ಬೆಂಗಳೂರು : ರಾಷ್ಟ್ರ ಧ್ವಜ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಕಪ್ಪುಪಟ್ಟಿ ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದರು.
ಈಶ್ವರಪ್ಪನವರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದಾರೆ.ಇದು ಧ್ವಜ ಸಂಹಿತೆ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಹೀಗಾಗಿ ರಾಜ್ಯಪಾಲರು ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಪ್ಪು ಪಟ್ಟಿ ಧರಿಸುವ ಮೂಲಕ ಕಾಂಗ್ರೆಸಿಗರು ಸಾಂಕೇತಿಕವಾಗಿ ಆಗ್ರಹಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಸರಕಾರ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ವಿಚಾರದಲ್ಲೂ ತಾರತಮ್ಯ ಎಸಗುತ್ತಿದೆ. ಧಾರ್ಮಿಕ ಸೂಕ್ಷ್ಮತೆಯ ವಿಚಾರ ನಿರ್ವಹಣೆಯಲ್ಲಿ ವಿಫಲವಾಗಿತ್ತಿದರ. ಸಂವಿಧಾನ ವಿರೋಧಿ ಹೇಳಿಕೆಗಳಿಗೆ ಅದ್ಯತೆ ನೀಡಲಾಗುತ್ತಿದೆ. ಇದೆಲ್ಲವನ್ನೂ ಖಂಡಿಸುವುದಕ್ಕಾಗಿ ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಬಂದಿದ್ದೇವೆ ಎಂದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಹೆಣ್ಣು ಮಕ್ಕಳ ಬಗ್ಗೆ ಸರ್ಕಾರ ನಡೆದುಕೊಂಡ ರೀತಿ ಗೆ ನಾವು ಸೈಲೆಂಟ್ ಆಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದೇವೆ. ಈಶ್ವರಪ್ಪ ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದಾರೆ. ಕೆಂಪು ಕೋಟೆಯಲ್ಲಿ, ರಾಷ್ಟ್ರ ಧ್ವಜದ ವೇಳೆ ರೈತರ ಧ್ವಜವನ್ಬ ಹಾಕಿದಾಗ ಅವರ ವಿರುದ್ದ ಕೇಸ್ ದಾಖಲಾಗಿತ್ತು. ಅದೇ ರೀತಿ ಈಶ್ವರಪ್ಪನವರ ಮೇಲೆ ಕೇಸ್ ಹಾಕ್ಲಿ ಎಂದು ಸವಾಲೆಸೆದರು.
ಹಿಜಾಬ್ ಧರಿಸದೇ ಇದ್ರೆ ರೇಪ್ ಆಗುತ್ತೆ ಅನ್ನುವ ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಶಾಸಕರು ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಅವರ ಸಮುದಾಯಕ್ಕೆ ಆಗಿರುವ ನೋವವನ್ನ ಅವರು ಹೇಳಿಕೊಂಡಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಕಳೆದ ಎರಡು ತಿಂಗಳಿಂದ ಗಲಾಟೆ ನಡೆಯುತ್ತಿದೆ. ಶಾಲೆಕಾಲೇಜುಗಳಲ್ಲಿ ಘರ್ಷಣೆ ನಡೆದಿವೆ
ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕಿತ್ತು. ಆದರೆ ಅಂತಹ ಪ್ರಯತ್ನ ಮಾಡಿಲ್ಲ. ರಾಜ್ಯಪಾಲರ ಕೈಯಲ್ಲಿ ಕೇವಲ ಭಾಷಣ ಮಾಡಿಸಿದೆ ಎಂದಿದ್ದಾರೆ.