Advertisement

ಮೀನುಗಾರರ ಸುರಕ್ಷೆ; ಕರಾವಳಿ ಕಾವಲಿಗೆ “ಆ್ಯಪ್‌’ಕಣ್ಣು!

02:01 AM Oct 09, 2020 | mahesh |

ಮಹಾನಗರ: ರಾಜ್ಯದ ಸಾಗರ ತೀರದ ರಕ್ಷಣೆಯ ಹೊಣೆ ನಿಭಾಯಿಸುತ್ತಿರುವ ಕರಾವಳಿ ಕಾವಲು ಪೊಲೀಸ್‌ ಪಡೆಯು, ಮೀನುಗಾರರ ಸುರಕ್ಷೆಯ ದೃಷ್ಟಿಯಿಂದ ಇದೀಗ ಹೊಸ ಆ್ಯಪ್‌ವೊಂದರ ಅನುಷ್ಠಾನಕ್ಕೆ ಮುಂದಡಿ ಇಟ್ಟಿದೆ.

Advertisement

ಕಡಲಿಗಿಳಿಯುವ ಮೀನುಗಾರರ ಸುರಕ್ಷೆ ಹಾಗೂ ಕಡಲಿನಲ್ಲಿರುವ ಬೋಟ್‌ಗಳು-ಅದರಲ್ಲಿರುವ ಕಾರ್ಮಿಕರ ಒಟ್ಟು ವಿವರ ದಾಖಲಿಸುವ ನಿಟ್ಟಿನಲ್ಲಿ ಹೊಸ ಆ್ಯಪ್‌ ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಜಾರಿಯಾ ಗಲಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರಿಗೆ ಈ ಆ್ಯಪ್‌ ಪರಿಚಯವಾಗಲಿದೆ.

ಸದ್ಯ ಮೀನುಗಾರಿಕೆಗೆ ತೆರಳುವ ಮೀನು ಗಾರರು, ಬೋಟ್‌ಗಳ ವಿವರವನ್ನು ಮೌಖೀಕ ಅಥವಾ ಕಾಗದ ದಾಖಲೆಯ ಮೂಲಕ ಕರಾವಳಿ ಕಾವಲು ಪೊಲೀಸ್‌ ಪಡೆಯು ಮೀನುಗಾರಿಕೆ ಇಲಾಖೆ ಅಥವಾ ಮೀನು ಗಾರಿಕೆ ದಕ್ಕೆಯಲ್ಲಿ ಸಂಗ್ರಹಿಸುತ್ತಿತ್ತು. ಇದು ಬಹುತೇಕ ಸಂದರ್ಭ ಪೂರ್ಣಮಟ್ಟದಲ್ಲಿ ಲಭ್ಯವಿರುವುದಿಲ್ಲ. ಆದರೆ ಮೀನುಗಾರಿಕೆಗೆ ತೆರಳಿದ ಬಳಿಕ ಮೀನುಗಾರರು ಯಾವುದೇ ಸಮಸ್ಯೆಗೆ ಸಿಲುಕಿದರೆ ಅಥವಾ ಕಡಲಲ್ಲಿ ಅಪರಾಧ ಚಟುವಟಿಕೆ ನಡೆದರೆ ಬಳಿಕ ತನಿಖೆ ನಡೆಸಲು ಕರಾವಳಿ ಕಾವಲು ಪೊಲೀಸ್‌ ಪಡೆಗೆ ಸಮಸ್ಯೆ ಎದುರಾಗುತ್ತಿತ್ತು. ಹಾಗಾಗಿ ಸರಕಾರದ ವತಿಯಿಂದಲೇ ಇದೀಗ ಆ್ಯಪ್‌ ಸಿದ್ಧಪಡಿಸಿ ಅದರಲ್ಲಿಯೇ ಮೀನುಗಾರರ ಮಾಹಿತಿ ಕ್ರೋಡೀಕರಿಸಲು ಕರಾವಳಿ ಕಾವಲು ಪೊಲೀಸ್‌ ಪಡೆಯು ನಿರ್ಧರಿಸಿದೆ.

ಈ ಮಧ್ಯೆ, ಕಡಲಿನಲ್ಲಿ ಸಂಚರಿಸುವ ಬೋಟ್‌ಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದ ಕಾರಣ ಅಪರಿಚಿತ ಬೊಟ್‌ಗಳು ಬಂದರೂ ಕೂಡ ಕೆಲವೊಮ್ಮೆ ತಿಳಿಯುವುದಿಲ್ಲ. ಹೀಗಾಗಿ ಕಡಲಲ್ಲಿರುವ ಮೀನುಗಾರರ ಎಲ್ಲ ಬೋಟ್‌ಗಳ ಬಗ್ಗೆ ನಿಖರ ಮಾಹಿತಿಯನ್ನು ಪಡೆಯುವ ಸಲುವಾಗಿ ಆ್ಯಪ್‌ ಕಾರ್ಯನಿರ್ವಹಿಸಲಿದೆ.

