Advertisement

ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಂದಿರ: ದುರ್ಗಾಹೋಮ

06:06 PM Nov 01, 2019 | Suhan S |

ಮುಂಬಯಿ, ಅ. 31: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪಾಲ್ಘರ್‌ ಜಿಲ್ಲಾಯಾದ್ಯಂತ ಇರುವ ತುಳು-ಕನ್ನಡಿಗ ಭಕ್ತಾದಿಗಳನ್ನು ಒಂದೆಡೆ ಸೇರಿಸುತ್ತಿರುವ ಬೊಯಿಸರ್‌ ಪಶ್ಚಿಮದ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ದುರ್ಗಾಹೋಮ ಮತ್ತು ಕಲಶ ವಿಸರ್ಜನ ಕಾರ್ಯಕ್ರಮವು ನಡೆಯಿತು.

Advertisement

ದೇವಳದ ಗರ್ಭಗುಡಿಯ ಎದುರಿನ ವಿಶಾಲ ಪ್ರಾಂಗಣದಲ್ಲಿ ದುರ್ಗಾಕಲಶ ಸ್ಥಾಪನೆಗೈದು ಮಂದಿರದ ಅರ್ಚಕರಾದ ರಾಜೇಶ್‌ ಶಾಂತಿ ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ರಮಾನಂದ ಪೂಜಾರಿ ಮತ್ತು ರವಿ ರೈ ಅವರು ಶ್ರೀ ದುರ್ಗಾ ಹವನದಲ್ಲಿ ಯಜಮಾನ ಸೇವೆಯ ನೇತೃತ್ವ ವಹಿಸಿದ್ದರು. ನವದುರ್ಗೆಯ ಆರಾಧನೆಯಲ್ಲಿ ಸರಸ್ವತೀ, ಲಕ್ಷ್ಮೀ ಮತ್ತು ದುರ್ಗೆಯ ರೂಪದಲ್ಲಿ ಪೂಜಿಸುವಾಗ ನಮ್ಮಲ್ಲಿಯ ಅರಿಷಡ್ವರ್ಗಗಳನ್ನು ಜಯಿಸಿ ಪರಿಶುದ್ಧರಾಗುವುದೇ ನವರಾತ್ರಿಯ ಮೂಲ ಉದ್ದೇಶವಾಗಿದೆ ಎಂದು ಪುರೋಹಿತ ರಾಜೇಶ್‌ ಭಟ್‌ ಇದೇ ಸಂದರ್ಭದಲ್ಲಿ ವಿವರಿಸಿದರು.

ಮಂದಿರದ ವಿಶ್ವಸ್ಥ ಮಂಡಳಿಯ ಶ್ರೀನಿವಾಸ ಕೋಟ್ಯಾನ್‌ ಅವರು ನಿತ್ಯಾನಂದ ಮಂದಿರದ ವಾಸ್ತುವನ್ನು ನಿರ್ಮಿಸಿದ ದಿವಂಗತ ದಾಮೋದರ್‌ ನಾಯ್ಕ ಅವರ ಸಮಾಜಪರ ದೂರದೃಷ್ಟಿಯನ್ನು ನೆನಪಿಸುತ್ತಾ, ದೇಗುಲದ ಹೆಸರಿನಲ್ಲಿ ಸ್ಥಾಪಿಸಿದ ವಾಸ್ತುವಿನಲ್ಲಿ ವರ್ಷವಿಡೀ ಜರಗುವ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲ್ಘರ್‌ ಜಿಲ್ಲಾ ಪರಿಸರದಲ್ಲಿ ಇರುವ ತುಳು-ಕನ್ನಡಿಗ ಬಂಧುಗಳನ್ನು ಒಂದೆಡೆ ಒಟ್ಟುಗೂಡಿಸುವಂತಹ ಒಳ್ಳೆಯ ಕೆಲಸ ಮಾಡುತ್ತಿದೆ. ಮಂದಿರದ ಸ್ಥಾಪನೆಯಾಗುವ ದಿನದಂದು ಉಪಸ್ಥಿತರಿದ್ದ ಎಲ್ಲರ ಸಮ್ಮುಖದಲ್ಲಿ ಜರಗಿದ ಕೆಲವು ವಿಶೇಷ ವಾಸ್ತವ ಸಂಗತಿಗಳನ್ನು ಉಲ್ಲೇಖೀಸಿ ಮಂದಿರದ ಪೂಜಾ ಸ್ಥಳವು ದೈವೀ ಕೃಪೆ ಹಾಗೂ ಕಾರ್ಣಿಕವನ್ನು ಹೊಂದಿರುವುದಕ್ಕೆ ಈ ಘಟನೆಗಳೇ ಸಾಕ್ಷಿ ಎಂದು ವಿವರಿಸಿದರು.

ದುರ್ಗಾ ಹವನದ ನಂತರ ಮಹಿಳಾ ಭಜನ ವೃಂದದವರಿಂದ ಗರ್ಬಾ ನೃತ್ಯಪ್ರದಕ್ಷಿಣೆ ಸೇವೆ ನಡೆಯಿತು. ಮಹಾಮಂಗಳಾರತಿಯ ಅನಂತರ ಶ್ರೀ ದುರ್ಗಾ ಕಲಶದ ವಿಸರ್ಜನಾ ಕಾರ್ಯಕ್ರಮ ಜರಗಿತು. ಡಿ. 27 ರಂದು ಜರಗಲಿರುವ ಮಂದಿರದ ವಾರ್ಷಿಕ ಸ್ಥಾಪನಾ ದಿನದ ನಿಮಿತ್ತ ಜರಗುವ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಕಟಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತವೃಂದದ ಸದಸ್ಯರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

 

Advertisement

ಚಿತ್ರ-ವರದಿ : ಪಿ. ಆರ್‌. ರವಿಶಂಕರ್‌.

Advertisement

Udayavani is now on Telegram. Click here to join our channel and stay updated with the latest news.

Next