Advertisement

ಬಜೆಟ್‌ನ ಕೆಲವು ಯೋಜನೆ ತ್ಯಾಗ ಅನಿವಾರ್ಯ

01:29 AM Apr 08, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ತಡೆ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ತೆರಿಗೆ ಆದಾಯ ಸಂಪೂರ್ಣ ಸ್ಥಗಿತವಾಗಿರುವುದರಿಂದ ಬಜೆಟ್‌ನಲ್ಲಿ ಘೋಷಿಸಿರುವ ಅನೇಕ ಕಾರ್ಯಕ್ರಮಗಳನ್ನು ಕೈಬಿಡುವುದು ಅನಿವಾರ್ಯವಾಗಿದೆ. ಸಂಪ ನ್ಮೂಲ ಕ್ರೋಢೀಕರಣಕ್ಕಾಗಿ ಟಾಸ್ಕ್ಪೋರ್ಸ್‌ ರಚನೆ ಬಗ್ಗೆ ಎ. 15ರ ಬಳಿಕ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಮುಂದುವರಿಕೆಯಾಗುತ್ತದೆ.

Advertisement

-ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಖಚಿತ ನುಡಿ. ರಾಜ್ಯದಲ್ಲಿ ಕೋವಿಡ್ 19ಸೋಂಕು ಪತ್ತೆ, ಸಾವು, ಶಂಕಿತರ ಸಂಖ್ಯೆ ಏರಿಕೆ, ಲಾಕ್‌ಡೌನ್‌ ಜಾರಿ ಸಂದರ್ಭ ಸೋಂಕು ತಡೆಗೆ ಕ್ರಮ ಕೈಗೊಳ್ಳುವ ಜತೆಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸುವತ್ತ ಗಮನ ಹರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನೊಂದೆಡೆ ಆರ್ಥಿಕತೆ ಸುಧಾರಣೆಗೆ ಒತ್ತು ನೀಡಲಾರಂಭಿಸಿದ್ದಾರೆ. ಸೋಂಕು ನಿಯಂತ್ರಣದ ಜತೆಗೆ ಜನಜೀವನವನ್ನು ಸಹಜ ಸ್ಥಿತಿಗೆ ತರಲು ಮತ್ತು ಆರ್ಥಿಕ ಪ್ರಗತಿ ನಿಟ್ಟಿನಲ್ಲಿ ಕೈಗೊಳ್ಳಲಿರುವ ಪ್ರಯತ್ನಗಳ ಬಗ್ಗೆ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ತಲೆದೋರಿರುವ ಕೋವಿಡ್ 19 ಸೋಂಕಿನ ಸದ್ಯದ ಸ್ಥಿತಿಗತಿ ಏನು?
ಕೋವಿಡ್ 19ಸೋಂಕಿನ ತೀವ್ರತೆಗೆ ಸಂಬಂಧಪಟ್ಟಂತೆ ಕರ್ನಾಟಕ ದೇಶದಲ್ಲಿ 10ನೇ ಸ್ಥಾನದಲ್ಲಿದೆ. ಇದು ತೃಪ್ತಿಕರವೇನೂ ಅಲ್ಲ. ಆದರೆ 19 ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಳ್ಳದಿರುವುದು ಸಮಾಧಾನಕರ ಸಂಗತಿ. ಅದು ವ್ಯಾಪಕವಾಗಿ ಹರಡದಂತೆ ತಡೆಯಲು ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳುವ ಜತೆಗೆ ಜನರಿಗೆ ವಿನಂತಿಯ ಮೂಲಕವೇ ಮನವರಿಕೆ ಮಾಡಿಕೊಡುವ ಪ್ರಯತ್ನ ಮುಂದುವರಿಸಲಾಗುತ್ತಿದೆ.

