ಕಳೆದ ವಾರವಷ್ಟೇ ತೆರೆಕಂಡಿರುವ “ಓಲ್ಡ್ ಮಾಂಕ್’ ಚಿತ್ರತಂಡದ ಮುಖದಲ್ಲಿ ಗೆಲುವಿನ ನಗುವನ್ನು ಮೂಡಿಸಿದೆ. ಅದಕ್ಕೆ ಕಾರಣ, ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ “ಓಲ್ಡ್ ಮಾಂಕ್’ಗೆ ಸಿಗುತ್ತಿರುವ ಪ್ರತಿಕ್ರಿಯೆ.
ಹೌದು, ಕಳೆದ ವಾರ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಕಂಡಿದ್ದ “ಓಲ್ಡ್ ಮಾಂಕ್’ ಒಂದೇ ವಾರದಲ್ಲಿ ನಿರೀಕ್ಷೆಗೂ ಮೀರಿ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ಪ್ರದರ್ಶಕರಿಂದ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, ಈ ವಾರ “ಬಿ’ ಮತ್ತು “ಸಿ’ ಸೆಂಟರ್‌ಗಳೂ ಸೇರಿದಂತೆ ಇನ್ನೂ ಸುಮಾರು 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಈ ಬಗ್ಗೆ ಮಾತನಾಡುವ “ಓಲ್ಡ್ ಮಾಂಕ್’ ನಾಯಕ ಕಂ ನಿರ್ದೇಶಕ ಶ್ರೀನಿ, “ಸಿನಿಮಾಕ್ಕೆ ಆರಂಭದಿಂದಲೂ ಬೇಡಿಕೆಯಿದ್ದರೂ, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಸೆಂಟರ್‌ಗಳ ಸಂಖ್ಯೆ ಜಾಸ್ತಿ ಮಾಡೋಣ ಅಂದುಕೊಂಡು, ನಾವೇ ಆದಷ್ಟು ಕಡಿಮೆ ಸೆಂಟರ್‌ಗಳಲ್ಲಿ ರಿಲೀಸ್ ಮಾಡಿದ್ದೆವು. ಈಗ ನಮ್ಮ ನಿರೀಕ್ಷೆಗೂ ಮೀರಿ “ಓಲ್ಡ್ ಮಾಂಕ್’ಗೆ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಈ ವಾರದಿಂದ ಇನ್ನಷ್ಟು ಸೆಂಟರ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಒಂದೇ ವಾರದಲ್ಲಿ ರಿಲೀಸ್ ಸೆಂಟರ್ ಡಬಲ್ ಆಗುತ್ತಿರುವುದಕ್ಕೆ ಡಬಲ್ ಖುಷಿಯಾಗುತ್ತಿದೆ’ ಎನ್ನುತ್ತಾರೆ.
ಇದನ್ನೂ ಓದಿ:ವಿರಾಟ್ ಸೆಂಚುರಿ ಟೆಸ್ಟ್: ಟಾಸ್ ಗೆದ್ದ ಭಾರತ; ಶುಭ್ಮನ್ ಗಿಲ್ ಗಿಲ್ಲ ತಂಡದಲ್ಲಿ ಸ್ಥಾನ
“ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲೂ ದಿನಕ್ಕೆ ಕನಿಷ್ಟ 3-4 ಶೋಗಳು ಹೌಸ್‌ಫುಲ್ ಆಗುತ್ತಿವೆ. ಪ್ರದರ್ಶಕರು, ವಿತರಕರು ಮತ್ತು ಪ್ರೇಕ್ಷಕರಿಂದ ಇನ್ನಷ್ಟು ಸೆಂಟರ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುವಂತೆ, ಶೋಗಳ ಸಂಖ್ಯೆ ಹೆಚ್ಚಿಸುವಂತೆ ಡಿಮ್ಯಾಂಡ್ ಬರುತ್ತಿದೆ. ಹೀಗಾಗಿ ಈ ವಾರದಿಂದ “ಓಲ್ಡ್ ಮಾಂಕ್’ ಸ್ಕ್ರೀನಿಂಗ್ ಡಬಲ್ ಆಗಲಿದೆ’ ಎಂಬ ಮಾತು ಶ್ರೀನಿ ಅವರದ್ದು.
ಇನ್ನು “ಓಲ್ಡ್ ಮಾಂಕ್’ ಚಿತ್ರದಲ್ಲಿ ಶ್ರೀನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಉಳಿದಂತೆ ಸುಜಯ್ ಶಾಸ್ತ್ರೀ, ಎಸ್. ನಾರಾಯಣ್, ಸುದೇವ್ ನಾಯರ್, ರಾಜೇಶ್, ಅರುಣಾ ಬಾಲರಾಜ್, ಅಶೋಕ್ ಹೆಗ್ಡೆ, ಸಿಹಿಕಹಿ ಚಂದ್ರು ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ “ಓಲ್ಡ್ ಮಾಂಕ್’ ಸೇಫ್ ಗೇಮ್ ಚಿತ್ರತಂಡಕ್ಕೆ ಸಕ್ಸಸ್ ತಂದುಕೊಟ್ಟಿರು ವುದಂತೂ ಸುಳ್ಳಲ್ಲ.