ಉಜಿರೆಯಿಂದ ಕೇವಲ 3 ರಿಂದ 4 ಕಿ.ಮೀ ಅಂತರದಲ್ಲಿರುವ ಸೂರ್ಯ ಎಂಬ ಕ್ಷೇತ್ರವು ಶಿವನ ಒಂದು ಮಹಿಮಾನ್ವಿತ ತಾಣವಾಗಿದೆ. ಇಲ್ಲಿ ಶಿವನು ಸದಾಶಿವ ರುದ್ರನೆಂಬ ಹೆಸರಿನಿಂದ ಪೂಜಿಸಲ್ಪಡುತ್ತಿದ್ದಾನೆ. ಪ್ರತಿಯೊಂದು ದೇವಾಲಯಕ್ಕೆ ಒಂದೊಂದು ವಿಶೇಷತೆ ಇರುತ್ತದೆ. ಭಕ್ತರು ಹರಕೆ ಹೊತ್ತರೆ ಅದು ಈಡೇರಿದ ನಂತರ ಬೇರೆ ಬೇರೆ ರೀತಿಯಲ್ಲಿ ಹರಕೆ ಸಲ್ಲಿಸಲಾಗುತ್ತದೆ. ಕೆಲವು ದೇವಾಲಯದಲ್ಲಿ ಬೆಲೆಬಾಳುವ ಸೀರೆ, ವಸ್ತ್ರ, ಸಾಮಗ್ರಿಗಳನ್ನು ನೀಡುವ ವಾಡಿಕೆ ಇದ್ದರೆ, ಇನ್ನು ಕೆಲವು ದೇವಸ್ಥಾನದಲ್ಲಿ ತಮ್ಮ ಹರಕೆಗಳನ್ನು ಭಿನ್ನ ರೀತಿಯಲ್ಲಿ ತೀರಿಸಲಾಗುತ್ತದೆ.
ಇಲ್ಲಿರುವ ಸದಾಶಿವ ರುದ್ರ ದೇವಸ್ಥಾನದಲ್ಲಿ ಹರಕೆ ಈಡೇರಿದರೆ ಮಣ್ಣಿನ ಗೊಂಬೆಗಳನ್ನು ಕೊಟ್ಟು ಹರಕೆ ತೀರಿಸಲಾಗುತ್ತದೆ. ಹರಕೆ ಈಡೇರಿದ ನಂತರ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ ಹಾಗೂ ಐದು ರೂ. ಕಾಣಿಕೆ ಜೊತೆ ಈ ಮಣ್ಣಿನ ಗೊಂಬೆಯನ್ನು ಅರ್ಪಿಸಬೇಕು. ನೀವು ಯಾವ ರೀತಿಯ ಹರಕೆ ಹೇಳುತ್ತೀರೋ, ಯಾವ ಕೋರಿಕೆಯನ್ನು ಕೋರುತ್ತೀರೋ ಅದೇ ರೀತಿಯ ಹರಕೆಯನ್ನು ಮಣ್ಣಿನ ಗೊಂಬೆಗಳ ರೂಪದಲ್ಲಿ ತೀರಿಸಬೇಕು. ಮನೆ ನಿರ್ಮಾಣಕ್ಕೆ ಹರಕೆ ಹೊತ್ತರೆ ಮಣ್ಣಿನ ಮನೆಯ ಆಕೃತಿಯನ್ನು ಅರ್ಪಿಸಬೇಕು, ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಿದರೆ ಮಗು ಜನಿಸಿದ ನಂತರ ಮಣ್ಣಿನ ತೊಟ್ಟಿಲನ್ನು ಅರ್ಪಿಸಬೇಕು. ಈ ಗೊಂಬೆಗಳನ್ನು ಆವೆ ಮಣ್ಣಿನಲ್ಲಿ ಮಾಡಲಾಗುತ್ತದೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಸಹಾಯವಾಗುವಂತೆ ಮಣ್ಣಿನ ಗೊಂಬೆಗಳನ್ನು ಕುಂಬಾರರಿಂದ ಮಾಡಿಸಿ ದೇವಸ್ಥಾನದ ಆವರಣದÇÉೇ ಲಭ್ಯವಿರುವಂತೆ ಮಾಡಲಾಗಿದೆ. 50 ರೂ.ನಿಂದ 200ರೂ.ವರೆಗೆ ಮಣ್ಣಿನ ಗೊಂಬೆಗಳನ್ನು ಇಲ್ಲಿ ಕಾಣಬಹುದು. ದೇವಸ್ಥಾನದಿಂದ ಉತ್ತರಕ್ಕೆ 100 ಮೀ. ದೂರದಲ್ಲಿ ಒಂದು ಹರಕೆ ಬನವಿದೆ. ಅರ್ಚಕರು ಹರಕೆಯ ಗೊಂಬೆಗಳನ್ನು ಆ ಬನದಲ್ಲಿ ಇಡುತ್ತಾರೆ. ಭಕ್ತರು ಅರ್ಪಿಸಿದ ಗೊಂಬೆಗಳು, ಅಕ್ಕಿಯನ್ನು ಮಧ್ಯಾಹ್ನದ ಪೂಜೆಗೂ ಮೊದಲು ಸಲ್ಲಿಸಬೇಕು. ಅದನ್ನು ಹರಕೆ ಬನಕ್ಕೆ ತೆಗೆದುಕೊಂಡು ಹೋಗಿ ಅರ್ಚಕರು ಗೊಂಬೆಗಳನ್ನು ಜೋಡಿಸುತ್ತಾರೆ.