– ಎ. 14ರ ಬಳಿಕ ಲಾಕ್‌ಡೌನ್‌ ಮುಕ್ತಾಯವಾಗುವುದೇ?
ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯದ ಜನ ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಅದರ ಅಂತ್ಯ ಯಾ ಮುಂದುವರಿಕೆ ಅವಲಂಬಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸಮಸ್ಯೆ ಕಾಣಿಸಿಕೊಳ್ಳದ ಜಿಲ್ಲೆಗಳಲ್ಲಿ ಜನ ಆಯಾ ಜಿಲ್ಲಾ ವ್ಯಾಪ್ತಿಯೊಳಗೆ ಓಡಾಡಲು ಅವಕಾಶ ಮಾಡಿಕೊಡುವ ಬಗ್ಗೆ ಚಿಂತಿಸಲಾಗಿದೆ. ಉಳಿದೆಡೆ ಜನರು ಹೇಗೆ ಸ್ಪಂದಿಸಿದ್ದಾರೆ ಎಂಬುದರ ಮೇಲೆ ನಿರ್ಧಾರ ತಳೆಯಲಾಗುತ್ತದೆ.

– ಕೆಲವೆಡೆ ಲಾಕ್‌ಡೌನ್‌ ಮುಂದುವರಿಕೆ ಖಚಿತವೇ?
ಈಗಿರುವ ಪರಿಸ್ಥಿತಿಯಲ್ಲಿ ಯಾವ ಜಿಲ್ಲೆಯಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲನೆಯಾಗಿಲ್ಲವೋ ಅಂತಹ ಕಡೆ ತೆರವು ಮಾಡಲು ಪ್ರಧಾನಿಯವರು ಒಪ್ಪುವುದಿಲ್ಲ. ಹಾಗಾಗಿ ಮುಂದುವರಿಕೆ ಅನಿವಾರ್ಯವಾಗಲಿದೆ. ಅದು ಬೇಗ ಮುಗಿಯಬೇಕು ಎಂದು ಬಯಸುವ ಜನ ಮನೆಯಿಂದ ಹೊರಗೆ ಬರದೆ ಸಹಕರಿಸಬೇಕು. ಈ ಸೋಂಕು ತಡೆಗೆ ಔಷಧವಿಲ್ಲ. ಹೊರಗೆ ಬಾರದಿರುವುದು, ಸಾಮಾಜಿಕ ಅಂತರ ಕಾಯ್ದಕೊಳ್ಳುವುದೊಂದೇ ಪರಿಹಾರ. ಹಾಗಾಗಿ ಎಲ್ಲರೂ ಇದಕ್ಕೆ ಸಹಕರಿಸಬೇಕು. ಲಾಕ್‌ಡೌನ್‌ ಕೊನೆ ಅಥವಾ ಮುಂದುವರಿಕೆ ಎರಡೂ ಜನರ ಕೈಯಲ್ಲಿದೆ. ಹಾಗಾಗಿ ಜನರಲ್ಲಿ ಕೈಜೋಡಿಸಿ ಮನವಿ ಮಾಡುತ್ತೇನೆ, ಎಲ್ಲರೂ ಮನೆಯಲ್ಲಿದ್ದು ಸಹಕರಿಸಬೇಕು.

Advertisement

– ಹಲವೆಡೆ ಸಾರ್ವಜನಿಕರು ಅನಗತ್ಯವಾಗಿ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆಯೇ?
ಬೆಳಗ್ಗೆ ತರಕಾರಿ, ಹಣ್ಣು ಹಂಪಲು ತೆಗೆದುಕೊಂಡು ಹೋಗುವುದನ್ನು ಬಿಟ್ಟು ಕೆಲವರು ಅನಗತ್ಯವಾಗಿ ತಿರುಗಾಡು ತ್ತಿದ್ದಾರೆ. ಶೇ. 20ರಷ್ಟು ಮಂದಿ ಹೀಗೆ ಮಾಡುತ್ತಿರುವುದು ಕಂಡುಬಂದಿದೆ. ಬೆಂಗಳೂರು ನಗರವೊಂದರಲ್ಲೇ 15,000ಕ್ಕೂ ಹೆಚ್ಚು ವಾಹನ ಜಪ್ತಿ ಮಾಡಲಾಗಿದೆ. ಹಲವರ ಬಂಧನವಾಗಿದ್ದರೆ, ಕೆಲವರ ಮೇಲೆ ಎಫ್‌ಐಆರ್‌ ಹಾಕಲಾಗಿದೆ. ಅಮೆರಿಕ, ಫ್ರಾನ್ಸ್‌, ಇಟಲಿ ಜರ್ಮನಿ, ಇಂಗ್ಲೆಂಡ್‌ನ‌ಂತಹ ರಾಷ್ಟ್ರಗಳೇ ಕೋವಿಡ್ 19 ಸೋಂಕಿಗೆ ತಲ್ಲಣಗೊಂಡಿವೆ. ಇಂಥ ಸಂದರ್ಭದಲ್ಲಿ ನಮ್ಮವರು ಸಹಕಾರ ಕೊಟ್ಟರೆ ಮಾತ್ರ ನಿಯಂತ್ರಣ ಸಾಧ್ಯ.

