ಬೆಂಗಳೂರು: ಸದಾ ರಾಜಕೀಯ ಜಂಜಾಟಗಳಲ್ಲಿ ಮುಳುಗಿರುವ ಕೇಂದ್ರ ಸಚಿವ ಸದಾನಂದ ಗೌಡ ಭಾನುವಾರ ಸಂಜೆ ಕೊಂಚ ಬಿಡುವು ಮಾಡಿಕೊಂಡು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತುಳು ಹಾಸ್ಯ ನಾಟಕ ವೀಕ್ಷಿಸಿದರು.
ಯಕ್ಷಗಾನ ಪ್ರೇಮಿ ಎ.ಪಿ.ಕಾರಂತ ಅವರು 60ರ ವಸಂತಕ್ಕೆ ಹೆಜ್ಜೆಯಿರಿಸಿದ ಅಂಗವಾಗಿ ಸಂಪಾಜೆ ರಂಗ ಸಂಗಮ ಅಭಿನಂದನಾ ಸಮಾರಂಭ ಹಮ್ಮಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ತುಳು ಚಿತ್ರನಟ ಉಮೇಶ್ ಮಿಜಾರು ಅವರ ತಂಡ “ಪಾಂಡುನ ಅಲಕ್ಕ ಪೋಂಡು’ ತುಳು ಹಾಸ್ಯ ನಾಟಕವನ್ನು ಪ್ರದರ್ಶಿಸಿತು.
ಅರ್ಧಗಂಟೆಗೂ ಹೆಚ್ಚುಕಾಲ ನಾಟಕ ವೀಕ್ಷಿಸಿದ ಸದಾನಂದಗೌಡ ಅವರು ಹಾಸ್ಯ ಸನ್ನಿವೇಶಗಳನ್ನು ನೋಡಿ ಆನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯವಷ್ಟೇ ಅಲ್ಲ. ದೇಶ, ವಿದೇಶಗಳ ನಾನಾ ಭಾಗಗಳಲ್ಲಿ ತುಳು ಸಂಘಟನೆಗಳಿದ್ದು, ಅವುಗಳು ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪಸರಿಸುವ ಕೆಲಸ ಮಾಡುತ್ತಿವೆ ಎಂದು ಪ್ರಶಂಸಿಸಿದರು.
ತುಳುನಾಡಿನ ಆಚಾರ-ವಿಚಾರಗಳಲ್ಲದೆ ಸಂಪ್ರದಾಯಗಳು ಕೂಡ ವಿಶೇಷತೆಗಳಿಂದ ಕೂಡಿವೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳಸುವ ಕಾರ್ಯಗಳು ಹೀಗೇ ನಡೆಯಲಿ ಎಂದು ಆಶಿಸಿದರು.
ಭಯೋತ್ಪಾದನೆ ಸಹಿಸಲಾಗದು: ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ಭಯೋತ್ಪಾದನೆ ಜತಗೆ ಭಯೋತ್ಪಾಧನೆಯ ಪೋಷಕರನ್ನು ಕೂಡ ಭಾರತ ಬೆಂಬಲಿಸುವುದಿಲ್ಲ. ಘಟನೆಯ ಬಗ್ಗೆ ಇಡಿ ದೇಶವೇ ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಎ.ಪಿ.ಕಾರಂತ ದಂಪತಿಯನ್ನು ಸನ್ಮಾನಿಸಲಾಯಿತು. ತುಳುವೆರೆ ಚಾವಡಿ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ರಾಜ್‌ಸಂಪಾಜೆ, ಹಿರಿಯ ಗಾಯಕ ಶಶಿಧರ್ ಕೋಟೆ, ಪಾಲಿಕೆ ಸದಸ್ಯ ರಾಜೇಂದ್ರಕುಮಾರ್, ಕೆ.ಪಿ.ಪುತ್ತುರಾಯ ಉಪಸ್ಥಿತರಿದ್ದರು.