ಉಪ್ಪಿನಂಗಡಿ: ಕಡಬ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಕೆಮ್ಮಾರ ಸೇತುವೆಯ ತಡೆಗೋಡೆ ಕುಸಿಯಲು ಆರಂಭವಾಗಿದೆ. ಮುಂದೆ ಇದರಿಂದಾಗಿ ಸೇತುವೆ ಕುಸಿತಕ್ಕೊಳಗಾಗುವ ಭೀತಿ ಉಂಟಾಗಿದೆ ಎಂಬ ಸಾರ್ವಜನಿಕ ದೂರು ಮತ್ತು ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿ ಜೂ. 21ರಂದು ಪುತ್ತೂರು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಮ್ಮಾರ ಸೇತುವೆ ಬಳಿಗೆ ಪುತ್ತೂರು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಪ್ರಮೋದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೇತುವೆಯ ಪಾರ್ಶ್ವಗಳಲ್ಲಿ ಕಟ್ಟಲಾಗಿರುವ ತಡೆಗೋಡೆ ಮಳೆಗಾಲದಲ್ಲಿ ರಭಸದಿಂದ ಹರಿಯುವ ನೀರಿನ ಹೊಡೆತಕ್ಕೆ ಸಿಲುಕಿ ತಡೆಗೋಡೆಯ ಕಲ್ಲುಗಳು 2 ಕಡೆ ಕುಸಿದಿರುವುದನ್ನು ಪರಿಶೀಲನೆ ನಡೆಸಿದರು.
ಅಪಾಯ ಇಲ್ಲ
ತಡೆಗೋಡೆ ಕುಸಿಯುವ ಬಗ್ಗೆ ಯಾವುದೇ ಭೀತಿ ಪಡಬೇಕಾಗಿಲ್ಲ, ಇಲ್ಲಿ ಯಾವುದೇ ಅಪಾಯ ಇಲ್ಲ, ತಡೆಗೋಡೆಯ ಒಂದು ಭಾಗದಲ್ಲಿ ಕಲ್ಲು ಜಾರಿದ್ದು, ಮಳೆ ಕಡಿಮೆ ಆದ ತತ್‌ಕ್ಷಣ ಕುಸಿತದ ಭಾಗಕ್ಕೆ ರಕ್ಷಣಾ ಕ್ರಮ ಕೈಗೊಳ್ಳಲಾಗುವುದು.
– ಗೋಕುಲದಾಸ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