– ತೆರಿಗೆ ಆದಾಯವೇ ಸಂಗ್ರಹವಾಗದಿರುವುದರಿಂದ ಬಜೆಟ್‌ ಘೋಷಿತ ಕಾರ್ಯಕ್ರಮಗಳಿಗೆ ಕೊಕ್‌ ಸಿಗುವುದೇ?
ಐಟಿ,ಬಿಟಿ ಮಾತ್ರವಲ್ಲದೆ, ಎಲ್ಲ ತೆರಿಗೆ ಮೂಲದ ಆದಾಯ ನಿಂತು ಹೋಗಿದೆ. ಹಾಗಾಗಿ ಏನೂ ಮಾಡಲು ಬರುವುದಿಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಅನೇಕ ಕಾರ್ಯಕ್ರಮಗಳನ್ನು ಕೈಬಿಡಬೇಕಾಗುತ್ತದೆ. ಹಣಕಾಸಿನ ಇತಿಮಿತಿಯೊಳಗೆ ಯಾವುದನ್ನು ಕಾರ್ಯಗತಗೊಳಿಸಲು ಸಾಧ್ಯವಿದೆಯೇ ಅವನ್ನು ಮಾತ್ರ ಜಾರಿಗೊಳಿಸಲಾಗುವುದು. ಉಳಿದವನ್ನು ಮುಂದೂಡಲಾಗುವುದು. ಎ. 15ರ ಅನಂತರ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.

– ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಿರಾ?
ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಮೂಲಕ ಆಡಳಿತ ವೆಚ್ಚ ಇಳಿಕೆ ಮಾಡಬೇಕೆಂಬ ಚಿಂತನೆ ಇದೆ. ಈ ಬಗ್ಗೆ ಎ. 15ರ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.

– ಲಾಕ್‌ಡೌನ್‌ ಮುಂದುವರಿದರೆ ಸರಕಾರಿ ನೌಕರರ ವೇತನ ಕಡಿತದ ಬಗ್ಗೆ ಚಿಂತನೆ ನಡೆದಿದೆಯೇ?
ಈ ಬಗ್ಗೆ ಎ. 14ರ ಬಳಿಕ ಪರಿಶೀಲಿಸಲಾಗುವುದು. ರಾಜ್ಯದ ಹಣಕಾಸಿನ ಸ್ಥಿತಿಗತಿ ಮನದಲ್ಲಿಟ್ಟುಕೊಂಡು ಈ ಬಗ್ಗೆ ತೀರ್ಮಾನಿಸಲಾಗುವುದು. ಕೇಂದ್ರದಲ್ಲೂ ಹಣಕಾಸಿನ ಸ್ಥಿತಿ ಚೆನ್ನಾಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿಯೂ ಸರಿ ಇಲ್ಲ. ಈ ಸಂದರ್ಭದಲ್ಲಿ ಪಿಂಚಣಿ, ಪಡಿತರ ಎಲ್ಲವನ್ನೂ ನೀಡಬೇಕು. ಈ ಮಧ್ಯೆ ಏನೆಲ್ಲ ಸಾಧ್ಯವಿದೆಯೋ ಎಂಬುದನ್ನು ಸ್ಥಿತಿಗತಿ ನೋಡಿಕೊಂಡು ತೀರ್ಮಾನಿಸಲಾಗುವುದು.

