Advertisement

ಅಕ್ಕಿ ಆಲೂರಿಗೆ ಸದ್ಭಾವನಾ ಪಾದಯಾತ್ರೆ

03:37 PM Dec 05, 2018 | |

ಅಕ್ಕಿಆಲೂರು: ಲಿಂ| ಚನ್ನವೀರ ಸ್ವಾಮಿಗಳವರ ಜನ್ಮಶತಮಾನೋತ್ಸವ ಸಮಾರಂಭ ಹಿನ್ನೆಲೆಯಲ್ಲಿ ಹಾನಗಲ್ಲ ವಿರಕ್ತಮಠದಿಂದ ಅಕ್ಕಿಆಲೂರ ವಿರಕ್ತಮಠಕ್ಕೆ ಭಕ್ತರ ಸದ್ಭಾವನಾ ಪಾದಯಾತ್ರೆ ಆಗಮಿಸಿತು. ಹಾನಗಲ್ಲ ವಿರಕ್ತಮಠದ ಕುಮಾರ ಶ್ರೀಗಳವರ ಸಂಕಲ್ಪದಂತೆ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಈ ಪಾದಯಾತ್ರೆಯಲ್ಲಿ ಜಾತಿ-ಮತ-ಪಂಥಗಳನ್ನು ಲೆಕ್ಕಿಸದೇ ಭಕ್ತರು ಸಾಗರೋಪಾದಿಯಲ್ಲಿ ಪಾಲ್ಗೊಂಡಿದ್ದರು.

Advertisement

ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಹಾನಗಲ್ಲ ವಿರಕ್ತಮಠದಿಂದ ಹೊರಟ ಪಾದಯಾತ್ರೆಯಲ್ಲಿ ಹಾನಗಲ್ಲ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ 1000ಕ್ಕೂ ಹೆಚ್ಚು ಯಾತ್ರಿಗಳು ಪಾಲ್ಗೊಂಡಿದ್ದರು. ಪಾದಯಾತ್ರೆ ಸುರಳೇಶ್ವರ ಮಾರ್ಗವಾಗಿ ಸುಮಾರು 8 ಕಿ.ಮೀ. ಅಂತರವನ್ನು 1.30 ಗಂಟೆ ಅವಧಿಯಲ್ಲಿ ತಲುಪಿತು. ದಾರಿಯುದ್ದಕ್ಕೂ ಮಹಿಳೆಯರ ಆರತಿ ಬೆಳಗಿ ಸ್ವಾಗತ ಕೋರಿದರೆ, ಮಂಗಳವಾದ್ಯಗಳು ಮೊಳಗಿ ಶುಭ ಕೋರಿದವು.

ಪಾದಯಾತ್ರೆಯುದ್ದಕ್ಕೂ ಭಕ್ತರು ಬಸವನಾಮ ಸ್ಮರಣೆ, ಕುಮಾರೇಶ್ವರ ಮತ್ತು ಚನ್ನವೀರೇಶ್ವರರ ಸ್ಮರಣೆ ಮಾಡುತ್ತ ಸಾಗಿದರೆ, ಕೆಲವು ಭಕ್ತರು ಜಯಘೋಷ ಹಾಕಿ ಪಾದಯಾತ್ರೆಗೆ ಮೆರಗು ತಂದರು. ಪಾದಯಾತ್ರೆ ಸಂಚರಿಸುವ ಮಾರ್ಗಗಳನ್ನು ಹೂವುಗಳಿಂದ ಶೃಂಗರಿಸಲಾಗಿತ್ತು. ಪಾದಯಾತ್ರೆ ಅಕ್ಕಿಆಲೂರು ತಲುಪಿದ ನಂತರ ಅಕ್ಕಿಆಲೂರಿನ ಭಕ್ತರು ಪಾದಯಾತ್ರೆಯನ್ನು ಅತ್ಯಂತ ಭಕ್ತಿಭಾವದಿಂದ ಬರಮಾಡಿಕೊಂಡರು. ನಂತರ ಹಾನಗಲ್ಲ ಪ್ರದಕ್ಷಿಣೆ ಹಾಕಿ ಕುಮಾರೇಶ್ವರ ಮಠಕ್ಕೆ ತಲುಪಿ ಸಂಪನ್ನಗೊಂಡಿತು. ನಂತರ ಧರ್ಮಸಭೆ ನಡೆಯಿತು. ಈ ಸಂದರ್ಭದಲ್ಲಿ ಬಾಳೂರಿನ ಕುಮಾರ ಶ್ರೀಗಳು, ವಿರಕ್ತಮಠದ ಶಿವಬಸವ ಶ್ರೀಗಳು, ಕೂಡಲದ ಗುರುಮಹೇಶ್ವರ ಶ್ರೀಗಳು, ಮುತ್ತಿನಕಂತಿಮಠದ ಚಂದ್ರಶೇಖರ ಶ್ರೀಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next