Advertisement

ಕೇಸರಿ ಬಾವುಟ ತೆರವು: ಚುನಾವಣಾ ಆಯೋಗಕ್ಕೆ ದೂರು

12:13 PM Apr 11, 2018 | |

ತುಮಕೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷ ಅಧಿಕಾರಿಗಳನ್ನು ಬಳಸಿಕೊಂಡು ದೇವಾಲಯಗಳ ಮೇಲೆ ಹಾಕಿರುವ ಕೇಸರಿ ಬಾವುಟಗಳನ್ನು ತೆರವು ಮಾಡುತ್ತಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

ನಗರದ ಗಂಗಸಂದ್ರ ಬಡಾವಣೆಯಲ್ಲಿ ರೈತ ಬಂಧು ಯಡಿಯೂರಪ್ಪ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಮುಷ್ಟಿಧಾನ್ಯ ಸಂಗ್ರಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅಧಿಕಾರಿಗಳ ದುರ್ಬಳಕೆ: ಉಡುಪಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಿಗಳನ್ನು ಬಳಸಿಕೊಂಡು ಬಿಜೆಪಿ ಪಕ್ಷದ ಕಾರ್ಯಕ್ರಮಗಳು ಜನರಿಗೆ ತಲುಪದಂತೆ ಮಾಡುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೇ ಮಾಡಿದರೂ ಜನರ ಮನಸ್ಸು ಬದಲಾಯಿಸಲು ಸಾಧ್ಯವಿಲ್ಲ. ಅವರ ಮನಸ್ಸಿನಲ್ಲಿ ಕಮಲ ಇದೆ ಎಂದರು.

ರಾಜ್ಯದಲ್ಲಿ 3750ಕ್ಕೂ ಅಧಿಕ ರೈತರು ಆತ್ಮಹತ್ಯೆ: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 3750ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಸರಕಾರ ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನು ಮಾಡಿಲ್ಲ ಎಂದು ಆಪಾದಿಸಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ರೈತರ ಕಷ್ಟ ಸುಖ ದುಃಖ ಗಳಿಗೆ ಹೇಗೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ರೈತ ಬಂಧು ಯಡಿಯೂರಪ್ಪ ಎಂಬ ಕಾರ್ಯಕ್ರಮದ ಮೂಲಕ ಮನೆ ಮನೆಯಿಂದ ಮುಷ್ಟಿ ಧಾನ್ಯ ಸಂಗ್ರಹಿಸುವ ಭಾವನಾತ್ಮಕ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದುವರೆಗೂ 5000 ಗ್ರಾಮ ಪಂಚಾಯಿತಿಗಳನ್ನು ನಮ್ಮ ಕಾರ್ಯಕರ್ತರು ತಲುಪಿದ್ದಾರೆ ಎಂದು ಹೇಳಿದರು.

Advertisement

ಲಘು ಉಪಾಹಾರಕ್ಕೆ ಮುಷ್ಟಿಧಾನ್ಯ: ಮುಷ್ಟಿ ಧಾನ್ಯ ಸಂಗ್ರಹದಿಂದ ಒಟ್ಟುಗೂಡಿದ ಪಡಿ ಪದಾರ್ಥವನ್ನು ಯಾವುದಾದರೂ ಮಠ ಅಥವಾ ದೇವಾಲಯದಲ್ಲಿ ಸಾಮೂಹಿಕ ಭೋಜನ ಏರ್ಪಡಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈಗ ಕಾರ್ಯಕರ್ತರ ಮನೆಯಲ್ಲಿಯೇ ಲಘು ಉಪಹಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.

ಗ್ರಾಪಂಗಳಿಗೆ ಬಿಎಸ್‌ವೈ ಪತ್ರ: ನಿರಂತರವಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಎಲ್ಲಾ ಗ್ರಾಪಂಗಳಿಗೆ ಪತ್ರ ಬರೆದು ಆತ್ಮಹತ್ಯೆಗೆ ಒಳಗಾಗದಂತೆ ರೈತರಿಗೆ ಆತ್ಮಸ್ಥೈರ್ಯ ತುಂಬುವಂತೆ ಇಡೀ ಗ್ರಾಮಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಮುಷ್ಟಿ ಧಾನ್ಯ ಯೋಜನೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರವು ಮುಂದುವರಿಸಲಿದ್ದೇವೆ ಎಂದು ತಿಳಿಸಿದರು.