– ಸರಕಾರಿ ನೌಕರರಿಗೆ ರಜೆ ಕಡಿತ ಇಲ್ಲವೇ ಹೆಚ್ಚು ಅವಧಿ ದುಡಿಮೆ ಬಗ್ಗೆ ಚಿಂತನೆ ನಡೆದಿದೆಯೇ?
ಸದ್ಯಕ್ಕೆ ಕೋವಿಡ್ 19 ಸೋಂಕು ಹರಡದಂತೆ ತಡೆಯುವು ದಕ್ಕೆ ಮೊದಲ ಆದ್ಯತೆ. ಇದೆಲ್ಲ ಒಂದು ಹಂತಕ್ಕೆ ಬಂದ ಬಳಿಕ ಮುಂದಿನ ಕ್ರಮಗಳ ಬಗ್ಗೆ ಚಿಂತಿಸಲಾಗುವುದು. ಇನ್ನೊಂದೆಡೆ ಡಿಸಿ, ಎಸ್‌ಪಿಗಳು ಹಗಲು- ರಾತ್ರಿ ಕೆಲಸ ಮಾಡುತ್ತಿದ್ದು, ಅವರಿಂದಾಗಿ ಗೌರವ ಬಂದಿದೆ. ಅವರಿಗೆ ಹೇಗೆ ಅಭಿನಂದನೆ ಸಲ್ಲಿಸಬೇಕೋ ಗೊತ್ತಾಗುತ್ತಿಲ್ಲ.

– ಕೇಂದ್ರ ಸರಕಾರದಿಂದ 11,000 ಕೋಟಿ ರೂ. ಅನುದಾನ ಖೋತಾ, ಕೋವಿಡ್ 19 ನಿಯಂತ್ರಣಕ್ಕೆ ಎಸ್‌ಡಿಆರ್‌ಎಫ್‌ ಹಣ ಬಳಕೆಯಿಂದ ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ ಉಂಟಾಗುವುದಿಲ್ಲವೇ?
ಈಗ ಆ ಬಗ್ಗೆ ಚರ್ಚೆ ಅಗತ್ಯವಿಲ್ಲ. ಕೇಂದ್ರ ಸರಕಾರ ಸಾಧ್ಯವಿರುವಷ್ಟು ಸಹಾಯ ಮಾಡಿದೆ. ಕೇಂದ್ರದ ಆರ್ಥಿಕ ಸ್ಥಿತಿಯೇ ಸರಿ ಇಲ್ಲ ಎಂದಾಗ ಆ ಬಗ್ಗೆ ಚರ್ಚೆ ಮಾಡಲು ನಾನು ಇಷ್ಟಪಡುವುದಿಲ್ಲ. ನಮ್ಮ ಮಟ್ಟದಲ್ಲಿ ಏನೆಲ್ಲ ಸಾಧ್ಯವಿದೆಯೋ ಆ ಬಗ್ಗೆ ಚರ್ಚಿಸಿ ಸುಧಾರಣೆ ತರಲು ಪ್ರಯತ್ನಿಸುತ್ತೇವೆ. ಎಸ್‌ಡಿಆರ್‌ಎಫ್‌ ಹಣ ಬಳಸಲು ಸೂಚಿಸಿದ್ದಾರೆ. ಮುಂದೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತಾರೆ.

– ಕೋವಿಡ್ 19 ನಿಯಂತ್ರಣ ಪರಿಸ್ಥಿತಿಯಲ್ಲಿ ಸಚಿವರ ಕಾರ್ಯವೈಖರಿ ತೃಪ್ತಿ ತಂದಿದೆಯೇ?
ಎಲ್ಲ ಸಚಿವರು, ಶಾಸಕರು ತಮ್ಮ ಕ್ಷೇತ್ರ, ಜಿಲ್ಲೆಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನಾಲ್ಕೈದು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕವಾಗಬೇಕಿದ್ದು, ತತ್‌ಕ್ಷಣವೇ ನೇಮಿಸಲಾಗುವುದು. ಸಚಿವರು ತಮ್ಮ ಕ್ಷೇತ್ರಗಳಲ್ಲಿ ಇದ್ದು ಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ.  ಬೆಂಗಳೂರಿನ ಸಚಿವರೊಂದಿಗೂ ಸಭೆ ನಡೆಸಲಾಗಿದ್ದು, ಉತ್ತಮ ರೀತಿ ಯಲ್ಲಿ ಜನರಿಗೆ ಸ್ಪಂದಿಸುತ್ತಿದ್ದಾರೆ.

