Advertisement

ನದಿ ಉಳಿಸಲು ಜಾಥಾ ಹೊರಟ ಸದ್ಗುರು

07:45 AM Aug 22, 2017 | Team Udayavani |

ಬೆತ್ತಲೆಯಾದ ನಮ್ಮ ನದಿಗಳ ಪುನಶ್ಚೇತನಕ್ಕೆ ಸದ್ಗುರು ಟೊಂಕ ಕಟ್ಟಿ ನಿಂತಿದ್ದಾರೆ. ಇದಕ್ಕಾಗಿ ಕನ್ಯಾಕುಮಾರಿಯಿಂದ
ಹಿಮಾಲಯದ ತನಕ 16 ರಾಜ್ಯಗಳಲ್ಲಿ “ರಾಲಿ ಫಾರ್‌ ರಿವರ್’ ಎಂಬ ಜಲಾಂದೋಲನ ಹಮ್ಮಿಕೊಂಡಿದ್ದಾರೆ.
ಈ ಜಾಥಾ ಸೆ.8ಕ್ಕೆ ಮೈಸೂರಿಗೆ ಹಾಗೂ 9ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಅಕ್ಟೋಬರ್‌ 2ರಂದು ದಿಲ್ಲಿಯಲ್ಲಿ
ಸಮಾಪನಗೊಳ್ಳಲಿದೆ. ರಾಜ್ಯದ ಕಾವೇರಿ ಸಹಿತ ವಿವಿಧ ನದಿಗಳ ಸ್ಥಿತಿಗತಿಗಳ ಕುರಿತು ಬೆಳಕು ಚೆಲ್ಲಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸದ್ಗುರು ಮನಬಿಚ್ಚಿ ಮಾತನಾಡಿದ್ದಾರೆ.

Advertisement

– ಒಂದು ಕಾಲದಲ್ಲಿ ನಮ್ಮ ಸಂಸ್ಕೃತಿಯ ಭಾಗವೆನಿಸಿದ್ದ ನದಿ ಇಂದು ವಾಣಿಜ್ಯೀಕರಣಗೊಂಡಿದೆ; ನದಿಪಾತ್ರ ದಂಧೆಯ ತಾಣವಾಗಿ ರೂಪಾಂತರಗೊಂಡಿದೆ. ಇಂಥ ಹಂತದಲ್ಲಿ ನೀವು ನದಿ ಉಳಿಸುವ ರ್ಯಾಲಿಗೆ ಹೊರಟಿದ್ದೀರಿ…
ನದಿ ರೂಪಾಂತರಗೊಂಡಿಲ್ಲ, ಜನರ ಮನಸ್ಥಿತಿ ಬದಲಾಗಿದೆಯಷ್ಟೇ. ಇಂಥ ಮನಸ್ಥಿತಿಯನ್ನು ಬದಲಾಯಿಸುವುದೇ ನಮ್ಮ ಮುಖ್ಯ ಗುರಿ. ಪೂಜನೀಯ ನದಿಗಳು ಇಂದು ಬತ್ತುತ್ತಿವೆ. ಅಂಕಿ ಅಂಶ ನೋಡಿ, ನರ್ಮದ ಹಾಗೂ ಕೃಷ್ಣಾ ಶೇ. 60ರಷ್ಟು ಬತ್ತಿದ್ದರೆ, ಕಾವೇರಿ ಶೇ.40ರಷ್ಟು ಖಾಲಿಯಾಗಿದೆ. ಎಲ್ಲೆಡೆ ನದಿ ಕುಸಿಯುತ್ತಿದೆ. ಆದರೆ ಜನಸಂಖ್ಯೆ ,
ಅಗತ್ಯಗಳು ಏರುತ್ತಿವೆ. ಹಾಗಾದರೆ ನೀರಿನ ಮೂಲ ಎಲ್ಲಿದೆ, ನಾವು ಅದಕ್ಕೆ ಏನು ಮಾಡಿದ್ದೇವೆ? ಉತ್ತರವಿಲ್ಲ. ನಗರಗಳಲ್ಲಿರುವ 20 ವರ್ಷದ ಯುವಕರಲ್ಲಿ ಶೇ. 80ರಷ್ಟು ಜನ ನದಿಯನ್ನೇ ನೋಡಿಲ್ಲ. ನೀರು ನಲ್ಲಿಯಿಂದ ಬರುತ್ತದೆ ಎಂದು ನಂಬಿಕೊಂಡಿದ್ದಾರೆ. ಕಾವೇರಿ ಸಹಿತ ಎಲ್ಲ ®ದಿಗಳು ಇಂದು ಸೀಸನಲ್‌ ಆಗಿವೆ. 870 ಕಿ.ಮೀ ಉದ್ದ ಹರಿಯಬೇಕಾದ ಕಾವೇರಿ ಈ ಸಲದ ಬೇಸಿಗೆಯಲ್ಲಿ 170 ಕಿ.ಮೀ.ಯಷ್ಟು ಬತ್ತಿಹೋಗಿದ್ದಾಳೆ. ಏನು ಮಾಡ್ತೀರಿ? ಕಾಡಿಲ್ಲ.

