Advertisement

ಸದಾಶಿವ ವರದಿ ಜಾರಿಗೆ ಕೇಂದ್ರಕ್ಕೆ ಒತ್ತಡ ಹೇರಿ

06:30 AM Jan 07, 2019 | |

ಕಲಬುರಗಿ: ನ್ಯಾ| ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಕಾಂಗ್ರೆಸ್‌ ಹಿರಿಯ ಮುಖಂಡರಾದ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಬಿಜೆಪಿ ಮುಖಂಡ, ಮಾಜಿ ಸಚಿವ ಕೆ.ಬಿ. ಶಾಣಪ್ಪ ಒತ್ತಾಯಿಸಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ರವಿವಾರ ರಾಜ್ಯ ಮಾತಂಗ ವಿಕಾಸ ಸಮಿತಿ ಹಮ್ಮಿಕೊಂಡಿದ್ದ “ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ; ಸಾಮಾಜಿಕ ನ್ಯಾಯದ ಪರಿಕಲ್ಪನೆ’ ಎನ್ನುವ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
 
ಪರಿಶಿಷ್ಟ ಜಾತಿಗಳು ಒಳ ಮೀಸಲಾತಿ ಕಲ್ಪಿಸುವ ನ್ಯಾ| ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಕಳೆದ ಎರಡು ದಶಕಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ವರದಿ ಜಾರಿಗೆ ಇದುವರೆಗೂ ಸರ್ಕಾರಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಾಶಿವ ಆಯೋಗದ ವರದಿ ಜಾರಿ ತರುವ ನಿಟ್ಟಿನಲ್ಲಿ ಸಂಸದ ಖರ್ಗೆ ಹಾಗೂ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ವರದಿ ಜಾರಿಯಾಗುವವರೆಗೂ ಸಮುದಾಯದ ಹೋರಾಟ ಮುಂದುವರಿಸಬೇಕೆಂದು ಹೇಳಿದರು.

 ಕ್ಷೀಣಿಸಿದ ರಾಜಕೀಯ ಬಲ: ಈ ಹಿಂದೆ ವಿಧಾನಸಭೆಯಲ್ಲಿ ಮಾದಿಗ ಸಮುದಾಯದ ಶಾಸಕರ ಸಂಖ್ಯೆ 15ರಿಂದ 20 ಇರುತ್ತಿತ್ತು. ಈಗ ಶಾಸಕರ ಸಂಖ್ಯೆ ಕೇವಲ ಮೂರರಿಂದ ನಾಲ್ಕಕ್ಕೆ ಕುಸಿದಿದ್ದು, ಮಾದಿಗ ಸಮುದಾಯದ ರಾಜಕೀಯ ಬಲ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಮುದಾಯದ ಹೊಸ ನಾಯಕರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಹೇಳಿದರು. 

ವಿಧಾನಸಭೆ ಮತ್ತು ಸಂಸತ್‌ನಲ್ಲಿ ಸಮುದಾಯದ ನಾಯಕರ ಬಲ ಇದ್ದಾಗ ಮಾತ್ರ ಯಾವುದೇ ಹೋರಾಟಕ್ಕೆ ಜಯ ಲಭಿಸುತ್ತಿದೆ. ಆದ್ದರಿಂದ ಹೊಸ ಜನನಾಯಕರ ಹುಟ್ಟಬೇಕೆಂದು ಆಶಯ ವ್ಯಕ್ತಪಡಿಸಿದರು.
 
ವಿಚಾರ ಸಂಕಿರಣದಲ್ಲಿ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಉಗಮ; ಸಾಮಾಜಿಕ ಒಳನೋಟ’, “ಮಾದಿಗ ಜನಾಂಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿ-ಗತಿಗಳು’, “ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ಔಚಿತ್ಯತೆ ಮತ್ತು ಸಾಮಾಜಿಕ ನ್ಯಾಯ’ ಹಾಗೂ “ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಹೋರಾಟದ ತಲ್ಲಣಗಳು ಹಾಗೂ ಸವಾಲುಗಳು’ ಎಂಬ ಗೋಷ್ಠಿಗಳು ಜರುಗಿದವು. ಹಂಪಿಯ ಮಾತಂಗ ಮಹರ್ಷಿ ಆಶ್ರಮದ ಪೀಠಾಧಿಪತಿ ಪೂರ್ಣಾನಾಂದ ಭಾರತೀ ಸ್ವಾಮೀಜಿ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿದರು. 

Advertisement

ಅಂಬಾರಾಯ ಬೆಳಕೋಟ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಎಐಸಿಸಿ ಸದಸ್ಯೆ ಚಂದ್ರಿಕಾ ಪರಮೇಶ್ವರ, ರಾಜ್ಯ ಮಾದಿಗ ಸಂಘಟನೆಗಳ ಮಹಾಸಭಾ ಅಧ್ಯಕ್ಷ ಅಂಬಣ್ಣ ಅರೋಲಿ, ಸಹ ಸಂಚಾಲಕ ಮುತ್ತಣ್ಣ ಬೆಣ್ಣೂರು, ಬಾಬು ಜಗಜೀವನ ರಾಮ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಭೀಮಣ್ಣ ಬಿಲ್ಲವ, ಮುಖಂಡರಾದ ಲಿಂಗರಾಜ ತಾರಫೈಲ್‌, ಗೋಪಾಲ ಕಟ್ಟಿಮನಿ, ಶಾಮ ನಾಟೀಕಾರ, ಹಣಮಂತ ಬಿರಾಳ, ದಶರಥ ಕಲಗುರ್ತಿ,ಅಂಬಾರಾಯ ಚಲಗೇರಿ ಹಾಗೂ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next