ಧಾರವಾಡ: ಪತ್ರಿಕೆಗಳಲ್ಲಿ ಮಾಲೀಕರ ಆದ್ಯತೆಗೆ ತಕ್ಕಂತೆ ಸುದ್ದಿ ಮಾಡುವ ಅನಿವಾರ್ಯತೆ ಎದುರಾಗಿದೆ. ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಆಂತರಿಕ ಸ್ವಾತಂತ್ರ್ಯ ಸಹ ಇಲ್ಲದಂತಾಗಿದೆ. ಓದುಗನ ಅಪೇಕ್ಷೆಗೆ ತಕ್ಕಂತೆ ಸುದ್ದಿಗಳನ್ನು ನೀಡಿದಾಗ ಮಾತ್ರ ಪತ್ರಿಕೆಗಳ ಮೌಲ್ಯವರ್ಧನೆ ಸಾಧ್ಯವಾಗುತ್ತದೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಹೇಳಿದರು.
ಇಲ್ಲಿಯ ಕವಿಸಂನಲ್ಲಿ ದಿ| ಆರ್.ಸಿ. ನಾಗಮ್ಮನವರ ದತ್ತಿ ಪ್ರಯುಕ್ತ ರವಿವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಜಾಲತಾಣದ ಪಾತ್ರ ಮುಖ್ಯವಾಗಿದ್ದರೂ, ಅವುಗಳ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗದ ಕಾರಣ ದುರ್ಬಳಕೆಯೇ ಹೆಚ್ಚಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಎಂದರು.
ಪ್ರಶಸ್ತಿ ಪ್ರದಾನ: ಪತ್ರಿಕಾ ರಂಗದ ಜೀವನಮಾನ ಸಾಧನೆಗೆ ದಿ| ಆರ್.ಸಿ. ನಾಗಮ್ಮನವರ ಸ್ಮರಣಾರ್ಥ ಕೊಡಮಾಡುವ ಸಾಧನಾ ರಾಷ್ಟ್ರೀಯ ಗೌರವ ಪ್ರಶಸ್ತಿಯನ್ನು ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ನನ್ನ ಜೀವನದಲ್ಲಿ ಮನರಂಜನೆಗೆ ಆದ್ಯತೆ ನೀಡದೆ ಹೆಚ್ಚಿನ ಸಮಯವನ್ನು ಪತ್ರಿಕೆ ಕಟ್ಟಿ ಬೆಳೆಸುವಲ್ಲೇ ಕಳೆದಿದ್ದೇನೆ. ಎಷ್ಟು ಪ್ರಬುದ್ಧತೆಯಿಂದ ಪತ್ರಿಕೆ ಬೆಳೆಸಲು ಸಾಧ್ಯವೋ ಅಷ್ಟು ಪ್ರಯತ್ನದಿಂದ ಪತ್ರಿಕೆ ಬೆಳೆಸಿದ್ದೇನೆ. ಇದೇ ಕಾರಣದಿಂದ ಇಂದಿಗೂ ಸಹ ಜನರು ಕರಾವಳಿ ಮುಂಜಾವು ಪತ್ರಿಕೆ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.
ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಇಸಬೆಲ್ಲಾ ಝೇವಿಯರ್, ಕೃಷ್ಣ ಜೋಶಿ, ಶಿವಣ್ಣ ಬೆಲ್ಲದ, ಶಿವಾನಂದ ಬಾವಿಕಟ್ಟಿ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಪ್ರಕಾಶ ಉಡಿಕೇರಿ, ವಿಶ್ವೇಶ್ವರಿ ಹಿರೇಮಠ ಇನ್ನಿತರರಿದ್ದರು.