– ಈ ಸಮಸ್ಯೆಗೆ ರ್ಯಾಲಿಯಿಂದ ಯಾವ ರೀತಿ ಪರಿಹಾರ ಹುಡುಕುವ ಆಲೋಚನೆ ತಮ್ಮಲ್ಲಿದೆ?
ಇಲ್ಲಿ ಎರಡು ಹಂತಗಳಿವೆ. ಒಂದು- ಸರ್ಕಾರವನ್ನು ಪೂರ್ಣ ತೊಡಗಿಸಿಕೊಳ್ಳುವುದು. ಇನ್ನೊಂದು ಜನರನ್ನು ಸೇರಿಸಿಕೊಳ್ಳುವುದು. ನದಿ ಉಳಿವಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ನೀತಿ ರೂಪಿಸಬೇಕು ಎನ್ನುವುದು ನಮ್ಮ ಒತ್ತಾಸೆ. ಇದಕ್ಕೆ ಕೇಂದ್ರದ ಜತೆ ರಾಜ್ಯ ಸರ್ಕಾರಗಳ ಸಹಕಾರವೂ ಬೇಕು. ಹೀಗಾಗಿಯೇ, 16 ರಾಜ್ಯಗಳಲ್ಲಿ ರ್ಯಾಲಿ ಮಾಡುತ್ತಿದ್ದೇವೆ. ಅದರ ಮುಖ್ಯಮಂತ್ರಿಗಳು ನಮ್ಮ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತ್ಯೇಕ ಕಾನೂನು ರೂಪಿಸಲು ಜನರ ಒತ್ತಾಸೆ ತಿಳಿಸುವ ನಿಟ್ಟಿನಲ್ಲಿ 80009 80009 ಸಂಖ್ಯೆಗೆ ಮಿಸ್ಡ್ ಕಾಲ್‌ ನೀಡಲು ಜನರನ್ನು ಕೋರುತ್ತೇವೆ. ಮಿಸ್ಡ್ ಕಾಲ್‌ಗ‌ಳ ಸಂಖ್ಯೆ 30 ಕೋಟಿ ನಮ್ಮ ಗುರಿ. ಆ ಗುರಿ ಮುಟ್ಟಿದರೆ, ಸರ್ಕಾರಕ್ಕೂ ಜನರ
ಸಹಭಾಗಿತ್ವದ ಬಗ್ಗೆ ವಿಶ್ವಾಸ ಮೂಡುತ್ತದೆ.