ಪುರಾಣದ ಕಥೆ
ಈ ದೇವಾಲಯಕ್ಕೆ ಸಂಬಂಧಿಸಿದಂತೆ ಪೌರಾಣಿಕ ಕಥೆಯೊಂದರ ವಿವರಣೆ ಹೀಗಿದೆ; ಸಾವಿರಾರು ವರ್ಷಗಳ ಹಿಂದೆ ಭೃಗು ಮಹರ್ಷಿಯ ಶಿಷ್ಯರೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದರು. ಅವರ ಭಕ್ತಿಗೆ ಮೆಚ್ಚಿ ಶಿವ ಪಾರ್ವತಿ ಪ್ರತ್ಯಕ್ಷರಾಗಿ ಲಿಂಗರೂಪದಲ್ಲಿ ಈ ಕ್ಷೇತ್ರದಲ್ಲಿ ನೆಲೆಯಾದರಂತೆ. ಕೆರೆಕಟ್ಟೆ ಮಂದಿರದÇÉೊಂದು ಕೊಳವಿದೆ. ಪ್ರತಿವರ್ಷ ವಾರ್ಷಿಕ ಮಹೋತ್ಸವದಂದು ಈ ಕೆರೆಕಟ್ಟೆ ಮಹೋತ್ಸವ ನಡೆಸಲಾಗುವುದು. ಆಗ ಈ ಕೆರೆಗೆ ಪೂಜೆ ನಡೆಸಲಾಗುವುದು.
ಸ್ಥಳದ ಇತಿಹಾಸ
ಸದಾಶಿವ ರುದ್ರ ದೇವಸ್ಥಾನವು ಸೂರ್ಯ ಎಂಬ ಹಳ್ಳಿಯಲ್ಲಿರುವುದರಿಂದ ಇದನ್ನು ಸೂರ್ಯ ದೇವಸ್ಥಾನ ಎನ್ನಲಾಗುತ್ತದೆ. ಮಾಧ್ವ ಸಂಪ್ರದಾಯದ ಶಿವನ ಪ್ರಮುಖ ದೇವಾಲಯ ಇದಾಗಿದೆ. ಶಿವನನ್ನು ರುದ್ರನೆಂದು ಸಂಭೋಧಿಸಿ ಪೂಜಿಸಲಾಗುತ್ತದೆ. ಸುಮಾರು 13ನೇ ಶತಮಾನದ ಇತಿಹಾಸ ಹೊಂದಿದ ಈ ದೇವಸ್ಥಾನಕ್ಕೆ ಸೂರ್ಯ ದೇವಸ್ಥಾನ ಎಂತಲೂ ಕರೆಯಲಾಗುತ್ತದೆ. ಮತ್ತೂಂದು ದಂತಕಥೆಯ ಪ್ರಕಾರ . ಹಿಂದೆ ಬಂಗ ದೊರೆಗಳ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶದಲ್ಲಿ ಒಬ್ಬ ಬಡ ಮಹಿಳೆ ವಾಸಿಸುತ್ತಿದ್ದಳಂತೆ . ಅವಳು ದಿನನಿತ್ಯವೂ ತನ್ನ ಮಗ ಸೂರ್ಯನ ಜೊತೆಗೆ ಹುಲ್ಲು ಕೀಳಲು ಈ ದೇವಸ್ಥಾನವಿರುವ ತಾಣಕ್ಕೆ ಬರುತ್ತಿದ್ದಳಂತೆ. ಒಂದು ಬಾರಿ ಹುಲ್ಲು ಕೀಳಲು ಕುಡುಗೋಲಿನಿಂದ ನೆಲಕ್ಕೆ ಹೊಡೆದಾಗ ಅದು ಒಂದು ಕಲ್ಲಿಗೆ ತಾಗಿ, ಕಲ್ಲಿನಿಂದ ರಕ್ತ ಸುರಿಯಲು ಪ್ರಾರಂಭಿಸಿತಂತೆ. ಇದನ್ನು ಕಂಡು ಹೆದರಿದ ಆ ಮಹಿಳೆ ಜೋರಾಗಿ ತನ್ನ ಮಗ ಸೂರ್ಯನ ಹೆಸರನ್ನು ಕರೆದಳಂತೆ. ಅಂದಿನಿಂದ ಈ ದೇವಸ್ಥಾನಕ್ಕೆ ಹಾಗೂ ಈ ಊರಿಗೆ ಸೂರ್ಯ ಎಂಬ ಹೆಸರು ಬಂದಿತೆಂದು ಜನ ಹೇಳುತ್ತಾರೆ.
ಆಶಾ ಎಸ್. ಕುಲಕರ್ಣಿ