ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗಿದ್ದು, ರಾಜಧಾನಿಯಲ್ಲಿ ಮತಬೇಟೆಗೆ ಇಳಿದ ಪ್ರಧಾನಿ ಮೋದಿ ಎರಡನೇ ದಿನದ ಮೆಗಾ ರೋಡ್ ಶೋ ನಡೆಸಿದರು. ಬೆಳಗ್ಗೆ 10.15ಕ್ಕೆ ತಿಪ್ಪಸಂದ್ರ ರಸ್ತೆಯಿಂದ ರೋಡ್ ಶೋ ಆರಂಭವಾಗಿ ಎಸ್.ವಿ. ರೋಡ್ ಮೂಲಕ ಟ್ರಿನಿಟಿ ಜಂಕ್ಷನ್‌ನಲ್ಲಿ ಅಂತ್ಯಗೊಂಡಿತು. ದಾರಿಯುದ್ದಕ್ಕೂ ಹೂಮಳೆ ಸುರಿದು ಮೋದಿ ಮೋದಿ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕೇಸರಿ ಬಾವುಟಗಳು ರಾರಾಜಿಸಿದವು.
Advertisement
ಭಾನುವಾರ ಎರಡನೇ ಹಂತದ ರೋಡ್ ಶೋ ಆರಂಭಕ್ಕೂ ಮುನ್ನ ಬೆಳಗ್ಗೆ ಬೆಂಗಳೂರಿನ ನ್ಯೂ ತಿಪ್ಪಸಂದ್ರದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ನಮಿಸಿ ಪುಷ್ಪಾರ್ಚನೆ ಮಾಡಿದರು. ಮೋದಿ ರೋಡ್ ಶೋ ಮಾಡುತ್ತಲೇ ವಾಹನದಲ್ಲಿ ನಿಂತುಕೊಂಡೇ ಶಂಕರ್ ನಾಗ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿರುವುದು ವಿಶೇಷವಾಗಿತ್ತು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಂಸದ ಪಿ.ಸಿ. ಮೋಹನ್ ಮೋದಿಗೆ ಸಾಥ್ ನೀಡಿದರು. ನ್ಯೂ ತಿಪ್ಪಸಂದ್ರದಿಂದ ಆರಂಭಿಸಿ ಎಚ್‌ಎಎಲ್ 2ನೇ ಹಂತ, 80 ಅಡಿ ರಸ್ತೆ ಜಂಕ್ಷನ್, ಎಚ್‌ಎಎಲ್ 2ನೇ ಹಂತ, 12ನೇ ಮುಖ್ಯ ರಸ್ತೆ ಜಂಕ್ಷನ್, ಇಂದಿರಾನಗರ, ಸಿಎಂಎಚ್ ರಸ್ತೆ, ಓಲ್ಡ ಮದ್ರಾಸ್ ರಸ್ತೆ, ಹಲಸೂರು ಮಾರ್ಗವಾಗಿ ಸಾಗಿ ಟ್ರಿನಿಟಿ ವೃತ್ತದಲ್ಲಿ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ತಮ್ಮ ಅದ್ಧೂರಿ ರೋಡ್ ಶೋಗೆ ತೆರೆ ಎಳೆದರು. ಶನಿವಾರ ದಾಖಲೆ ರೋಡ್ ಶೋ ನಡೆಸಿದ್ದರು.
ಬಜರಂಗದಳ ಬಾವುಟಗಳು, ಮೋದಿ ಮುಖವಾಡ ಧರಿಸಿದ ವ್ಯಕ್ತಿಗಳು, ಯಕ್ಷಗಾನ ಪೋಷಾಕು, ಮೋದಿ ಪರ ಬಂಟಿಂಗ್ಸ್, ಪೋಸ್ಟರ್‌ಗಳು, ವಿವಿಧ ವೇಷ ಭೂಷಣಗಳು, ಕೇಸರಿ ಬಾವುಟಗಳು ರಾರಾಜಿಸಿದವು. ದಾರಿಯುದ್ದಕ್ಕೂ ಅಭಿಮಾನಿಗಳಿಂದ ಮೋದಿ ಮೋದಿ ಘೋಷಣೆ, ಹರ್ಷೋದ್ಗಾರ ಕೇಳಿ ಬಂತು. ತೆರೆದ ವಾಹನದಲ್ಲಿ ನಿಂತು ಪ್ರಧಾನಿ ಮೋದಿ ಜನರತ್ತ ಕೈ ಬೀಸುತ್ತಾ ಸಾಗಿದರು. ನ್ಯೂ ತಿಪ್ಪೇಸಂಧ್ರ ರಸ್ತೆಯಲ್ಲಿ ತಮ್ಮ ನೆಚ್ಚಿನ ಪ್ರಧಾನಿಯನ್ನು ಕಾಣಲು ಜನರು ಕಿಕ್ಕಿರಿದ ಸಂಖ್ಯೆಯಲ್ಲಿ ಸೇರಿದ್ದರು. ತೆರೆದ ವಾಹನದಲ್ಲಿ ನಿಂತು ಜನರತ್ತ ಕೈಬೀಸಿದ ಪ್ರಧಾನಿ ಮೋದಿಯವರ ಮೇಲೆ ಹೂವಿನ ಮಳೆಗರೆದರು. ಸಣ್ಣದಾಗಿ ಸುರಿದ ಮಳೆಯನ್ನು ಲೆಕ್ಕಿಸದೇ ಅಭಿಮಾನಿಗಳು ರಸ್ತೆಯುದ್ದಕ್ಕೂ ಮೋದಿಗೆ ಜೈಕಾರ ಹಾಕಿದರು. ಅಭಿಮಾನಿಯೋರ್ವ ವೀಲ್ ಚೇರ್‌ನಲ್ಲಿ ಮೋದಿಯವರನ್ನು ನೋಡಲು ರಸ್ತೆಗೆ ಬಂದಿದ್ದು ವಿಶೇಷವಾಗಿತ್ತು. 6.5 ಕಿ.ಮೀ.ನಷ್ಟು ರೋಡ್ ಶೋನಲ್ಲಿ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಗಳ ಹೂಮಳೆ ಸುರಿದರು. ರವಿವಾರ ಬಹುತೇಕ ಎಲ್ಲ ಕಚೇರಿ, ಶಾಲಾ-ಕಾಲೇಜು
ಗಳಿಗೆ ರಜೆಯಿದ್ದ ಹಿನ್ನೆಲೆಯಲ್ಲಿ ವಾಹನ ಓಡಾಟ ಕಡಿಮೆಯಿತ್ತು.
Related Articles
ರೋಡ್ ಶೋ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮತ್ತೆ ಬೆಂಗಳೂರು ಜನರ ನಡುವೆ ಇರುವುದು ಆನಂದದ ಸಂಗತಿ. ನಮ್ಮನ್ನು ಆಶೀರ್ವದಿಸಲು ಬಂದಿರುವ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದ್ಧಾರೆ.
Advertisement