ಆ್ಯಪ್‌ ಕಾರ್ಯನಿರ್ವಹಣೆ ಹೇಗೆ?
ಆ್ಯಪ್‌ ಅನುಷ್ಠಾನವಾದ ಬಳಿಕ ಕಡಲಿಗಿ ಳಿಯುವ ಮೀನುಗಾರರು ದಕ್ಕೆಯಿಂದ ತೆರಳುವ ಮುನ್ನ ಆ್ಯಪ್‌ನಲ್ಲಿ ತಮ್ಮ ಹೆಸರು, ಆಧಾರ್‌ ನಂಬರ್‌, ದಿನಾಂಕ, ಚಿತ್ರಗಳನ್ನು ಅಪ್‌ಲೋಡ್‌ ಮಾಡಬೇಕು. ಈ ಮಾಹಿತಿ ಪೊಲೀಸ್‌ ಪಡೆ, ಮೀನುಗಾರಿಕೆ ಇಲಾಖೆ ಯಲ್ಲಿ ಲಭ್ಯವಿರುತ್ತದೆ. ಮೀನು ಗಾರಿಕೆ ಮುಗಿಸಿ ಬಂದ ಬಳಿಕ ಅದೇ ಮೀನುಗಾರರು ಆ್ಯಪ್‌ನಲ್ಲಿ ವಾಪಾಸ್‌ ಬಂದ ಬಗ್ಗೆ ಉಲ್ಲೇಖ ಮಾಡಬೇಕು. ಹೀಗಾಗಿ ಕಡಲಿನಲ್ಲಿ ಪ್ರಸ್ತುತ ಎಷ್ಟು ಬೋಟ್‌ಗಳು ಇವೆ ಎಂಬ ಮಾಹಿತಿ ನಿಖರವಾಗಿ ದೊರೆಯಲು ಸಾಧ್ಯವಾಗುತ್ತದೆ. ಜತೆಗೆ ಆ್ಯಪ್‌ನಲ್ಲಿ ಮೀನುಗಾರರಿಗೆ ಸಹಾಯವಾಗಲು ಹವಾಮಾನ ವರದಿ, ಮುನ್ನೆಚ್ಚರಿಕೆಗಳನ್ನು ಕೂಡ ನೀಡಲಾಗುತ್ತದೆ. ಆ್ಯಪ್‌ ಕಾರ್ಯಾಚರಣೆ ಆರಂಭಗೊಂಡ ಬಳಿಕ ಕಡಲಿನಲ್ಲಿ ಸಂಚರಿಸುವ ಮೀನು ಗಾರರಿಗೆ ಎದುರಾಗುವ ಸಮಸ್ಯೆ-ಸವಾಲು ಬಗ್ಗೆ ಪೊಲೀಸ್‌ ಇಲಾಖೆ-ಮೀನುಗಾರಿಕೆ ಇಲಾಖೆಗೆ ಕ್ಷಿಪ್ರವಾಗಿ ತಿಳಿಸುವ ಸಾಪ್ಟ್ವೇರ್‌ ಕೂಡ ಬಳಸಲು ಯೋಚಿಸಲಾಗಿದೆ.

Advertisement

ಕರಾವಳಿ ರಕ್ಷಣೆಗೆ 9 ಠಾಣೆಗಳು
ತಲಪಾಡಿಯಿಂದ ಉತ್ತರಕನ್ನಡದ ಮಾಜಾಲಿ ತನಕ ದ 320 ಕಿ.ಮೀ. ಉದ್ದದ ಕರಾವಳಿ ತಟ ರಕ್ಷಣೆಗೆ 9 ಪೊಲೀಸ್‌ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಮಂಗಳೂರಿನ ತಣ್ಣೀರು ಬಾವಿ, ಹೆಜಮಾಡಿ, ಮಲ್ಪೆ, ಗಂಗೊಳ್ಳಿ, ಭಟ್ಕಳ, ಕುಮಟ, ಹೊನ್ನಾವರ, ಬೇಲಿಕೇರಿ, ಕಾರವಾರ ಠಾಣೆಗಳಿವೆ. ಪ್ರತೀ ಠಾಣೆಯಲ್ಲಿ ನಿರೀಕ್ಷಕರು, ಉಪನಿರೀಕ್ಷಕರು, ಹೆಡ್‌ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌, ಶಸ್ತ್ರಸಜ್ಜಿತ ಸಿಬಂದಿ, ಸ್ಪೀಡ್‌ ಬೋಟ್‌ ಸಿಬಂದಿ ಸಹಿತ ಪ್ರತೀ ಠಾಣೆಯಲ್ಲಿ 57 ಸಿಬಂದಿ ಕಾರ್ಯನಿರ್ವಹಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಸಂಶಯಾಸ್ಪದ ಬೋಟ್‌, ವಾಹನ ಕಂಡುಬಂದರೆ ಕರಾವಳಿ ಕಾವಲು ಪೊಲೀಸ್‌ ಪಡೆ ಕಾರ್ಯನಿರ್ವಹಿಸುತ್ತದೆ.

“ಆ್ಯಪ್‌’ ಶೀಘ್ರ ಕಾರ್ಯಾರಂಭ
ಮೀನುಗಾರರ ಸುರಕ್ಷೆ, ಅವರ ನಿಖರ ಮಾಹಿತಿ ಪಡೆದುಕೊಳ್ಳುವ ದೃಷ್ಟಿ ಯಿಂದ ಕರಾವಳಿ ಕಾವಲು ಪೊಲೀಸ್‌ ಪಡೆ ವತಿಯಿಂದ ಮೀನುಗಾರಿಕೆ ಇಲಾಖೆಯ ಸಹಕಾರದೊಂದಿಗೆ ಹೊಸ ಆ್ಯಪ್‌ ಮಾಡಲು ನಿರ್ಧರಿಸಲಾಗಿದೆ. ಸದ್ಯ ಪ್ರಾಯೋಗಿಕವಾಗಿ ಸಿದ್ಧಪಡಿಸಲಾಗಿದ್ದು, ಶೀಘ್ರ ದಲ್ಲಿ ಇದು ಪೂರ್ಣವಾಗಿ ಅನುಷ್ಠಾನಗೊಳ್ಳಲಿದೆ.
-ಚೇತನ್‌, ಪೊಲೀಸ್‌ ಅಧೀಕ್ಷಕರು, ಕರಾವಳಿ ಕಾವಲು ಪೊಲೀಸ್‌ ಪಡೆ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next