ಟಿಕೆಟ್‌ ದೊರೆಯದವರು ತಾಳ್ಮೆ ವಹಿಸಲಿ: ಬಿಜೆಪಿ ಪಕ್ಷದಲ್ಲಿ ಟಿಕೆಟ್‌ ದೊರೆಯದ ಅಕಾಂಕ್ಷಿಗಳು ಕೊಂಚ ತಾಳ್ಮೆ ವಹಿಸಿದರೆ, ಸರಕಾರ ಅಧಿಕಾರಕ್ಕೆ ಬಂದ ನಂತರ ಅವರಿಗೂ ಸಹ ಅಧಿಕಾರ ದೊರೆಯುವಂತೆ ಮಾಡಲಿದೆ. ಭಿನ್ನಮತವನ್ನು ಬದಿಗಿಟ್ಟು, ಪಕ್ಷವನ್ನು ಅಧಿಕಾರಕ್ಕೆ ತಂದರೆ ಖಂಡಿತ ನಿಮಗೂ ಸರಕಾರದಲ್ಲಿ ಪಾಲು ಸಿಗಲಿದೆ ಎಂಬ ಭರವಸೆ ನೀಡಿದರು.

ಯಾರು ಪಕ್ಷದ ಟಿಕೆಟ್‌ ಪಡೆದು ಅಧಿಕೃತವಾಗಿ ಸ್ಪರ್ಧಿಸುತ್ತಾರೋ ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು. ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಹಾಕಿಕೊಂಡಿದೆ. ಇದು ಫ‌ಲ ಕೊಡುವುದು ಶತಸಿದ್ಧ ಎಂದು ನುಡಿದರು.

ಈ ವೇಳೆ ಮಾಜಿ ಸಂಸದ ಜಿ.ಎಸ್‌.ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ. ಜೋತಿ ಗಣೇಶ್‌, ವಿಧಾನಪರಿಷತ್‌ ಮಾಜಿ ಸದಸ್ಯ ಡಾ.ಎಂ.ಆರ್‌.ಹುಲಿನಾಯ್ಕರ್‌, ರೈತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್‌. ಶಿವಪ್ರಸಾದ್‌, ಜಿಪಂ ಸದಸ್ಯ ವೈ.ಎಚ್‌.ಹುಚ್ಚಯ್ಯ, ಮಲ್ಲಿಕಾರ್ಜುನಯ್ಯ, ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಟಿಕೆಟ್‌ ಹಂಚಿಕೆಯಾದಾಗ ಸಹಜವಾಗಿ ಪಕ್ಷಕ್ಕೆ ದುಡಿದವರಿಗೆ ಅಸಮಾಧಾನವಾಗುತ್ತದೆ. ಪಕ್ಷದ ವರಿಷ್ಠರು ಸರ್ವೇ ಮಾಡಿಸಿದ್ದು ಯಾರು ಗೆಲ್ಲುತ್ತಾರೆ ಎನ್ನುವುದನ್ನು ಪರಿಗಣಿಸಿ ಗೆಲ್ಲುವ ಕುದುರೆಗಳಿಗೆ ನಾವು ಟಿಕೆಟ್‌ ನೀಡುತ್ತಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಸಮೀಕ್ಷೆ ಆಧಾರದ ಮೇಲೆ ವರಿಷ್ಠರು ಟಿಕೆಟ್‌ ನೀಡುತ್ತಿದ್ದಾರೆ. ಅಸಮಾಧಾನಗೊಂಡವರಿಗೆ ಸಮಾಧಾನ ಮಾಡುತ್ತೇವೆ. ನಾನು ಸಂಸದೆ ಆಗಿರುವುದರಿಂದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.
-ಶೋಭಾ ಕರಂದ್ಲಾಜೆ ಸಂಸದೆ.

Advertisement

Udayavani is now on Telegram. Click here to join our channel and stay updated with the latest news.

Next