ಬೆಳ್ತಂಗಡಿ : ಧ.ಗ್ರಾ.ಯೋಜನೆಯ ಮೂಲಕ ಸ್ವಸಹಾಯ ಸಂಘ ರಚಿಸಿ ಆರ್ಥಿಕವಾಗಿ ಸದೃಢರನ್ನಾಗಿಸುವುದೇ ಧ್ಯೇಯವಾಗಿದೆ. ಹೊಸದಾಗಿ ರಚನೆಯಾದ ಸಂಘದ ಸದಸ್ಯರು ಕೂಡ ಅಭಿವೃದ್ಧಿಯನ್ನು ಕಾಣಬೇಕು. ಸ್ವ ಉದ್ಯೋಗಿಗಳಾಗಿ ಸಾಧನೆಯನ್ನು ಮಾಡಿ ತೋರಿಸ ಬೇಕು ಎಂದು ಧ.ಗ್ರಾ. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಚಂದ್ರಶೇಖರ ಹೇಳಿದರು.
ಅವರು ಬೆಳ್ತಂಗಡಿ ಲಾ„ಲ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಧ.ಗ್ರಾ. ಯೋಜನೆಯ ಬೆಳ್ತಂಗಡಿ ವಲಯದ ನೂತನ 8 ಸ್ವ ಸಹಾಯ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.ಹಿಂದೆ ಎಲ್ಲರೂ ಆರ್ಥಿಕವಾಗಿ ಹಿಂದುಳಿದಿದ್ದರು. ಅಭಿವೃದ್ಧಿಯೂ ಇರಲಿಲ್ಲ. ಈಗ ತಂತ್ರಜ್ಞಾನ ಬೆಳೆದ ಹಾಗೆ ಬದಲಾವಣೆಯೂ ಆಗುತ್ತಿದೆ. ಉಳಿತಾಯ ಯೋಜನೆಯಿಂದ ನಮ್ಮ ಆರ್ಥಿಕ ಸ್ಥಿತಿಗತಿಯೂ ಉತ್ತಮ ವಾಗುತ್ತದೆ. ನಾವು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಂಡು ಉತ್ತಮ ಜೀವನ ನಡೆಸಲು ಇಂತಹ ಸಂಘಗಳು ಸಹಕಾರಿ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಲಾ„ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆಯ ಕೂಸು ಗ್ರಾಮಾಭಿವೃದ್ಧಿ ಯೋಜನೆ. ಇದರಿಂದ ತಾಲೂಕಿನ ಜನತೆ ಅಲ್ಲದೆ ರಾಜ್ಯದ ಜನರು ಆರ್ಥಿಕವಾಗಿ ಸಬಲಗೊಂಡಿದ್ದಾರೆ. ಮಹಿಳಾ ಸಶಕ್ತೀಕರಣವಾಗಿದೆ. ಜ್ಞಾನ ವಿಕಾಸದ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಶ್ರೀ ಕ್ಷೇತ್ರದ ಯೋಜನೆಗಳು ಜನರ ಬದುಕಿನ ಆಶಾಕಿರಣವಾಗಿ ಮೂಡಿಬಂದಿವೆ. ಹೊಸದಾಗಿ ರಚನೆಯಾದ ಸಂಘಗಳು ಇದರ ಪ್ರಯೋಜನ ಪಡೆದು ಸಾಧನೆ ಮಾಡಿ ತೋರಿಸಬೇಕು ಎಂದರು.ವಲಯಾಧ್ಯಕ್ಷೆ ಶಾರದಾ ಎಸ್. ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಯೋಜನೆಯ ಬೆಳ್ತಂಗಡಿ ತಾ| ಯೋಜನಾಧಿಕಾರಿ ರೂಪಾ ಜಿ. ಜೈನ್, ಪತ್ರಕರ್ತ ಭುವನೇಶ್ ಗೇರುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ನೂತನವಾಗಿ ರಚನೆಯಾದ 8 ಸ್ವ ಸಹಾಯ ಸಂಘಗಳ ಪದಾಧಿಕಾರಿಗಳಿಗೆ ಸಂಘದ ಪುಸ್ತಕವನ್ನು ಹಸ್ತಾಂತರಿಸಲಾಯಿತು.
ಸೇವಾ ಪ್ರತಿನಿಧಿ ಗೀತಾ ಸ್ವಾಗತಿಸಿ, ಭಾರತಿ ವಂದಿಸಿದರು. ಬೆಳ್ತಂಗಡಿ ವಲಯ ಮೇಲ್ವಿಚಾರಕ ಸುರೇಶ್ ಎಸ್. ಕಾರ್ಯಕ್ರಮ ನಿರ್ವಹಿಸಿದರು.