Advertisement

ಪೆಂಡೋರಾ ತನಿಖಾ ವರದಿ:ಅನಿಲ್‌ ಹೆಸರಲ್ಲಿ 9,600 ಕೋ.ರೂ. ಆಸ್ತಿ, ತೆಂಡೂಲ್ಕರ್‌ ಗೌಪ್ಯ ಕಂಪೆನಿ

11:10 AM Oct 05, 2021 | Team Udayavani |

ಹೊಸದಿಲ್ಲಿ: ನಾನಾ ದೇಶಗಳ ಸಿರಿವಂತರ ಮುಚ್ಚಿಟ್ಟ ಆದಾಯಗಳನ್ನು, ಆಸ್ತಿಪಾಸ್ತಿಗಳ ಮಾಹಿತಿಯನ್ನು 2016ರಲ್ಲಿ ಪನಾಮಾ ಪೇಪರ್ಸ್‌ ಬಹಿರಂಗಗೊಳಿಸಿದ ಮಾದರಿಯಲ್ಲೇ, ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದ (ಐಸಿಐಜೆ) ತನಿಖಾ ವರದಿಯೊಂದು (ಪಂಡೋರಾ ತನಿಖಾ ವರದಿ) ಹಲವು ದೇಶಗಳ ಮುಖ್ಯಸ್ಥರು, ಭಾರತೀಯ ಉದ್ಯಮಿಗಳು, ಕ್ರೀಡಾಪಟುಗಳು ತೆರಿಗೆ ರಹಿತ ರಾಷ್ಟ್ರಗಳಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಬಯಲಿಗೆ ಎಳೆದಿದೆ.

Advertisement

ಭಾರತದ ಉದ್ಯಮಿ ಅನಿಲ್‌ ಅಂಬಾನಿ, ಬಾಲಿವುಡ್‌ ನಟ ಜಾಕಿಶ್ರಾಫ್, ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಪತಿ ಜಾನ್‌ ಶಾ, ಗಾಂಧಿ ಕುಟುಂಬದ ನಿಕಟವರ್ತಿ ಕ್ಯಾಪ್ಟನ್‌ ಸತೀಶ್‌ ಶರ್ಮಾ, ಇಕ್ಬಾಲ್‌ ಮಿರ್ಚಿ ಸೇರಿದಂತೆ 300 ಮಂದಿ ಭಾರತದ ಉದ್ಯಮಿಗಳು, ಆರು ಪ್ರಮುಖ ರಾಜಕೀಯ ವ್ಯಕ್ತಿಗಳು ಇಂಥ ಹೂಡಿಕೆಗಳನ್ನು ಮಾಡಿದ್ದಾರೆಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಕುರಿತು ತನಿಖೆ ನಡೆಸುವುದಾಗಿ ಕೇಂದ್ರ ಸರಕಾರ ಸೋಮವಾರ ತಿಳಿಸಿದೆ.

ಇಷ್ಟೇ ಅಲ್ಲ, ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಸಂಬಂಧಿಕರು, ಸಚಿವ ಸಂಪುಟದಲ್ಲಿರುವ ಕೆಲವು ಸಚಿವರು ಸೇರಿದಂತೆ 700 ಮಂದಿ ಆ ದೇಶದ ಪ್ರಜೆಗಳ ಹೆಸರುಗಳ ವಿವರಗಳೂ ಇವೆ. ಮೊನ್ಯಾಕೋದಲ್ಲಿ ರಷ್ಯಾ ಅಧ್ಯಕ್ಷ ಪುತಿನ್‌ ತಮ್ಮ ಗರ್ಲ್ಫ್ರೆಂಡ್‌ ಹೆಸರಲ್ಲಿ ಮಾಡಿರುವ 743 ಕೋಟಿ ರೂ. ಆಸ್ತಿ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಅನಿಲ್‌ ಹೆಸರಲ್ಲಿ 9,600 ಕೋ.ರೂ. ಆಸ್ತಿ!: ಕೋರ್ಟ್‌ಗಳ ಮುಂದೆ ದಿವಾಳಿ ಎಂದು ಘೋಷಿಸಿಕೊಂಡಿರುವ ಉದ್ಯಮಿ ಅನಿಲ್‌ ಅಂಬಾನಿ ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ 18 ಆಸ್ತಿ ಹೊಂದಿದ್ದಾರೆ. ಈ ಆಸ್ತಿಯ ಮೊತ್ತ ಅಂದಾಜು 9,600 ಕೋಟಿ ರೂ.ಗಳಷ್ಟಿದೆ. ಈ ವಿವರಗಳನ್ನು ಅವರು ಈವರೆಗೆ ಎಲ್ಲೂ ಘೋಷಿಸಿಕೊಂಡಿಲ್ಲ ಎಂದು ಪಂಡೋರಾ ದಾಖಲೆಗಳಲ್ಲಿ ಉಲ್ಲೇಖೀಸಲಾಗಿದೆ. ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ ವಂಚಿಸಿದ ನೀರವ್‌ ಮೋದಿಯ ಸಹೋದರಿ ಪೂರ್ವಿ ಮೋದಿ, ದೇಶ ಬಿಟ್ಟು ಪರಾರಿಯಾಗುವ ಮುನ್ನ ಒಂದು ಟ್ರಸ್ಟ್‌ ರಚಿಸಿದ್ದಳು ಎಂದೂ ಹೇಳಲಾಗಿದೆ.