ಸಂಪನ್ಮೂಲ ಕ್ರೋಡೀಕರಣಕ್ಕೆ ಪ್ರತ್ಯೇಕ ಟಾಸ್ಕ್ಫೋರ್ಸ್‌ ರಚಿಸುವ ಚಿಂತನೆ ಇದೆಯೇ?
ರಾಜ್ಯದ ಸ್ವಂತ ಆದಾಯ ಮೂಲಗಳಾದ ಸಾರಿಗೆ, ಅಬಕಾರಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ಯಾವುದೇ ತೆರಿಗೆ ಆದಾಯ ಸಂಗ್ರಹವಾಗುತ್ತಿಲ್ಲ. ಎಲ್ಲವೂ ನಿಂತು ಹೋಗಿದೆ. ಹಾಗಾಗಿ ಸಂಪನ್ಮೂಲ ಕ್ರೋಡೀಕರಣಕ್ಕೆ ಟಾಸ್ಕ್ಪೋರ್ಸ್‌ ರಚನೆ, ಇತರ ಯಾವ ಪ್ರಯತ್ನ ಕೈಗೊಳ್ಳಬೇಕು ಎಂಬ ಬಗ್ಗೆ ಎ. 15ರ ಬಳಿಕ ಹಣಕಾಸು ಇಲಾಖೆ ಅಧಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.

ರೈತರ ಹಿತ ರಕ್ಷಣೆಗೆ ಯಾವ ಕ್ರಮ?
ರೈತರು ಬೆಳೆದ ತರಕಾರಿ, ಹಣ್ಣು ಹಂಪಲು ಖರೀದಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಹಾಪ್‌ಕಾಮ್ಸ್‌ ಮೂಲಕವೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಲೆ ಕುಸಿದಿದ್ದರೆ ನಷ್ಟವಾದರೂ ಖರೀದಿಸುವಂತೆ ಕೃಷಿ ಇಲಾಖೆ ಅ ಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಬಿತ್ತನೆ ಕಾರ್ಯಕ್ಕೆ ಅನುಕೂಲವಾಗುವಂತೆ ಅಗತ್ಯ ಪ್ರಮಾಣದಲ್ಲಿ ಬೀಜ, ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತಮ ಮಳೆಯಾದರೆ ದೊಡ್ಡ ಸಮಸ್ಯೆ ನಿವಾರಣೆಯಾಗಲಿದೆ.

ಜನರ ಮಧ್ಯೆ ಇರಲು ಬಯಸುವ ತಾವು ಲಾಕ್‌ಡೌನ್‌ ಏನು ಹೇಳುವಿರಿ?
ಜೀವನದಲ್ಲಿ ಮೊದಲ ಬಾರಿಗೆ ಈ ಪರಿಸ್ಥಿತಿ ಎದುರಾಗಿದೆ. ನನಗೆ ಮಾತ್ರವಲ್ಲದೆ, ದೇಶದ ಜನರಿಗೂ ಇದು ಹೊಸದು. ಯಾರೂ ಕಲ್ಪಿಸಿ
ಕೊಳ್ಳಲಾಗದ ಸ್ಥಿತಿ ಇದು. ಬೆಂಗಳೂರಿನಲ್ಲಿದ್ದೇ ಕೆಲಸ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಹಾಗೆಯೇ ಸಚಿವರು, ಶಾಸಕರೊಂದಿಗೆ ನಿರಂತರವಾಗಿ ಚರ್ಚಿಸಿ ಅವರು ಕ್ರಿಯಾಶೀಲ ವಾಗಿರುವಂತೆ ನೋಡಿಕೊಳ್ಳುವುದು ದೊಡ್ಡ ಜವಾಬ್ದಾರಿ. ಆ ಕೆಲಸ ಮಾಡಿದ್ದೇನೆ.

- ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next