Advertisement

ಸಾಫಲ್ಯ ಸೇವಾ ಸಂಘ ಮುಂಬಯಿ ನೂತನ ಮಿನಿ ಸಭಾ ಭವನ ಲೋಕಾರ್ಪಣೆ

02:59 PM Mar 03, 2019 | |

ಮುಂಬಯಿ: ಕಡಿಮೆ ಜನಸಂಖ್ಯೆ ಇರುವ ತುಂಬಾ ಚಿಕ್ಕ ಸಮಾಜವಾದರೂ ನಿಮ್ಮ ಸಾಧನೆ ಮಾತ್ರ ತುಂಬಾ ದೊಡ್ಡದಾಗಿದೆ. ಪ್ರಸ್ತುತ ನಿಮ್ಮ ಸಮಾಜ ಹಿಂದುಳಿದ ಸಮಾಜವಾಗಿ ಉಳಿದಿಲ್ಲ. ಬಹಳ ಮುಂದುವರಿದ ಸಮಾಜವಾಗಿದೆ. ಮುಂದಿನ ವರ್ಷಗಳಲ್ಲಿ ನೀವು ಇತಿಹಾಸ ಬದಲಿಸಬಲ್ಲಿರಿ. ಇತಿಹಾಸದ ನವ ನಿರ್ಮಾಣ ಮಾಡಬಲ್ಲವ ರಾಗಿದ್ದೀರಿ. ಸಮಾಜೋದ್ಧಾರದ ನೆಲೆಯಲ್ಲಿ ನಿಮ್ಮ ಸಮಾಜಪರ ಚಿಂತನೆ, ಮುಂದಾಲೋಚನೆ ಮೆಚ್ಚುವಂಥದ್ದಾಗಿದೆ. ಸಮಾಜದ ಉದ್ಧಾರಕ್ಕಾಗಿ ನೀವು ದಾನ ಮಾಡಲು ಹಿಂಜರಿಯುವುದಿಲ್ಲ. ಸಮಾಜದ ಏಳ್ಗೆಗಾಗಿ ನೀವೆಲ್ಲ ಸೇರಿ ಹಣದ ಹೊಳೆಯನ್ನೇ ಹರಿಸಿದ್ದೀರಿ. ಇದಕ್ಕೆ ಇಂದು ಉದ್ಘಾಟನೆಗೊಂಡ ಸಮಾಜದ ಮಿನಿ ಭವನವೇ ಸಾಕ್ಷಿಯಾಗಿದೆ. ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತಿದ್ದೇನೆ ಎಂದು ಸಂಸದ ಕಿರಿಟ್‌ ಸೋಮಯ್ಯ ನುಡಿದರು.

Advertisement

ಫೆ. 24ರಂದು ಭಾಂಡೂಪ್‌ ಪಶ್ಚಿಮದ ಎಲ್‌ಬಿ ಎಸ್‌ ಮಾರ್ಗ, ಪನ್ನಾಲಾಲ್‌ ಕಂಪೌಂಡ್‌, ನಾಹೂರ್‌ ಆ್ಯಂಡ್‌ ಶೇರ್‌ ಇಂಡಸ್ಟ್ರಿಯಲ್‌ ಪ್ರಿಮೈಸೆಸ್‌ ಕೋ ಆಪರೇಟಿವ್‌ ಸೊಸೈಟಿ ಇಲ್ಲಿ ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ನೂತನ ಮಿನಿ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ತನ್ನ ಸಮಾಜವನ್ನು ಶಿಕ್ಷಣವಂತರನ್ನಾಗಿ ಮಾಡುವುದು ಸಂಸ್ಥೆಯ ಮುಖ್ಯ ಗುರಿಯಾಗಿರಬೇಕು. ಸದ್ಯ ಹೆಣ್ಣು ಮಕ್ಕಳು ಕೂಡಾ ಎಲ್ಲ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದು, ಅವರನ್ನು ನಾಲ್ಕು ಗೋಡೆಗಳ ಮಧ್ಯೆ ಇರಿಸಬೇಡಿ. ಅವರಿಗೆ ಉತ್ತಮ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಮುಂದೆ ಬರಲು ಪ್ರೇರೇಪಿಸಬೇಕು. ಸಮಾಜ ಬದಲಾಗಿ ಏಳ್ಗೆಯನ್ನು ಹೊಂದಿದರೆ ದೇಶ ಕೂಡಾ ಬದಲಾಗಿ ಉನ್ನತಿ ಕಾಣಲು ಸಾಧ್ಯವಿದೆ. ಉತ್ತಮ ಸಮಾಜಪರ ಸೇವೆಯೊಂದಿಗೆ ನಿಮ್ಮ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಹಾರೈಸಿದರು.

ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಕಿರಿಟ್‌ ಸೋಮಯ್ಯ ಇವರನ್ನು ಹಾಗೂ ಮಿನಿ ಸಭಾಭವನಕ್ಕೆ ಸಹಕರಿಸಿದ ದಾನಿಗಳನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.

ಕಟ್ಟಡ ಸಮಿತಿಯ ಅಧ್ಯಕ್ಷ ಸದಾನಂದ ಸಫಲಿಗ ಅವರು ಮಾತನಾಡಿ, ನಮ್ಮ ಸಮಾಜಕ್ಕೆ ದೇವರ ದಯೆ ಒದಗಿ ಬಂದಿದೆ. ಸಂಘಕ್ಕೆ ಮಿನಿ ಭವನದ ಸ್ಥಾಪನೆಗೆ ಸಮಾಜ ಬಾಂಧವರೆಲ್ಲ ಸಹಕಾರ ನೀಡಿದ್ದಾರೆ. ಶ್ರೀನಿವಾಸ ಸಾಫಲ್ಯ ಅವರು ಸಮಾಜದ ಉದ್ಧಾರಕ್ಕಾಗಿ ಒಳ್ಳೆಯ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಇದಕ್ಕೆಲ್ಲಾ ನಾವು ಸಹಕಾರ ನೀಡುವುದರೊಂದಿಗೆ ಭವಿಷ್ಯದಲ್ಲಿ ಸಾಫಲ್ಯ ಭವನದ ನಿರ್ಮಾಣ ಮಾಡುವ ಸಂಕಲ್ಪವನ್ನು ಹೊಂದೋಣ ಎಂದು ನುಡಿದರು.

ಇದೇ ಸಂದರ್ಭದಲ್ಲಿ ದಾನಿಗಳ ನಾಮಫಲಕವನ್ನು ಸಂಘ ಮಾಜಿ ಅಧ್ಯಕ್ಷ ಓಂ ಪ್ರಕಾಶ್‌ ರಾವ್‌ ಹಾಗೂ ಮಾಜಿ ಉಪಾಧ್ಯಕ್ಷ ಪಿ. ಡಿ. ಸಾಲ್ಯಾನ್‌ ಅವರು ಉದ್ಘಾಟಿಸಿದರು. ಮಾಜಿ ಉಪಾಧ್ಯಕ್ಷ ಡಾ| ವಾಮನ ಸಫಲಿಗ, ಹಿರಿಯ ಸದಸ್ಯ ಬಿ. ಟಿ. ತಲಪಾಡಿ, ಗಂಗಾಧರ ಕಾಂಚನ್‌, ವಾಸು ಪುತ್ರನ್‌, ಗಣೇಶ್‌ ಕರ್ಕೇರ, ಕೊಗ್ಗ ಸಾಲ್ಯಾನ್‌, ಮಾಜಿ ಕಾರ್ಯದರ್ಶಿ ಕಿರಣ್‌ ಮುಲ್ಕಿ, ಶ್ರೀನಿವಾಸ ಸಾಫಲ್ಯ ಹಾಗೂ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Advertisement

ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್‌ ಬಂಗೇರ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಅನಸೂಯಾ ಕೆಲ್ಲಪುತ್ತಿಗೆ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಸದಸ್ಯ ಅರ್ಷದ್‌ ಸಫಲಿಗ ಅತಿಥಿಗಳನ್ನು ಪರಿಚಯಿಸಿದರು. ಜತೆ ಕೋಶಾಧಿಕಾರಿ ದಮಯಂತಿ ಸಾಲ್ಯಾನ್‌ ದಾನಿಗಳ ಪಟ್ಟಿಯನ್ನು ವಾಚಿಸಿದರು. ವೇದಿಕೆಯಲ್ಲಿ   ಕೋಶಾಧಿಕಾರಿ ಭಾಸ್ಕರ್‌ ಟಿ. ಅಮೀನ್‌ ಉಪಸ್ಥಿತರಿದ್ದರು ಇತ್ತೀಚೆಗೆ ಭಯೋತ್ಪಾದಕರ ಹೀನ ಕೃತ್ಯಕ್ಕೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಂಗಳೂರಿನ ಬಿಜೆಪಿ ಮುಖಂಡ ಅನಿಲ್‌ ಕುಮಾರ್‌ ಅತ್ತಾವರ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next