Advertisement

ಸಾಧು ಲಿಂಗಾಯತರು ಸ್ವಾರ್ಥ ತೊರೆದು ಒಗ್ಗೂಡಿ

07:06 PM Apr 11, 2021 | Team Udayavani |

ಬ್ಯಾಡಗಿ : ಶ್ರೀಮಂತ ಭಕ್ತರಿಂದ ಮಠಗಳನ್ನು ಅಳೆಯುವಂತಹ ಕೆಲಸವಾಗಬಾರದು. ನಿಸ್ವಾರ್ಥ ದಾಸೋಹಿಗಳನ್ನು ಹೊಂದಿರುವ ಮಠಗಳೇ ಅತ್ಯಂತ ಶ್ರೇಷ್ಠ. ಸಾಧು ಲಿಂಗಾಯತ ಸಮಾಜದವರು ಇನ್ನಾದರೂ ಸ್ವಾರ್ಥದ ಗೋಡೆಗಳನ್ನು ಕಿತ್ತು ಹಾಕಿ ಎಲ್ಲರನ್ನೂ ಒಗ್ಗೂಡಿಸಬೇಕೆಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಕರೆ ನೀಡಿದರು.

Advertisement

ಪಟ್ಟಣದ ಶ್ರೀ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಸಾಧು ಲಿಂಗಾಯತ ಸಮಾಜದ ತಾಲೂಕು ಘಟಕ ಆಯೋಜಿಸಿದ್ದ ಸಮಾಜದ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಣದ ಶ್ರೀಮಂತಿಕೆ ಇರುವ ಭಕ್ತರಿಂದ ಶ್ರೀಮಠ ಏನನ್ನೂ ನಿರೀಕ್ಷಿಸುವುದಿಲ್ಲ. ಪ್ರಸ್ತುತ ದಿನದಲ್ಲಿ ದಾನಿಗಳ ಬದಲಿಗೆ ದಾಸೋಹಿಗಳ ಅವಶ್ಯಕತೆಯಿದೆ. ಸಾಲದ ಸುಳಿಯಲ್ಲಿ ಸಿಲುಕಿದಾಗ್ಯೂ ಕೋಟ್ಯಧಿ  àಶ್ವರರನ್ನು ಹೊಂದಿರುವ ಮಠವೆಂದು ಕರೆಸಿಕೊಂಡಿದೆ. ಹೃದಯ ಶ್ರೀಮಂತಿಕೆಯ ಭಕ್ತರು ಒಂದಿಲ್ಲೊಂದು ದಿನ ಶ್ರೀಮಠಕ್ಕೆ ಆಸರೆಯಾಗಿ ನಿಲ್ಲುವ ವಿಶ್ವಾಸವಿದೆ ಎಂದರು.

ಮಠ ಬೇಡ-ಅನುಭವ ಮಂಟಪ ಕಟ್ಟಿ: ಹನ್ನರಡನೇ ಶತಮಾನದಲ್ಲಿ ಲಿಂಗಾಯತ ಧರ್ಮಕ್ಕೆ ಮುನ್ನುಡಿ ಬರೆದ ಬಸವಾದಿ ಶರಣರ ನುಡಿಯಂತೆ ಸಿರಿಗೆರೆ ಮಠ ವರ್ಗರಹಿತ, ಜಾತ್ಯತೀತ ತಳಹದಿ ಮೇಲೆ ನಡೆಯುತ್ತಿದೆ. ಸಮಾಜಕ್ಕೆ ಸೇರಿದ ನಿವೇಶನದ ಜಾಗೆಯಲ್ಲಿ ಮಠ ಕಟ್ಟುವುದಕ್ಕಿಂತ ಅನುಭವ ಮಂಟಪ ಕಟ್ಟುವುದು ಉತ್ತಮ. ಇದಕ್ಕೆ ಅವಶ್ಯವಿರುವ ನೀಲನಕ್ಷೆಯನ್ನು ಶೀಘ್ರದಲ್ಲೇ ರಚಿಸುವುದಾಗಿ ತಿಳಿಸಿದರು.

ಉದ್ದೇಶ ಈಡೇರಲಿ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಸಮಾಜದ ಕೆಲಸಕ್ಕೆಂದು ಪಟ್ಟಣದ ವಿದ್ಯಾನಗರದಲ್ಲಿ ಸುಮಾರು 3 ಕೋಟಿ ರೂ. ಬೆಲೆ ಬಾಳುವ 21ಗುಂಟೆಯಷ್ಟು ಜಾಗೆ ನೀಡಲಾಗಿದೆ. ಸಮಾಜದ ಎಲ್ಲ ಜನರು ಒಗ್ಗೂಡಿ ಆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಮುಂದಾದಲ್ಲಿ ಸಂಪೂರ್ಣ ಸಹಕಾರವಿದೆ ಎಂದರು.

