Advertisement

ನಗರದಲ್ಲಿ ಶಾಲಾ ಮಕ್ಕಳ ಸುರಕ್ಷೆಗೆ “ಸೇಫ್‌ ಸ್ಕೂಲ್‌ ಝೋನ್‌’ವ್ಯವಸ್ಥೆ

10:24 PM Aug 06, 2021 | Team Udayavani |

ಮಹಾನಗರ: ಶಾಲಾ ಮಕ್ಕಳ ಸುರಕ್ಷೆಯ ದೃಷ್ಟಿಯಿಂದ ಮಂಗಳೂರು ನಗರ ವ್ಯಾಪ್ತಿಯ ಶಾಲಾ ವಠಾರಗಳನ್ನು ಸಂಚಾರ ಸುರಕ್ಷ ವಲಯಗಳಾಗಿ ರೂಪಿಸುವ ನಿಟ್ಟಿನಲ್ಲಿ “ಸೇಫ್‌ ಸ್ಕೂಲ್‌ ಝೋನ್‌’ ವಿನೂತನ ಪರಿಕಲ್ಪನೆಯೊಂದು ಸಾಕಾರಗೊಳ್ಳುತ್ತಿದೆ. ಅದರಂತೆ ನಗರದ ಮೂರು ಕಡೆ ಐದು ಶಾಲಾ ವಲಯಗಳಲ್ಲಿ ಸದ್ಯದಲ್ಲೇ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬರಲಿದ್ದು, ಇದರ ಯಶಸ್ಸು ನೋಡಿಕೊಂಡು ಮುಂದಿನ ಹಂತದಲ್ಲಿ ಎಲ್ಲ ಶಾಲಾ ವಲಯಗಳಲ್ಲಿ ಸೇಫ್‌ ಝೋನ್‌ ಜಾರಿಗೊಳಿಸಲು ನಿರ್ಧರಿಸಲಾಗಿದೆ.

Advertisement

ನಗರದಲ್ಲಿ ಸಂಚಾರ ದಟ್ಟಣೆಯಿಂದ ಕೂಡಿರುವ ಹೆಚ್ಚಿನ ರಸ್ತೆಗಳು ಶಾಲೆ ವಲಯಗಳ ಬಳಿಯಲೇ ಹಾದುಹೋಗುತ್ತಿವೆ. ವಾಹನ ದಟ್ಟನೆಯ ಪರಿಣಾಮ ಪಾದಚಾರಿಗಳು ರಸ್ತೆ ದಾಟಲು ಪರದಾಡಬೇಕಾಗುತ್ತದೆ. ಶಾಲಾ ಮಕ್ಕಳು ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಸ್ತೆದಾಟಲು ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡ ಶಾಸಕ ವೇದವ್ಯಾಸ ಕಾಮತ್‌ ಅವರು ಮಕ್ಕಳ ಸುರಕ್ಷೆಗೆ ರೂಪಿಸಿದ ವಿನೂತನ ಪರಿಕಲ್ಪನೆ ಸೇಫ್‌ ಸ್ಕೂಲ್‌ ಝೋನ್‌ (ಮಕ್ಕಳ ಸುರಕ್ಷತ ವಲಯ).

ಸುಮಾರು ಎರಡು ವರ್ಷಗಳ ಹಿಂದೆ ಸೇಫ್‌ ಸ್ಕೂಲ್‌ ಝೋನ್‌ ಯೋಜನೆಯ ಚಿಂತನೆ ರೂಪುಗೊಂಡಿದ್ದರೂ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನುಷ್ಠಾನಕ್ಕೆ ಹಿನ್ನಡೆಯಾಗಿತ್ತು. ಇದೀಗ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯ ಅನುದಾನದೊಂದಿಗೆ ಪಾಲಿಕೆಯ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳಲಿದೆ.ಟೆಂಡರ್‌ ಪ್ರಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿದ್ದು, ಶೀಘ್ರ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.

