ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯದ ಬಿಜೆಪಿ ಸಂಸದರೆಲ್ಲರೂ ಒಂದಾಗಿದ್ದೇವೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರ ಮನವೊಲಿಸಲಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಕುಡಿಯುವ ನೀರಿನ ಹಕ್ಕು ನಮ್ಮದಾಗಿದ್ದು, ಅದನ್ನು ಪಡೆದೇ ಸಿದ್ಧ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆಯಾಗದು. ಅವರಿಗೆ ಹಂಚಿಕೆಯಾಗುವ ನೀರಿನಲ್ಲೂ ವ್ಯತ್ಯಾಸ ವಾಗುವುದಿಲ್ಲ. ಸದ್ಯ ಪ್ರಕರಣವು ಕಾವೇರಿ ನದಿನೀರು ನಿರ್ವಹಣ ಮಂಡಳಿ ಮುಂದಿರುವುದರಿಂದ ಅಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸಲಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ಟೀಕೆ:
ಕಾಂಗ್ರೆಸ್ ಸದಸ್ಯರು ವಿನಾಕಾರಣ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ದೇಶದ ಅಭಿವೃದ್ಧಿ ಹಾಗೂ ಸಮಗ್ರತೆಗೆ ಪೂರಕವಾದ ಯೋಜನೆ ಮತ್ತು ಕಾಯ್ದೆಗಳ ಅನುಷ್ಠಾನ ಕಾಂಗ್ರೆಸ್ ಇಷ್ಟವಿಲ್ಲ. ಹೀಗಾಗಿ ಕಲಾಪ ನಡೆಯದಂತೆ ಮಾಡುತ್ತಿರುವ ಕಾಂಗ್ರೆಸ್ ಮುಂದೆ ದೊಡ್ಡ ನಷ್ಟ ಅನುಭವಿಸಲಿದೆ. ಕಾಂಗ್ರೆಸ್‌ನವರು ದೇಶದ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಪೆಗಾಸಸ್ ಕಾಂಗ್ರೆಸ್‌ನ ಟೂಲ್ ಕಿಟ್ ಪ್ರಕರಣದ ಮುಂದುವರಿದ ಭಾಗವಾಗಿದೆ. ಕಾಂಗ್ರೆಸ್ ಯಾವುದೇ ಚರ್ಚೆಗೂ ಬಾರದೆ ಹಿಟ್ ಆ್ಯಂಡ್ ರನ್ ಪಾಲಿಸಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.