ಬೆಂಗಳೂರು: ನ್ಯಾ.ಸದಾಶಿವ ಆಯೋಗದ ವರದಿ ಅನ್ವಯ ಪರಿಶಿಷ್ಟ ಜಾತಿ ಒಳಮೀಸಲು ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ರಚನೆಗೊಂಡಿದ್ದ ಸಂಪುಟ ಉಪಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ.
ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹಾಗೂ ಉಪಸಮಿತಿ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಸಮಿತಿ ತನ್ನ ಶಿಫಾರಸುಗಳನ್ನೇ ಸರ್ಕಾರಕ್ಕೆ ಸಲ್ಲಿಸಿಲ್ಲ. ಬುಧವಾರದ ಸಂಪುಟ ಸಭೆಯಲ್ಲೂ ಆ ವಿಚಾರ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅದೇ ರೀತಿ ಪದವೀಧರ ಶಿಕ್ಷಕರಿಗೆ ಶೇ.33ರಿಂದ ಶೇ.40ರಷ್ಟು ಬಡ್ತಿ ನೀಡುವ ವಿಚಾರಕ್ಕೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಸೇವಾ ನಿಯಮ ತಿದ್ದುಪಡಿ ವಿಚಾರವೂ ಸಂಪುಟ ಸಭೆಯಲ್ಲಿ ಮಂಡನೆಯಾಗಿಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಸಭೆಗೆ ಹಾಜರಾದ ಸಚಿವರು
ಪಕ್ಷಾಂತರಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದ್ದ ಕ್ರೀಡಾ ಸಚಿವ ಎಂ.ಸಿ.ನಾರಾಯಣಗೌಡ, ಪಕ್ಷದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ವಸತಿ ಸಚಿವ ವಿ.ಸೋಮಣ್ಣ ಬುಧವಾರ ನಡೆದ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ಸದ್ಯಕ್ಕೆ ಇಬ್ಬರೂ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ಧಾರೆ. ಈ ಮಧ್ಯೆ ಸೋಮಣ್ಣ ಅವರು ಗುರುವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ.
Related Articles