– ರ್ಯಾಲಿ ನಂತರ ಮುಂದೇನು ಮಾಡ್ತೀರಿ?: ನದಿತಟದ ಇಕ್ಕೆಡೆಯ ಒಂದು ಕಿಮೀ ವ್ಯಾಪ್ತಿಯಲ್ಲಿ ಹಸಿರು ಸೃಷ್ಟಿಸುವುದು
ನಮ್ಮ ಉದ್ದೇಶ. ಇಲ್ಲಿ ಶೇ 25ರಷ್ಟು ಸರ್ಕಾರಿ ಭೂಮಿ ಇದ್ದು, ಇಲ್ಲಿ ಅರಣ್ಯ ರೂಪಿಸಬಹುದು. ಉಳಿದ ಖಾಸಗಿ ಭೂಮಿಯಲ್ಲಿ ಹಣ್ಣಿನ ತೋಟ ನಿರ್ಮಿಸಬಹುದು. ಈಗಾಗಲೇ ಪ್ರಾಯೋಗಿಕವಾಗಿ ಈ ಕೆಲಸ ಮಾಡಿದ್ದೇವೆ. ರೈತರಿಗೆ ಹಣ್ಣುಗಳನ್ನು ಬೆಳೆಯುವುದರಿಂದ ಈಗ ತೆಗೆಯುತ್ತಿರುವ ಬೆಳೆಯಿಂದ 3ರಿಂದ 8 ಪಟ್ಟು ಹೆಚ್ಚು ಆದಾಯ ಸಿಗುತ್ತದೆ. ವಿಯೆಟ್ನಾಂನಲ್ಲಿ ಈ ಪ್ರಯೋಗ ಯಶ ಪಡೆದಿದೆ. ಇದರಿಂದ ಜನರ ಆಹಾರ ಪದಟಛಿತಿಯೂ ಬದಲಾಗುತ್ತದೆ. ಆರೋಗ್ಯ
ಪೂರ್ಣ ಬಾಳ್ವೆ ಸಾಧ್ಯ.

– ಕಡಿಮೆಯಾಗುತ್ತಿರುವ ನದಿಗಳೊಂದಿಗಿನ ಜನರ ಭಾವನಾತ್ಮಕ ನಂಟನ್ನು ವೃದಿಟಛಿಸಲು ಸಾಧ್ಯವಿಲ್ಲವೇ?
ನರ್ಮದಾ, ಗಂಗಾ ನದಿ ಜತೆ ಜನರಿಗೆ ಈ ರೀತಿಯ ನಂಟಿದೆ. ಆದರೆ, ನಮ್ಮಲ್ಲಿ ಆ ನಂಟು ಕೊಂಚ ಕಡಿಮೆ. ನೀರನ್ನು ಹೇಗೆ ಬಳಸಬಹುದು ಎಂದಷ್ಟೇ ನೋಡುತ್ತಾರೆ. ವರ್ಷಕ್ಕೊಂದು ಸಲ ಬಾಗಿನ ಕೊಟ್ಟು ಪೂಜೆ ಮಾಡುತ್ತಿದ್ದೇವೆ ಅಷ್ಟೇ.
ನೀರನ್ನು ದೇವರಂತೆ ನೋಡಿಕೊಳ್ಳುತ್ತಿಲ್ಲ. ಆದರೆ ನದಿಗಳೊಂದಿಗಿನ ಭಾವನಾತ್ಮಕ ನಂಟನ್ನೇ ಕಾನೂನಾಗಿ ಜಾರಿ ಮಾಡಲು ಆಗುವುದಿಲ್ಲ.