ಇದನ್ನೂ ಓದಿ:ಐವಿಎಫ್ ಮೂಲಕ 6 ಕರು ಸೃಷ್ಟಿ! ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ವೈಜ್ಞಾನಿಕ ಪ್ರಯೋಗ ಯಶಸ್ವಿ

Advertisement

ತೆಂಡೂಲ್ಕರ್‌ ಗೌಪ್ಯ ಕಂಪೆನಿ:  ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಪತ್ನಿ ಅಂಜಲಿ ತೆಂಡೂಲ್ಕರ್‌, ಮಾವ ಆನಂದ್‌ ಮೆಹ್ರಾ ಹೆಸರಿನಲ್ಲಿ ಬ್ರಿಟಿಷ್‌ ವರ್ಜಿನ್‌ ದ್ವೀಪಗಳಲ್ಲಿ 2016ರಲ್ಲಿ ಸಾಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಎಂಬ ಕಂಪೆನಿ ಶುರು ಮಾಡಿದ್ದರು. ನಂತರ ಅದನ್ನು ದಿವಾಳಿ ಎಂದು ಘೋಷಿಸಿಕೊಳ್ಳಲಾಯಿತು.  ಫೆಬ್ರವರಿಯಲ್ಲಿ ನಿಧನರಾಗಿದ್ದ ಕೇಂದ್ರದ ಮಾಜಿ ಸಚಿವ, ಗಾಂಧಿ ಕುಟುಂಬದ ನಿಕಟವರ್ತಿ ಕ್ಯಾ| ಸತೀಶ್‌ ಶರ್ಮಾ ಮತ್ತು ಅವರ ಕುಟುಂಬದ ಹತ್ತು ಮಂದಿ ಸದಸ್ಯರು ಜಾನೆ ಝೆಗರ್ಸ್‌ ಟ್ರಸ್ಟ್‌  ರಚಿಸಿದ್ದರು ಎಂದು  ತಿಳಿಸಲಾಗಿದೆ.

ಪ್ರಮುಖ ಭಾರತೀಯರು
ಇಕ್ಬಾಲ್‌ ಮಿರ್ಚಿ, ಅನಿಲ್‌ ಅಂಬಾನಿ, ಜಾಕಿಶ್ರಾಫ್, ವಿನೋದ್‌ ಅದಾನಿ, ಜಾನ್‌ ಶಾ ನೀರಾ ರಾಡಿಯಾ, ಸಮೀರ್‌ ಥಾಪರ್‌, ಅಜಿತ್‌ ಕೇರ್ಕರ್‌, ಪೂರ್ವಿ ಮೋದಿ, ಕ್ಯಾ|ಸತೀಶ್‌ ಶರ್ಮಾ, ಸಚಿನ್‌ ತೆಂಡೂಲ್ಕರ್‌

ಪಂಡೋರಾ ಪೇಪರ್ಸ್‌ನಲ್ಲಿ ನನ್ನ ಪತಿಯ ಹೆಸರು ಉಲ್ಲೇಖವಾಗಿರುವುದು, ಅವರು ವಿದೇಶದಲ್ಲಿ ಹೊಂದಿರುವ ಟ್ರಸ್ಟ್‌ ಬಗ್ಗೆ ಉಲ್ಲೇಖೀಸಿರುವ ಅಂಶ ಸರಿಯಾಗಿಲ್ಲ. ಅವರು ಹೊಂದಿ ರುವ ಸಂಸ್ಥೆಯ ಎಲ್ಲ ವ್ಯವಹಾರ ಗಳು ಕಾನೂನುಬದ್ಧವಾಗಿವೆ.
-ಕಿರಣ್‌ ಮಜುಂದಾರ್‌ ಶಾ, ಬಯೋಕಾನ್‌ ಸಂಸ್ಥಾಪಕಿ

ನನ್ನ ಕಕ್ಷಿದಾರರು ಮಾಡಿರುವ ಹೂಡಿಕೆ ಕಾನೂನುಬದ್ಧವಾಗಿದೆ. ದೇಶದ ತೆರಿಗೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.
-ಸಚಿನ್‌ ತೆಂಡೂಲ್ಕರ್‌ ಪರ ನ್ಯಾಯವಾದಿ

Advertisement

Udayavani is now on Telegram. Click here to join our channel and stay updated with the latest news.

Next