ಏನಿದು ಯೋಜನೆ
ವಾಹನ ಚಾಲಕರು ದೂರದಿಂದಲೇ ಶಾಲಾ ವಲಯವನ್ನು ಗಮನಿಸಿಕೊಂಡು ಅಲ್ಲಿ ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ವಾಹನ ಚಾಲನೆಗೆ ಪ್ರೇರೇಪಿಸುವುದು ಸೇಫ್‌ ಸ್ಕೂಲ್‌ ಝೋನ್‌ ಪರಿಕಲ್ಪನೆಯ ಮೂಲ ಗುರಿ. ಈ ನಿಟ್ಟಿನಲ್ಲಿ ಶಾಲೆಗಳ ಸನಿಹದಲ್ಲಿರುವ ರಸ್ತೆಗಳ 300 ಮೀಟರ್‌ ವ್ಯಾಪ್ತಿಯನ್ನು ಸುರಕ್ಷ ವಲಯವಾಗಿ ಮಾಡಲಾಗುತ್ತದೆ. ಶಾಲೆ ವಠಾರ ಪ್ರಾರಂಭವಾಗುವ ಮೊದಲು ರಸ್ತೆಯ ಎರಡು ಕಡೆಗಳಲ್ಲಿ ತಲಾ 300 ಮೀಟರ್‌ ದೂರ ಇರುವಾಗ ವಾಹನ ಚಾಲಕರಿಗೆ ಎಚ್ಚರಿಕೆ ಸಂದೇಶಗಳು ನೀಡುವ ಕ್ರಮಗಳು ಪ್ರಾರಂಭವಾಗುತ್ತವೆ. ಮುಂದಕ್ಕೆ ಶಾಲೆ ಇದೆ ಎಂಬುದನ್ನು ದೂರದಿಂದಲೇ ಗುರುತಿಸುವಂತಾಗಲು ಪ್ಲೊರೆಸೆಂಟ್‌ ಗ್ರೀನ್‌ ಸೈನೇಜ್‌ಗಳನ್ನು ಅಳವಡಿಸಲಾಗುತ್ತದೆ. ಕ್ರಾಸಿಂಗ್‌ಗೆ ಬಿಳಿ ಬಣ್ಣ, ರಸ್ತೆಗಳಲ್ಲಿ ಅಲ್ಲಲ್ಲಿ ಹೆಚ್ಚುವರಿ ಬಣ್ಣಗಳ ಪೈಂಟಿಂಗ್‌ (ರೋಡ್‌ ಫರ್ನಿಸರ್‌) ಮಾಡಲಾಗುತ್ತದೆ.

ಶಾಲೆಗಳ ಬಳಿ ಹಾದುಹೋಗು ಎಲ್ಲ ರಸ್ತೆಗಳಲ್ಲೂ 300 ಮೀಟರ್‌ ಅಂತರದಿಂದ ಸುವ್ಯವಸ್ಥಿತ ಸೂಚನಫಲಕ, ನಾಮಫಲಕ, ಸೈನೇಜ್‌ಗಳ ಅಳವಡಿಕೆ ಪ್ರಾರಂಭವಾಗುತ್ತದೆ. ಈ ಮೂಲಕ ವಾಹನ ಚಾಲಕರಿಗೆ ಮುಂದಕ್ಕೆ ಶಾಲೆಯ ಇರುವ ಬಗ್ಗೆ ಜಾಗೃತಿ ಮೂಡಿ ವಾಹನದ ವೇಗವನ್ನು ಕಡಿಮೆ ಮಾಡಿ ಎಚ್ಚರಿಕೆಯಿಂದ ಸಾಗುತ್ತಾರೆ. ಶಾಲಾ ಮಕ್ಕಳು ಆತಂಕವಿಲ್ಲದೆ ಸುರಕ್ಷಿತವಾಗಿ ರಸ್ತೆ ದಾಟಲು ಸಾಧ್ಯವಾಗುತ್ತದೆ.
300 ಮೀಟರ್‌ ಅಂತ್ಯದಲ್ಲಿ ಸ್ಕೂಲ್‌ ಝೋನ್‌ ಕೊನೆಗೊಳ್ಳುತ್ತದೆ ಎಂಬ ಫಲಕ ಇರುತ್ತದೆ. ಅಲ್ಲಿಂದ ವಾಹನ ಚಾಲಕರು ವೇಗವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಇವೆಲ್ಲವೂ ಇಂಡಿಯನ್‌ ರೋಡ್‌ ಕಾಂಗ್ರೆಸ್‌ನ ಮಾನ ದಂಡಕ್ಕೆ ಅನುಗುಣವಾಗಿ ಇರುತ್ತವೆ.
ಮಕ್ಕಳ ಜತೆ ಸಂವಾದ

Advertisement

ಯೋಜನೆ ಜಾರಿ ವೇಳೆ ಅನುಷ್ಠಾನ ತಂಡ ಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಸಂವಾದ ನಡೆಸಿ ಸೇಫ್‌ ಝೋನ್‌ ಹೇಗಿರಬೇಕು ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತದೆ. ರಸ್ತೆ ಸುರಕ್ಷೆ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ:‘ಬಾರ್’ ಬೇಡ ಎಂದ ಮಹಿಳಾ ಮಣಿಗಳು, ಬೇಕು ಅಂತಾ ಧರಣಿ ನಡೆಸಿದ ಮದ್ಯಪ್ರಿಯರು