Advertisement

– ಪಾಲಿಸಿಗಳಿಂದ ನದಿ ಉಳಿಸೋಕೆ ಆಗುತ್ತಾ?
ದೀರ್ಘಾವಧಿ ಕಾನೂನುಗಳು ಸ್ವಲ್ಪ ನೋವನ್ನು ಕೊಡುತ್ತದೆ ನಿಜ. ದಾರಿ ತಪ್ಪಿದರೆ ದಂಡ ವಿಧಿಸಬೇಕು. ಇಲ್ಲದೆ ಇದ್ದರೆ 2030ರ ಹೊತ್ತಿಗೆ ನೀರಿನ ಪ್ರಮಾಣ ಶೇ 7ಕ್ಕೆ ಇಳಿಯುತ್ತದೆ. ನಾವೀಗ ಪ್ರಯತ್ನಿಸಿದರೆ ಖಂಡಿತಾ 20-25 ವರ್ಷಗಳಲ್ಲಿ
ನದಿಗಳನ್ನು ಉಳಿಸಬಹುದು.

– ರಾಜ್ಯದ ಎಲ್ಲ ನದಿಗುಂಟ ಪ್ರಭಾವಿ ವ್ಯಕ್ತಿಗಳ ಭೂಮಿ ಇದೆ, ಮರಳುಗಾರಿಕೆ ನಡೆಯುತ್ತಿದೆಯಲ್ಲಾ?
ಎಲ್ಲದಕ್ಕೂ ಒಂದೇ ಪರಿಹಾರ. ನೀರಿಗಾಗಿ ಪ್ರತ್ಯೇಕ ಪಾಲಿಸಿ ಬೇಕು. ಅದು ಜಾರಿಯಾದರೆ ಇವೆಲ್ಲವೂ ಕಡಿಮೆಯಾಗುತ್ತಾ ಹೋಗುತ್ತದೆ. ಸಮಯ ತೆಗೆದು ಕೊಳ್ಳುತ್ತದೆ ಅನ್ನೋದು ನಿಜ, ಆದರೆ ಖಚಿತವಾದ ಪರಿಹಾರ ಸಿಗುತ್ತದೆ.

– ಕಾವೇರಿ ಸಮಸ್ಯೆಗೆ ನೀವೇನು ಮಾಡ್ತೀರಿ?
ಆಗಸ್ಟ್‌ 31ರಂದು ತಮಿಳುನಾಡು ರೈತ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಸೆ.8ರಂದು ಮೈಸೂರಲ್ಲಿ ನಡೆಯುವ ನದಿ ಉಳಿಸುವ ರ್ಯಾಲಿಯಲ್ಲಿ ಕರ್ನಾಟಕ ರೈತ ಮುಖಂಡರೊಂದಿಗೆ ಮುಖಾಮುಖೀ ಮಾಡಿಸುತ್ತೇನೆ. ಇದರ ಉದ್ದೇಶ ಇಷ್ಟೇ. ಇಬ್ಬರೂ ಸೇರಿ ಕಾವೇರಿ ನದಿ ಪಾತ್ರದ ರೈತ ಸಂಘ ರಚಿಸುವುದು. ಇವರು ಕಾವೇರಿ ನೀರನ್ನು ಹೇಗೆ ಹೋರಾಟ ಮಾಡಿ ಪಡೆಯಬೇಕು ಅನ್ನೋದನ್ನು ಚಿಂತಿಸುವುದಲ್ಲ. ಬದಲಾಗಿ ಕಾವೇರಿಯಿಂದ ನೀರನ್ನು ಹೇಗೆ, ಎಷ್ಟು, ಯಾವ ರೀತಿ ಹಂಚಿಕೆ ಮಾಡಿಕೊಳ್ಳಬೇಕು ಅನ್ನೋದರ ಬಗ್ಗೆ ಚಿಂತಿಸುವಂತೆ ಪ್ರೋತ್ಸಾಹಿಸುತ್ತೇನೆ. ಇಲ್ಲಿ ಭಾಷೆ, ಜಾತಿ ಮುಖ್ಯವಲ್ಲ. ಇರೆಲ್ಲರೂ ಕಾವೇರಿಯ ಮಕ್ಕಳು.

– ಬಿ ಕೆ ಗಣೇಶ್‌/ ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next