ಬೆಂಗಳೂರು: ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ಸುತ್ತೋಲೆ ಹೊರಡಿಸಿ ವ್ಯಕ್ತಿ, ಸಮಾಜದ ಹಕ್ಕಿಗೆ ಧಕ್ಕೆ ತಂದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಈ ಕುರಿತು ಕುಲಸಚಿವರಿಗೆ ಪತ್ರ ಬರೆದ ಇನ್‌ಸ್ಪೆಕ್ಟರ್ ವಜಾ ಮಾಡಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಇವರಿಬ್ಬರನ್ನೂ ಸೇವೆಯಿಂದ ವಜಾ ಮಾಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಎಚ್ಚರಿಸಿದರು.ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಕಂಟಕ ಆಗಬಹುದು. ಸಮಸ್ಯೆ ನಿರ್ಮಾಣ ಆಗಬಹುದು.
ಸಮಾಜ ವಿರೋಧಿಗಳು, ಪ್ರಚೋದಕರ ಜತೆಗೆ ಕೈಜೋಡಿಸಿ ಸಮಸ್ಯೆ ನಿರ್ಮಾಣ ಆಗಬಹುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ತುಮಕೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ಬರೆದ ಪತ್ರಕ್ಕೆ ಸ್ವಾಯತ್ತತೆ ಇರುವ ವಿಶ್ವವಿದ್ಯಾಲಯದ ಕುಲಸಚಿವರು ಸುತ್ತೋಲೆ ಹೇಗೆ ಹೊರಡಿಸಿದರು. ಇನ್‌ಸ್ಪೆಕ್ಟರ್ ಹೇಳಿದರೆ ಬರೆದು ಬಿಡುತ್ತಾರಾ, ಇನ್‌ಸ್ಪೆಕ್ಟರ್ ಎಂದರೆ ಜಿಲ್ಲಾಡಳಿತವೇ, ಅವರ ವ್ಯಾಪ್ತಿ ಏನು ಎಂದು ಪ್ರಶ್ನಿಸಿದರಲ್ಲದೆ, ಇಂತಹ ಕುಲಸಚಿವರು, ಉಪ ಕುಲಪತಿಗಳನ್ನು ಎಲ್ಲಿಂದ ಹುಡುಕಿ ತಂದಿದ್ದಾರೋ ಗೊತ್ತಿಲ್ಲ ಎಂದು ಟೀಕಿಸಿದರು.
ಕಾನೂನು ಬಾಹಿರ ಶಕ್ತಿಗಳು ಮೆರವಣಿಗೆಯಲ್ಲಿ ಬರುವುದಾದರೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕಿತ್ತು. ಆದರೆ ತುಷ್ಟೀಕರಣಕ್ಕಾಗಿ ಅಂತಹವರನ್ನು ಅರೆಸ್ಟ್ ಮಾಡುವುದಿಲ್ಲ ಎಂದು ಅವರು ಆಕ್ಷೇಪಿಸಿದರು.
ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್, ರಾಜ್ಯ ವಕ್ತಾರ ಮೋಹನ್ ವಿಶ್ವ ಇದ್ದರು.
“ಕಿಯೋನಿಕ್ಸ್‌ನಲ್ಲಿ ಅಕ್ರಮ
ಆಗಿದ್ದರೆ ತನಿಖೆ ಮಾಡಲಿ’
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ ಆರೋಪದಲ್ಲಿ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಟಾರ್ಗೆಟ್ ಮಾಡಿರುವ ವಿಚಾರದ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು,, ಕಿಯೋನಿಕ್ಸ್ ಒಂದು ನಿಗಮ, ಅದಕ್ಕೂ ನನಗೂ ಸಂಬಂಧ ಇಲ್ಲ. ಕಿಯೋನಿಕ್ಸ್‌ನಲ್ಲಿ ಅಕ್ರಮ ಆಗಿದ್ದರೆ ತನಿಖೆ ಮಾಡಲಿ. ತಪ್ಪು ಮಾಡಿದ್ದರೆ ಹೆದರಬೇಕು. ನಾನು ಯಾಕೆ ಹೆದರಲಿ. ನಾನು ತಪ್ಪು ಮಾಡಲಿಲ್ಲ. ಅದಕ್ಕೆ ನಾನು ಸಹಿಯನ್ನೇ ಹಾಕಿಲ್ಲ. ಇದರಲ್ಲಿ ನನ್ನ ಹೆಸರು ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದರು.