ಸಾರಂಗಿಯ ಪತ್ನಿ ಟಿಕ್‌ಟಾಕ್ ತಾರಾಳ ಪಾತ್ರದಲ್ಲಿ ನರೇಂದ್ರ ಕೆರೆಕಾಡು ನಿರಂತರವಾಗಿ ಹಾಸ್ಯದ ಸನ್ನಿವೇಶ ಹಾಗೂ ಡೈಲಾಗ್‌ಗಳಿಗೆ ಪಂಚ್ ನೀಡಿದ್ದಾರೆ. ಮಾಡರ್ನ್ ಹುಡುಗಿ ಸಂಗೀತಳ ಪಾತ್ರದಲ್ಲಿ ರಕ್ಷಿತಾ ಸುದೀರ್ ನಂದಳಿಕೆ ಮನೋಜ್ಞ ಅಭಿನಯ ನೀಡಿದ್ದಾರೆ.
ಸುಧಾಕರ ಸಾಲ್ಯಾನ್ ಕ್ರೈಸ್ತ ಕುಟುಂಬದವರಾಗಿ ಮೆಸ್ಕಾಂ ಲೈನ್‌ಮ್ಯಾನ್ ಆಲ್ವಿನ್‌ನ ಪಾತ್ರದಲ್ಲಿ ನಕ್ಕು ನಗಿಸಿದರೆ ಆತನ ಪತ್ನಿ ಲಿಲ್ಲಿಯಾಗಿ ಸತೀಶ್ ಶಿರ್ವ ಸುಧಾಕರನ ಜತೆ ಕೊಂಕಣಿ ಸಂಭಾಷಣೆಗಳ ಮೂಲಕ ಗಮನ ಸೆಳೆದಿದ್ದಾರೆ. ಬಾಲ ಕಲಾವಿದೆ ಮಂಜೂಷಾ ಭಗವಾನ್ ಈ ದಂಪತಿಯ ಪುತ್ರಿ ಶಾಲೆಟ್‌ಳ ಪಾತ್ರದಲ್ಲಿ ಭಾವನಾತ್ಮಕ ಅಭಿನಯ ನೀಡಿದ್ದಾರೆ.
ಆಹಾರ ವಿತರಣ ಸಂಸ್ಥೆಯ ಪ್ರತಿನಿಧಿಯ ಪಾತ್ರವನ್ನು ನಿರ್ವಹಿಸಿದ ಹರಿಪ್ರಸಾದ್ ನಂದಳಿಕೆ ಹಾಸ್ಯದ ಪಂಚ್ ಮೂಲಕ ಮನರಂಜಿಸಿದರೂ ಕೊನೆಗೆ ಭಾವನಾತ್ಮಕ ಡೈಲಾಗ್ ಮೂಲಕ ಮನದಲ್ಲಿ ನಿಲ್ಲುವ ನಿರ್ವಹಣೆ ಮಾಡಿದ್ದಾರೆ. ಶರತ್ ಶೆಟ್ಟಿ ಶಾಸಕ ಭಗವಾನ್‌ದಾಸರಾಗಿ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಅಶೋಕ್ ಪಳ್ಳಿಯವರ ರಚನೆಯ ರಾಷ್ಟ್ರಭಕ್ತಿಯ ಟೈಟಲ್ ಸಾಂಗ್, ನಾಟಕದ ಮಧ್ಯೆ ಬರುವ ಗ್ರೂಪ್ ಹಾಡು ಹಾಗೂ ಕೊನೆಗೆ ಬರುವ ಮಾರ್ಮಿಕ ಪ್ಯಾಥೋ ಹಾಡು ಕೇರಿಗೊರಿ ಕೇಸರಿಯನ್ನು ಗೆಲ್ಲಿಸಿದೆ. ಮುಂಡ್ಕೂರು ದಿನೇಶ್ ಪಾಪುರವರ ಹಿನ್ನೆಲೆ ಸಂಗೀತ, ಹಮ್ಮಿಂಗ್ಸ್‌ಗಳು, ಸಂಗೀತದ ತುಣುಕುಗಳು ನಾಟಕದ ಯಶಸ್ಸಿನ ಪ್ರಧಾನ ಅಂಶಗಳಾಗಿವೆ.