Advertisement
ಸಮಯ ನಿರ್ವಹಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ. ನಾವು ಕಳೆಯುವ ಪ್ರತಿಯೊಂದು ಕ್ಷಣ ಕೂಡ ಬಹಳ ಮಹತ್ವವನ್ನು ಹೊಂದಿರುತ್ತದೆ. ಏಕೆಂದರೆ, ಒಮ್ಮೆ ಕಳೆದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಎಷ್ಟರಮಟ್ಟಿಗೆ ತನ್ನ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ ಎಂಬುದನ್ನು ಅವನ ಸಮಯ ನಿರ್ವಹಣೆ ಕೌಶಲದ ಆಧಾರದ ಮೇಲೆ ಅಳೆಯಬಹುದು.
ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಎಲ್ಲ ಅಭ್ಯರ್ಥಿಗಳಿಗೆ ಸಮಯ ನಿರ್ವಹಣೆ ಬಹಳ ಮುಖ್ಯವಾಗುತ್ತದೆ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಓದಿನ ಜೊತೆಜೊತೆಗೆ ಇನ್ನಿತರೆ ವ್ಯಕ್ತಿತ್ವ ಬೆಳವಣಿಗೆಯ ಚಟುವಟಿಕೆಗಳಿಗೆ ಕೂಡ ಸಮಯವನ್ನು ಮೀಸಲಿಡಬೇಕು.
Related Articles
Advertisement
ಕೆಲವೊಮ್ಮೆ ಕೇವಲ ಹತ್ತನೇ ತರಗತಿಯ ಬುದ್ದಿಮಟ್ಟಕ್ಕೆ ಪಠ್ಯಕ್ರಮವಿದ್ದರೂ ಸಹ, ಯಾರು ಸಮಯವನ್ನು ಸಂಪೂರ್ಣವಾಗಿ ಬಳಸಿಕೊಂಡು, ತ್ವರಿತವಾಗಿ ಉತ್ತರಗಳನ್ನು ಬಿಡಿಸುತ್ತಾರೋ ಅವರು ಮಾತ್ರ ಸಫಲತೆಯನ್ನು ಕಾಣಲು ಸಾಧ್ಯ. ಇದೆಲ್ಲ ಸಾಧ್ಯವಾಗಬೇಕಾದರೆ, ಪರೀಕ್ಷೆಗೂ ಪೂರ್ವದಲ್ಲಿ, ಅಭ್ಯರ್ಥಿಗಳು, ಕೃತಕ ಪರೀಕ್ಷಾ ವಾತಾವರಣವನ್ನು ನಿರ್ಮಿಸಿಕೊಂಡು, ಅಣಕು ಪರೀಕ್ಷೆಗಳನ್ನು (Mock Tests) ಬರೆಯಬೇಕು. ಇದರಿಂದ ಮೆದುಳನ್ನು ಪರೀಕ್ಷಾ ಸಮಯಕ್ಕೆ ಸಿದ್ದಗೊಳಿಸಿದಂತಾಗುತ್ತದೆ. ಇದನ್ನು ಇಂಗ್ಲಿಷಿನಲ್ಲಿ Setting the Circadian Rhythm ಎನ್ನುತ್ತಾರೆ. ಹೀಗೆ ಅಭ್ಯಾಸ ಮಾಡುವುದರಿಂದ ಪರೀಕ್ಷಾ ಸಮಯದಲ್ಲಿ ಮೆದುಳು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ.
ಅಭ್ಯಾಸದ ವೇಳೆಯಲ್ಲಿ ಸಮಯದ ನಿರ್ವಹಣೆಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿರುವ ಅಭ್ಯರ್ಥಿಗಳು ಕೇಳುವ ಸಾಮಾನ್ಯವಾದ ಪ್ರಶ್ನೆಯೆಂದರೆ, ದಿನದಲ್ಲಿ ಎಷ್ಟು ಘಂಟೆಗಳ ಕಾಲ ಅಭ್ಯಾಸ ಮಾಡಿದರೆ ಪಠ್ಯಕ್ರಮದಲ್ಲಿರುವ ಎಲ್ಲ ವಿಷಯಗಳನ್ನು ಪೂರ್ಣವಾಗಿ ಓದಬಹುದು ಎಂದು. ಆದರೆ, ಈ ಪ್ರಶ್ನೆಗೆ ಅಭ್ಯರ್ಥಿಗಳೇ ಸರಿಯಾಗಿ ಉತ್ತರಿಸಬಹುದು. ಬೇರೆ ಯಾರೂ ಕೂಡ ಸಮರ್ಥವಾಗಿ ಉತ್ತರಿಸಲು ಸಾಧ್ಯವಿಲ್ಲ. ಏಕೆಂದರೆ, ಪ್ರತಿಯೊಬ್ಬರ ಅಭ್ಯಾಸ ಶೈಲಿ ಹಾಗೂ ವಿಧಾನ ಬೇರೆಬೇರೆಯಾಗಿರುತ್ತದೆ. ಅಭ್ಯರ್ಥಿಗಳು ತಮ್ಮ ಬುದ್ದಿಮಟ್ಟಕ್ಕೆ ಹಾಗೂ ಅನುಕೂಲಕ್ಕೆ ತಕ್ಕಹಾಗೆ ಒಂದು ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡು, ಅದರಂತೆ ಅಭ್ಯಾಸ ಮಾಡಬೇಕು. ಹೀಗೆ ಮಾಡುವುದರಿಂದ ಅಭ್ಯರ್ಥಿಗಳಿಗೆ ಅವರ ಓದಿನ ಪ್ರಗತಿಯ ಬಗೆಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಅದರ ಜೊತೆಗೆ ಎಲ್ಲಿ ತಪ್ಪುಗಳಾಗುತ್ತಿದೆಯೆಂಬುದು ಕೂಡ ಗಮನಕ್ಕೆ ಬರುತ್ತದೆ. ನಾವು ಎಷ್ಟು ಗಂಟೆಗಳು ಓದುತ್ತೇವೆ ಎಂಬುದು ಮುಖ್ಯವಾಗುವುದಿಲ್ಲ. ಬದಲಾಗಿ, ಓದಿದ್ದನ್ನು ಎಷ್ಟು ಸಮರ್ಥವಾಗಿ ಅರ್ಥಮಾಡಿಕೊಂಡಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಗಂಟೆಗಟ್ಟಲೆ ಪುಸ್ತಕದ ಮುಂದೆ ಕೂತರೆ ಪ್ರಯೋಜನವಿಲ್ಲ. ದಿನದಲ್ಲಿ ಕೆಲವೇ ಗಂಟೆಗಳು ಅಭ್ಯಾಸ ಮಾಡಿದರೂ ಕೂಡ ಗಮನವಿಟ್ಟು ಓದಬೇಕು. ಆಗಲೇ ನಮ್ಮ ಪರಿಶ್ರಮಕ್ಕೆ ಅರ್ಥ ದೊರಕುತ್ತದೆ. ಸಮಯ ಒಂದು ಅಮೂಲ್ಯವಾದ ಸಂಪನ್ಮೂಲ. ಅದನ್ನು ಬಹಳ ಚಾಣಾಕ್ಷತನದಿಂದ ಬಳಕೆ ಮಾಡಬೇಕು. ಸಮಯದ ಸದ್ಭಳಕೆ ಜೀವನದ ಯಶಸ್ಸಿಗೆ ದಾರಿದೀಪವಾಗುತ್ತದೆ. – ಪ್ರಶಾಂತ್ ಎಸ್. ಚಿನ್ನಪ್ಪನವರ್, ಚಿತ್ರದುರ್ಗ