ಇಟಾನಗರ: ಪಕ್ಷದ ಪ್ರಮುಖರ ಬಂಡಾಯದ ನಡುವೆಯೂ ಜಯದ ಅಲೆಯತ್ತ ಮುಖ ಮಾಡಿರುವ ಬಿಜೆಪಿ, ಅರುಣಾಚಲ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ. 60 ಕ್ಷೇತ್ರಗಳ ಪೈಕಿ 57 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 28ರಲ್ಲಿ ಕಾಂಗ್ರೆಸ್ 2ರಲ್ಲಿ ಮುನ್ನಡೆ ಸಾಧಿಸಿವೆ.
ಬಿಜೆಪಿಯ ಮೂವರು ಶಾಸಕರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಶ್ಚಿಮ ಸಿಯಾಂಗ್ ಜಿಲ್ಲೆಯ ಅಲಾಂಗ್ ಪೂರ್ವ ಕ್ಷೇತ್ರದಲ್ಲಿ ಕೆಂಟೊ ಜಿನಿ, ಕೆಳ ಸುಭಾನ್‌ಸಿರಿ ಜಿಲ್ಲೆಯ ಯೆಚುಲಿ ಕ್ಷೇತ್ರದಲ್ಲಿ ತಾಬಾ ತೆದಿರ್ ಹಾಗೂ ಪಶ್ಚಿಮ ಕೆಮಾಂಗ್ ಜಿಲ್ಲೆಯ ದಿರಂಗ್ ವಿಧಾನಸಭಾ ಕ್ಷೇತ್ರದಲ್ಲಿ ಪುರ್ಪಾ ಸೆರಿಂಗ್ ಅವಿರೋಧವಾಗಿ ಆಯ್ಕೆಯಾದವರು.
ವಿಧಾನಸಭಾ ಚುನಾವಣೆಗೂ ಮುಂಚೆ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ 12 ಶಾಸಕರು ಸೇರಿ ಪಕ್ಷದ 15 ಪ್ರಮುಖ ನಾಯಕರು ಪಕ್ಷ ತೊರೆದು, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸೇರಿದ್ದರು.
ಎಲ್ಲಾ 60 ಕ್ಷೇತ್ರಗಳೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸುತ್ತಲೆ ಬಂದಿತ್ತು. 2014ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, 2009ರಲ್ಲಿ 42, 2004ರಲ್ಲಿ 34 ಸ್ಥಾನಗಳನ್ನು ಗಳಿಸಿತ್ತು. ಬಿಜೆಪಿ 2004ರಲ್ಲಿ 9, 2009ರಲ್ಲಿ 3 ಹಾಗೂ 2014ರಲ್ಲಿ 11 ಸ್ಥಾನಗಳನ್ನು ಗೆದ್ದಿತ್ತು.
2014ರಲ್ಲಿ 44 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ, ಮುಖ್ಯಮಂತ್ರಿ ಪ್ರೇಮಾ ಖಂಡು ನೇತೃತ್ವದಲ್ಲಿ ಪಕ್ಷದ 33 ಶಾಸಕರು ಪಿಪಿಎ (ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್) ಪಕ್ಷಕ್ಕೆ ಸೇರಿದ್ದರು. ಬಳಿಕ, ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಲಾಗಿತ್ತು. ಆ ಮೂಲಕ 2016ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ವಿಧಾನಸಭಾ ಚುನಾವಣೆಗೂ ಮುಂಚೆ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ನಾಯಕರು ಪಕ್ಷ ತೊರೆದು, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸೇರಿದ್ದರಿಂದ ಪಕ್ಷಕ್ಕೆ ಭಾರಿ ಹೊಡೆತ ಬೀಳಬಹುದು ಎಂಬ ನಂಬಿಕೆ ಹುಸಿಯಾಗಿದೆ.