Advertisement

ಶಿಕ್ಷಣಕ್ಕೆ ಮಹತ್ವ ನೀಡಿದ ಮಠ: ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್‌. ಆರ್‌. ಪಾಟೀಲ ಮಾತನಾಡಿ, ಸಮಾಜದ ಜನರು ಶೈಕ್ಷಣಿಕವಾಗಿ ಅಭಿವೃದ್ಧಿಯಾದಲ್ಲಿ ದೇಶದ ಉನ್ನತಿಗೆ ಕಾರಣವಾಗಲಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ ಹಿನ್ನೆಲೆಯಲ್ಲಿ ವಿಶ್ವದೆಲ್ಲೆಡೆ ತನ್ನದೇ ಆದ ಭಕ್ತ ಸಮೂಹವನ್ನು ಹೊಂದಿದೆ ಎಂದರು.

ರಾಜಕಾರಣದ ಒಳಸುಳಿಗೆ ಸಮಾಜ ಸಿಲುಕಿಸಬೇಡಿ: ಮುಖಂಡ ಗಂಗಣ್ಣ ಎಲಿ ಮಾತನಾಡಿ, ಸಾಧು ಲಿಂಗಾಯತ ಸಮಾಜಕ್ಕೆ ಕೃಷಿಕ ವೃತ್ತಿ ಮೂಲಾಧಾರವಾಗಿದ್ದು, ಇಂದಿಗೂ ಅದನ್ನೇ ನೆಚ್ಚಿಕೊಂಡಿದೆ. ಆದರೆ, ನಮ್ಮಲ್ಲಿರುವ ಭಿನ್ನಾಭಿಪ್ರಾಯಕ್ಕೆ ಸಮಾಜ ಬಲಿಕೊಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ರಾಜಕಾರಣದ ಒಳಸುಳಿಗೆ ಸಮಾಜವನ್ನು ಸಿಲುಕಿಸದಂತೆ ಮನವಿ ಮಾಡಿದರು.

ಹೊಣೆಗಾರಿಕೆ ಎಚ್ಚರಿಸಿದ ತರಳಬಾಳು ಹುಣ್ಣಿಮೆ: ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಪ್ರಕಾಶ ಬನ್ನಿಹಟ್ಟಿ, ಸಿರಿಗೆರೆ ಸಂಸ್ಥಾನ ಮಠ ರಾಜ್ಯದೆಲ್ಲೆಡೆ ನಡೆಸುತ್ತಿರುವ ತರಳಬಾಳು ಹುಣ್ಣಿಮೆಗಳಿಂದ ಸಮಾಜದ ಜನರ ಮೇಲಿರುವ ಹೊಣೆಗಾರಿಕೆಯನ್ನು ಎಚ್ಚರಿಸುತ್ತಾ ಬಂದಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳು, ನಿವೃತ್ತ ಯೋಧರು ಸೇರಿದಂತೆ ಅತ್ಯುನ್ನತ ಹುದ್ದೆ ಅಲಂಕರಿಸಿದವರನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಡಾ.ಎಸ್‌.ಎಸ್‌.ಬಿದರಿ ಅಧ್ಯಕ್ಷತೆ ವಹಿಸಿದ್ದರು.ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಛತ್ರದ, ಶಂಕರಗೌಡ ಪಾಟೀಲ, ಪುಟ್ಟಪ್ಪ ಛತ್ರದ, ಉಳಿವೆಪ್ಪ ಕಬ್ಬೂರ, ದಾನಪ್ಪ ಚೂರಿ, ಎಂ.ಬಿ.ಹುಚಗೊಂಡರ, ನ್ಯಾಯವಾದಿ ಸುರೇಶ ಕಾಟೇನಹಳ್ಳಿ, ಕಿರಣ ಗಡಿಗೋಳ, ನಿಂಗಣ್ಣ ಬಿದರಿ, ಚಂದ್ರು ಹುದ್ದಾರ, ಆನಂದ ಸಂಕಣ್ಣರ, ವಿರೇಶ ಮತ್ತಿಹಳ್ಳಿ, ಜಗದೀಶ ಪಾಟೀಲ, ಮಹಾಂತೇಶ ಎಲಿ ಇನ್ನಿತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಕೆ.ಜಿ.ಖಂಡೇಬಾಗೂರ ಸ್ವಾಗತಿಸಿ, ಪ್ರೊ.ಸಿ. ಶಿವಾನಂದಪ್ಪ ನಿರೂಪಿಸಿ, ಆರ್‌.ಎಂ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next