ಸಾಧ್ವಿ ಹೇಳಿಕೆ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಬಿಜೆಪಿ ಮತ್ತು ಆರೆಸ್ಸೆಸ್‌ನವರು ‘ಗಾಡ್-ಕೆ-ಲವರ್ಸ್’ ಅಲ್ಲ, ಅವರು ‘ಗೋಡ್-ಸೆ-ಲವರ್ಸ್’ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ಸಾಧ್ವಿ ಪ್ರಜ್ಞಾ ಹೇಳಿಕೆಗೆ ಸಂಬಂಧಿಸಿ ಪ್ರಧಾನಿ ಮೋದಿ ಪ್ರತಿಕ್ರಿಯಿಸುವ ಮುನ್ನ, ಮೋದಿಯವರ ಮೌನದ ಕುರಿತು ಪ್ರಶ್ನೆಯೆತ್ತಿದ್ದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ನಾನು ಈ ದೇಶಕ್ಕಾಗಿ ಪ್ರಾರ್ಥಿಸುತ್ತೇನೆ ಎಂದಿದ್ದರು. ಇನ್ನು ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ‘ಗೋಡ್ಸೆ ಸಂಘ ಪರಿವಾರದ ಸಿದ್ಧಾಂತದಿಂದ ಸ್ಫೂರ್ತಿ ಪಡೆದವರು. ಅಂತೆಯೇ ಪ್ರಜ್ಞಾ ಕೂಡ ಅದೇ ಸಿದ್ಧಾಂತದಿಂದ ಪ್ರೇರಣೆ ಪಡೆದವರು. ಮೊದಲನೆಯವರು ಮಹಾತ್ಮನನ್ನು ಕೊಂದರೆ, ಎರಡನೆಯವರು ಮಹಾತ್ಮನ ಮಕ್ಕಳನ್ನು ಕೊಂದಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಎಸ್‌ಪಿ ಅಧ್ಯಕ್ಷ ಅಖೀಲೇಶ್ ಯಾದವ್, ‘ಮೋದಿ ಅವರು 180 ಡಿಗ್ರಿಯ ಪ್ರಧಾನಿ. ರಾಷ್ಟ್ರಪಿತ ಮಹಾತ್ಮ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿ ನೀಡಿರುವ ಹೇಳಿಕೆಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
Advertisement
ರೋಡ್‌ಶೋಗೆ ತಡೆ: ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಜೆಪಿ ಶುಕ್ರವಾರ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದರೂ ರೋಡ್ ಶೋ ನಡೆಸದಂತೆ ಸಾಧ್ವಿ ಪ್ರಜ್ಞಾಗೆ ಬಿಜೆಪಿ ನಿರ್ದೇಶಿಸಿದೆ. ಬುರ್ಹಾನ್‌ಪುರದಲ್ಲಿ ಅಭ್ಯರ್ಥಿ ನಂದಕಿಶೋರ್ ಚೌಹಾಣ್ ಪರ ಸಾಧ್ವಿ ರೋಡ್ ಶೋ ಹಮ್ಮಿಕೊಂಡಿದ್ದರು. ಆದರೆ, ಪಕ್ಷದ ಸೂಚನೆ ಮೇರೆಗೆ ಅವರು ರೋಡ್ ಶೋ ನಡೆಸಲಿಲ್ಲ.