ನರಗುಂದ: ಸಾಮಾಜಿಕ ಕ್ರಾಂತಿ ಮತ್ತು ಮಹಿಳಾ ಸಮಾನತೆಗೆ ಅಭಿವ್ಯಕ್ತಗೊಳಿಸಿದ ಸಾಹಿತ್ಯವನ್ನು ಪ್ರಕಾಶಮಾನಗೊಳಿಸುವ ಜೊತೆಗೆ ಎಲೆಮರೆ ಕಾಯಿಯಂತೆ ಸಾಹಿತ್ಯ ಕೃಷಿ ಕೈಗೊಂಡ ಸಾಹಿತಿಗಳನ್ನು ಗುರುತಿಸಿ ಸಾಧನಾ ರಾಷ್ಟ್ರೀಯ ಸಾಹಿತಿ ಪ್ರಶಸ್ತಿಯನ್ನು ಈ ಬಾರಿ ಜಿಲ್ಲೆಗೆ ನೀಡಲಾಗುತ್ತಿದೆ ಎಂದು ಧಾರವಾಡ ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಹಾಗೂ ಮಾನವ ಹಕ್ಕುಗಳ ಕೇಂದ್ರ ಅಧ್ಯಕ್ಷೆ ಡಾ| ಇಸಬೆಲ್ಲಾ ಝೇವಿಯರ್ ತಿಳಿಸಿದರು.
ಸಂಸ್ಥೆಯಿಂದ ಪ್ರತಿ ವರ್ಷ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಯನ್ನು ಜಿಲ್ಲೆಯ ಸಾಹಿತಿಗೆ ನೀಡುವ ಉದ್ದೇಶದೊಂದಿಗೆ ನರಗುಂದದಲ್ಲಿ ಏರ್ಪಡಿಸಲಾದ ಜಿಲ್ಲಾಮಟ್ಟದ ಕಾರ್ಯಕ್ರಮ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಧನೆಯನ್ನು ಒಳಗೊಂಡ ಪ್ರಶಸ್ತಿ ಪತ್ರ, ನಗದು ಮತ್ತು ವಿಶೇಷ ಅವಾರ್ಡ್ ಹೊಂದಿದ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ ಎಂದು ತಿಳಿಸಿದರು
ಸಾಧನಾ ಮಾನವ ಹಕ್ಕುಗಳ ಸಂಸ್ಥೆ ಜಿಲ್ಲಾಧ್ಯಕ್ಷ ಸಂಗನಗೌಡ ಹಾಲಗೌಡರ ಮಾತನಾಡಿ, ಸಂಸ್ಥೆಯಿಂದ ಕೊಡಲಾಗುವ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಜಿಲ್ಲೆಗೆ ನೀಡುತ್ತಿರುವುದು ಸಂತಸದಾಯಕ. ಈ ಹಂತದಲ್ಲಿ ಜಿಲ್ಲೆಯಲ್ಲಿ ಎಲೆಮರೆಯ ಕಾಯಿಯಂತೆ ಸೇವೆಗೈದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಸಂಸ್ಥೆಯದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣದಲ್ಲಿ ಪ್ರಶಸ್ತಿ ಪ್ರದಾನ, ಜಿಲ್ಲಾಮಟ್ಟದ ಕಾರ್ಯಕ್ರಮದ ಸ್ಥಳ, ಪೂರ್ವಭಾವಿ ಸಿದ್ಧತೆ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಅಭಿರುಚಿ ಬೆಳೆಸುವ ಹಾಗೂ ವಿವಿಧ ಕ್ಷೇತ್ರಗಳ ಪ್ರತಿಭಾವಂತರನ್ನು ಗೌರವಿಸುವ ಮತ್ತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಯಿತು.
ಕಸಾಪ ತಾಲೂಕಾಧ್ಯಕ್ಷ ಮೋಹನ ಕಲಹಾಳ, ಸಾಧನಾ ಸಂಸ್ಥೆ ನಿರ್ದೇಶಕಿ ಸೀಮಾ ಮುಧೋಳ, ಅಶೋಕ ಸುರೇಬಾನ, ಗುರುಶಾಂತ ದೊಡಮನಿ, ನ್ಯಾಯವಾದಿ ಎಂ.ಬಿ. ಕುಲಕರ್ಣಿ, ಶಂಕರ ಬೆಳವಟಗಿ, ಡಿ.ಎಚ್. ಅಜ್ಜಿ, ಪಿ.ಸಿ. ಕಲಹಾಳ, ಭೀಮಸಿ ಯಾವಗಲ್ಲ ಮುಂತಾದವರು ಇದ್ದರು.