ಹಾಸ್ಟಿಟಲ್‌ ಝೋನ್‌
ಲೇಡಿಗೋಶನ್‌ , ವೆನಾÉಕ್‌ ಆಸ್ಪತ್ರೆ ಸಹಿತ ಕೆಲವು ಪ್ರಮುಖ ಆಸ್ಪತ್ರೆಗಳು ಇರುವ ಕಡೆ ಹಾಸ್ಟಿಟಲ್‌ ಝೋನ್‌ (ಆಸ್ಪತ್ರೆ ವಲಯ) ರೂಪಿಸಲು ಕೂಡ ಶಾಸಕ ವೇದವ್ಯಾಸ ಕಾಮತ್‌ ಅವರು ಕಾರ್ಯೋನ್ಮುಖವಾಗಿದ್ದು, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಇದು ಕೂಡ ಒಳಗೊಂಡಿದೆ. ಮುಂದಕ್ಕೆ ಆಸ್ಪತ್ರೆ ಇರುವುದನ್ನು ವಾಹನ ಚಾಲಕರಿಗೆ ದೂರದಿಂದಲೇ ಮಾಹಿತಿ ನೀಡಿ ಇದಕ್ಕೆ ಸಂಬಂಧಪಟ್ಟಂತೆ ಇರುವ ನಿಯಮಗಳನ್ನು ಪಾಲನೆಯ ಬಗ್ಗೆ ಅರಿವು ಮಾಡಿಸುವ ನಿಟ್ಟಿನಲ್ಲಿ ಕೆಲವು ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ.

ಪ್ರಾಯೋಗಿಕ ಜಾರಿ
ಆರಂಭದಲ್ಲಿ ಹೆಚ್ಚು ವಾಹನ ಸಂಚಾರವಿರುವ ಮೂರು ಕಡೆಗಳ ಐದು ಶಾಲಾ ವಠಾರಗಳಲ್ಲಿ ಇದು ಪ್ರಾಯೋಗಿಕವಾಗಿ ಕೈಗೆತ್ತಿಗೊಳ್ಳಲಾಗುತ್ತಿದೆ. ಬೆಂದೂರುವೆಲ್‌ನ ಸೈಂಟ್‌ ಆ್ಯಗ್ನೆಸ್‌, ಶಾರದಾ ವಿದ್ಯಾಲಯ, ಲೇಡಿಹಿಲ್‌ನ ವಿಕ್ಟೋರಿಯ ಶಾಲೆ, ಅಲೋಶಿಯಸ್‌ ಶಾಲೆ, ಡೊಂಗರಕೇರಿ ಕೆನರಾ ವಿದ್ಯಾಲಯಗಳ ಬಳಿ ಆರಂಭದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಸದ್ಯದಲ್ಲೇ ಅನುಷ್ಠಾನ
ಸೇಫ್‌ ಸ್ಕೂಲ್‌ ಝೋನ್‌ ವಿನೂತನ ಪರಿಕಲ್ಪನೆ. ಎರಡು ವರ್ಷಗಳ ಹಿಂದೆ ನಗರದಲ್ಲಿ ಸೇಫ್‌ ಸ್ಕೂಲ್‌ಝೋನ್‌, ಹಾಸ್ಟಿಟಲ್‌ಝೋನ್‌ ಯೋಜನೆಯನ್ನು ಜಾರಿಗೊಳಿಸುವುದಾಗಿ ಬರೆದಿದ್ದೆ. ಇದನ್ನು ಪ್ರಸ್ತುತ ಜಾರಿಗೊಳಿಸುವ ಮೂಲಕ ನನ್ನ ಮಾತನ್ನು ಉಳಿಸಿಕೊಳ್ಳುತ್ತಿದ್ದೇನೆ. ನಗರದ ಪ್ರಮುಖ ರಸ್ತೆ, ಜಂಕ್ಷನ್‌ಗಳ ಬಳಿ ಇರುವ ಶಾಲೆಗಳ ಮಕ್ಕಳು ವಾಹನ ದಟ್ಟಣೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳ ಸುರಕ್ಷೆ ದೃಷ್ಟಿಯಿಂದ ಈ ಪ್ರದೇಶಗಳನ್ನು ಸುರಕ್ಷ ವಲಯವಾಗಿ ರೂಪಿಸುವ ನಿಟ್ಟಿನಲ್ಲಿ ಏನಾದರು ಮಾಡಬೇಕು ಎಂಬ ಚಿಂತನೆ ನನ್ನಲ್ಲಿತ್ತು. ಈ ಹಿನ್ನೆಲೆಯಲ್ಲಿ ಮೂಡಿಬಂದ ಪರಿಕಲ್ಪನೆ ಸೇಫ್‌ ಸ್ಕೂಲ್‌ ಝೋನ್‌. ಇದೀಗ ಯೋಜನೆ ಜಾರಿಗೆ ಸಿದ್ಧತೆಗಳು ನಡೆಯುತ್ತಿವೆ. ಇದರ ಜತೆಗೆ ಆಸ್ಪತ್ರೆ ಝೋನ್‌ ಪರಿಕಲ್ಪನೆ ಅನುಷ್ಠಾನಕ್ಕೆ ಬರಲಿದ್ದು, ಆಸ್ಪತ್ರೆ ವಲಯಗಳಲ್ಲಿ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲೂ ಕ್ರಮಕೈಗೊಳ್ಳಲಾಗುತ್ತಿದೆ.
-ವೇದವ್ಯಾಸ ಕಾಮತ್‌, ಶಾಸಕರು

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next