ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರ ವಾಗ್ಧಾಳಿ ಮುಂದುವರಿದಿದ್ದು, ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ಕೋಟಿ ಕೋಟಿ ನುಂಗುತ್ತಿರುವುದಲ್ಲದೆ, ಸಮಾಜ ಘಾತಕರನ್ನು ಬೆಂಬಲಿಸುವ ಮೂಲಕ ಬೆಂಗಳೂರನ್ನು ಅಪಾಯಕಾರಿ ನಗರವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಶುಕ್ರವಾರ ಸರ್ವಜ್ಞನಗರ ಮತ್ತು ರಾಜಾಜಿನಗರ ಕ್ಷೇತ್ರದಲ್ಲಿ ನಡೆಯಿತು.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಆರ್.ಅಶೋಕ್, ಬೆಂಗಳೂರಿನಲ್ಲೇ ಜನರಿಗೆ ಸುರಕ್ಷತೆ ಮರೀಚಿಕೆಯಾಗುತ್ತಿದೆ. ಕಳ್ಳರ ಹಾವಳಿಯಿಂದಾಗಿ ಪೊಲೀಸರ ಪತ್ನಿಯರೂ ಸೇರಿದಂತೆ ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಗಾಂಜಾ ದಂಧೆ ಹೆಚ್ಚುತ್ತಿದೆ. ಕಾಂಗ್ರೆಸ್ ಪುಡಾರಿಗಳೇ ಜನರನ್ನು ಭೀತಿಯಲ್ಲಿರುವಂತೆ ಮಾಡುತ್ತಿದ್ದಾರೆ. ಲೋಕಾಯುಕ್ತರಿಗೇ ರಕ್ಷಣೆ ಇಲ್ಲದ ನಗರದಲ್ಲಿ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಇನ್ನೊಂದೆಡೆ ಎಲ್ಲಾ ಯೋಜನೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜನರ ಹಣ ಲೂಟಿ ಮಾಡಿ ಎಐಸಿಸಿಗೆ ಕಳುಹಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ ಎಟಿಎಂ ರೀತಿ ಕೆಲಸ ಮಾಡಿದರೆ, ಸಚಿವ ಕೆ.ಜೆ.ಜಾರ್ಜ್ ಅವರು ಸಿದ್ದರಾಮಯ್ಯ ಪಾಲಿಗೆ ಎಟಿಎಂ ಆಗಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿದರೆ ಜನ ಸೇವಿಸುವ ಗಾಳಿಗೂ ತೆರಿಗೆ ಹಾಕಿ ಅಲ್ಲೂ ಲೂಟಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.